ಹಾಥರಸ್ ಜಿಲ್ಲೆಯಲ್ಲಿ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಕಾವು ತಿಳಿಯಾಗುವ ಮೊದಲೇ, ಸಂಬಂಧಿಯಿಂದಲೇ ಅತ್ಯಾಚಾರಕ್ಕೆ ಒಳಗಾಗಿದ್ದ ಅದೇ ಜಿಲ್ಲೆಯ ಆರು ವರ್ಷದ ಬಾಲಕಿಯೊಬ್ಬಳು ಚಿಕಿತ್ಸೆಗೆ ಸ್ಪಂದಿಸದೆ ದೆಹಲಿಯ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾಳೆ.
‘ಅಲೀಗಡ ಜಿಲ್ಲೆಯ ಇಗ್ಲಾಸ್ ಪ್ರದೇಶದಲ್ಲಿ ಇರುವ ಸಂಬಂಧಿಯೊಬ್ಬರ ಮನೆಯಲ್ಲೇ ಬಾಲಕಿಯನ್ನು ಕೂಡಿಹಾಕಲಾಗಿತ್ತು. ಆಕೆಯನ್ನು ಸೆ.17ರಂದು ರಕ್ಷಿಸಲಾಗಿತ್ತು’ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ(ಎಸ್‌ಎಸ್‌ಪಿ) ಮುನಿರಾಜ್.ಜಿ ತಿಳಿಸಿದರು.
‘ಸಾಮಾಜಿಕ ಸಂಸ್ಥೆಯೊಂದರ ದೂರನ್ನು ಆಧರಿಸಿ ಮನೆಯ ಮೇಲೆ ದಾಳಿ ನಡೆಸಲಾಗಿತ್ತು. ಸಂತ್ರಸ್ತೆಯನ್ನು ರಕ್ಷಿಸಿ ಜವಾಹರ್‌ಲಾಲ್ ನೆಹರೂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾಲ್ಕು ದಿನ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಬಾಲಕಿಯ ಆರೋಗ್ಯ ತೀವ್ರವಾಗಿ ಹದಗೆಟ್ಟ ಕಾರಣ, ಆಕೆಯನ್ನು ದೆಹಲಿಯ ಸಫ್ದಾರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಸಂತ್ರಸ್ತೆ ಸೋಮವಾರ ಮೃತಪಟ್ಟಳು’ ಎಂದು ಎಸ್‌ಎಸ್‌ಪಿ ತಿಳಿಸಿದರು.
ಬಾಲಕಿಯ ತಂದೆ ಹಾಥರಸ್ ಜಿಲ್ಲೆಯ ಹಳ್ಳಿಯೊಂದರ ನಿವಾಸಿಯಾಗಿದ್ದು, ಸೆ.21ರಂದು ಈ ಕುರಿತು ದೂರು ನೀಡಿದ್ದರು. ಸಂಬಂಧಿಯ ಮನೆಯಲ್ಲೇ ಬಾಲಕಿಯ ಮೇಲೆ ಅತ್ಯಾಚಾರ ಆಗಿದೆ ಎಂದು ಅವರು ಆರೋಪಿಸಿದ್ದರು. ಇದರ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿ, ಸಂತ್ರಸ್ತೆಯ 15 ವರ್ಷದ ಸಂಬಂಧಿಯೊಬ್ಬನನ್ನು ಬಂಧಿಸಿದ್ದಾರೆ. ಆತ ತಪ್ಪೊಪ್ಪಿಕೊಂಡಿದ್ದಾನೆ. ಬಾಲಕನ ತಾಯಿ, ಸಂತ್ರಸ್ತೆಯ ಚಿಕ್ಕಮ್ಮ ಪರಾರಿಯಾಗಿದ್ದಾರೆ. ಆಕೆಯನ್ನು ಹುಡುಕಲು ಎರಡು ಪೊಲೀಸ್ ತಂಡಗಳನ್ನು ರಚಿಸಲಾಗಿದೆ’ ಎಂದು ಮುನಿರಾಜ್ ತಿಳಿಸಿದರು.
ಮಹಿಳೆಯನ್ನು ಬಂಧಿಸಲು ವಿಫಲವಾದ ಪೊಲೀಸರ ನಿರ್ಲಕ್ಷ್ಯವನ್ನು ಖಂಡಿಸಿ, ಸಂತ್ರಸ್ತೆಯ ಕುಟುಂಬ ಸದಸ್ಯರು ಹಾಥರಸ್‌ನ ಮುಖ್ಯರಸ್ತೆಯಲ್ಲೇ ಶವವನ್ನು ಇಟ್ಟು ಪ್ರತಿಭಟನೆ ನಡೆಸಿದರು. ನಂತರದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಭರವಸೆಯನ್ನು ಪರಿಗಣಿಸಿ, ಸಂತ್ರಸ್ತೆಯ ಅಂತ್ಯಸಂಸ್ಕಾರ ನೆರವೇರಿಸಿದರು. ಘಟನೆಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ತೋರಿದ ಇಗ್ಲಾಸ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಎಸ್‌ಎಸ್‌ಪಿ ತಿಳಿಸಿದರು.