“ನನ್ನ ಹೆಸರು ಬಳಸಿಕೊಂಡು ಯಾರೂ ಕೂಡ ಅಭಿಮಾನಿಗಳ ಸಂಘ, ಟ್ರಸ್ಟ್, ಮತ್ತಿತರ ಸಂಘಟನೆಗಳನ್ನು ಮಾಡಿಕೊಳ್ಳುವಂತಿಲ್ಲ” ಎಂದು ಕೆಪಿಸಿಸಿ ಅಧ್ಯಕ್ಷ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಫೇಸ್‌ಬುಕ್ ಪೋಸ್ಟ್ ಮೂಲಕ ಈ ಕುರಿತು ಮನವಿ ಮಾಡಿದ್ದಾರೆ. “ನನ್ನ ಹೆಸರಿನ ಅಭಿಮಾನಿ ಸಂಘ, ಸಂಸ್ಥೆಗಳನ್ನು ತಕ್ಷಣದಿಂದಲೇ ವಿಸರ್ಜಿಸಬೇಕು” ಎಂದು ಸೂಚನೆ ನೀಡಿದ್ದಾರೆ.
“ಒಂದೊಮ್ಮೆ ಯಾರಾದರೂ ನನ್ನ ಹಾಗೂ ನನ್ನ ಸಹೋದರ ಡಿ. ಕೆ. ಸುರೇಶ್ ಹೆಸರಿನ ಸಂಘ ಸಂಸ್ಥೆಗಳ ಮೂಲಕ ಚಟುವಟಿಕೆ ನಡೆಸಿದರೆ, ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು” ಎಂದು ಎಚ್ಚರಿಸಿದ್ದಾರೆ.
ಡಿ. ಕೆ. ಶಿವಕುಮಾರ್ ಅವರು ಈಗಾಗಲೇ ಅಸ್ತಿತ್ವದಲ್ಲಿರುವ ಎಂ. ಎಸ್. ಅಂಗಡಿ ನೇತೃತ್ವದ ಅಖಿಲ ಕರ್ನಾಟಕ ಡಿ.ಕೆ. ಶಿವಕುಮಾರ್ ಅಭಿಮಾನಿಗಳ ಸಂಘವನ್ನು ಹೊರತುಪಡಿಸಿ ನನ್ನ ಹೆಸರಿನ ಅಭಿಮಾನಿ ಸಂಘ, ಸಂಸ್ಥೆಗಳನ್ನು ತಕ್ಷಣದಿಂದಲೇ ವಿಸರ್ಜಿಸಬೇಕು ಎಂದು ಸ್ಪಷ್ಟಪಡಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾಗಿ ಡಿ. ಕೆ. ಶಿವಕುಮಾರ್ ನೇಮಕವಾಗುತ್ತಿದ್ದಂತೆ ಅವರ ಅಭಿಮಾನಿಗಳ ಹೆಸರಿನಲ್ಲಿ ಹಲವು ಅಭಿಮಾನಿ ಸಂಘಗಳು ಹುಟ್ಟಿಕೊಂಡಿವೆ. ಆದ್ದರಿಂದ, ಅವರು ಫೇಸ್ ಬುಕ್ ಮೂಲಕ ಈ ಕುರಿತು ಸೂಚನೆಗಳನ್ನು ಕೊಟ್ಟಿದ್ದಾರೆ.