ಅಗಸ್ಟಾವೆಸ್ಟ್‌ಲ್ಯಾಂಡ್ ಹಗರಣ: 5 ಅಧಿಕಾರಿಗಳ ವಿಚಾರಣೆಗೆ ಅನುಮತಿ ಕೋರಿದ ಸಿಬಿಐ

0

ನವದೆಹಲಿ, ಸೆಪ್ಟೆಂಬರ್ 11: ಅತಿಗಣ್ಯರ ಐಷಾರಾಮಿ ಹೆಲಿಕಾಪ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ರಕ್ಷಣಾ ಕಾರ್ಯದರ್ಶಿ ಮತ್ತು ಮಾಜಿ ಲೆಕ್ಕಪರಿಶೋಧಕ ನಿಯಂತ್ರಕ ಅಧಿಕಾರಿ ಶಶಿ ಕಾಂತ್ ಶರ್ಮಾ ಹಾಗೂ ಇತರೆ ನಾಲ್ವರನ್ನು ವಿಚಾರಣೆ ನಡೆಸಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರವನ್ನು ಸಿಬಿಐ ಕೋರಿದೆ.

ಸುಮಾರು 3,600 ಕೋಟಿ ರೂ. ಮೊತ್ತದ ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಹಗರಣದಲ್ಲಿ ಶರ್ಮಾ ಅವರಲ್ಲದೆ, ಮಾಜಿ ಏರ್ ವೈಸ್ ಮಾರ್ಷಲ್ ಜಸ್ಬೀರ್ ಸಿಂಗ್ ಪಣೇಸರ್ ಅವರನ್ನು ಕೂಡ ವಿಚಾರಣೆ ನಡೆಸಲು ಸಿಬಿಐ ಅನುಮತಿ ಕೇಳಿದೆ. ಇದರ ಜತೆಗೆ ಐಎಎಫ್ ಅಧಿಕಾರಿಗಳಾದ ಡೆಪ್ಯುಟಿ ಚೀಫ್ ಟೆಸ್ಟ್ ಪೈಲಟ್ ಎಸ್‌.ಎ, ಕುಂಟೆ, ವಿಂಗ್ ಕಮಾಂಡರ್ ಥಾಮಸ್ ಮ್ಯಾಥ್ಯೂ ಹಾಗೂ ಎಕ್ಸ್ ಗ್ರೂಪ್ ಕ್ಯಾಪ್ಟನ್ ಎನ್. ಸಂತೋಷ್ ಅವರನ್ನು ವಿಚಾರಣೆಗೊಳಪಡಿಸಲು ಬಯಸಿದೆ.

ಯುಪಿಎ-2ರ ಅವಧಿಯಲ್ಲಿ ನಡೆದ ವಿವಿಐಪಿ ಹೆಲಿಕಾಪ್ಟರ್ ಒಪ್ಪಂದದಲ್ಲಿ ಖರೀದಿ ಪ್ರಕ್ರಿಯೆಯಲ್ಲಿ ಈ ಐವರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದರು ಮತ್ತು ಸಕ್ರಿಯವಾಗಿ ಭಾಗಿಯಾಗಿದ್ದರು ಎಂದು ಸಿಬಿಐ ಹೇಳಿದೆ. ಈ ಐವರು ಅಧಿಕಾರಿಗಳು ಮಾಡಿದ ಅವ್ಯವಹಾರದ ಕುರಿತು ಅಗತ್ಯ ಪುರಾವೆಗಳನ್ನು ರಕ್ಷಣಾ ಸಚಿವಾಲಯಕ್ಕೆ ಸಿಬಿಐ ಸಲ್ಲಿಸಿದೆ. ವಿಚಾರಣೆಗೆ ಅನುಮತಿ ಇನ್ನೂ ದೊರೆತಿಲ್ಲ ಎಂದು ‘ದಿ ಎಕನಾಮಿಕ್ ಟೈಮ್ಸ್’ ವರದಿ ಮಾಡಿದೆ.

ರಕ್ಷಣಾ ಸಚಿವಾಲಯ ಮತ್ತು ಸಿಬ್ಬಂದಿ ಹಾಗೂ ತರಬೇತಿ ಇಲಾಖೆಯಿಂದ ವಿಚಾರಣೆಯ ಅನುಮತಿ ದೊರಕಿದ ಅಥವಾ ನಿರಾಕರಣೆಯಾದ ಬಳಿಕ ಪೂರಕ ದೋಷಾರೋಪ ಪಟ್ಟಿಯನ್ನು ತನಿಖಾ ಸಂಸ್ಥೆ ಸಲ್ಲಿಸುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here