ಅರ್ಹರ ಮನೆ ಬಾಗಿಲಿಗೆ ಪಿಂಚಣಿ ಸೌಲಭ್ಯ

0

ಹಿರಿಯ ನಾಗರಿಕರು ಪಿಂಚಣಿಗಾಗಿ ಜಿಲ್ಲಾ ಮತ್ತು ತಾಲ್ಲೂಕು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಅವರ ಮನೆ ಬಾಗಿಲಿಗೆ ಅಧಿಕಾರಿಗಳು ಖುದ್ದು ಭೇಟಿ ನೀಡಿ, ಅರ್ಜಿ ಸ್ವೀಕರಿಸಿ ಪಿಂಚಣಿ ಮಂಜೂರು ಮಾಡುವ ವಿನೂತನ ಯೋಜನೆ ಜಾರಿಗೊಳಿಸುವ ಉದ್ದೇಶ ಹೊಂದಿರುವುದಾಗಿ ಕಂದಾಯ ಸಚಿವ ಆರ್.ಅಶೋಕ್‌ ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಪಿಂಚಣಿ ಅದಾಲತ್ ನಿರಂತರ ನಡೆಸುವ ಮೂಲಕ ಸಂಕಷ್ಟದಲ್ಲಿರುವಂತಹ ಅಂಗವಿಕಲರು, ವಿಧವೆಯರು ಮತ್ತು ಹಿರಿಯ ನಾಗರಿಕರಿಗೆ ಆದ್ಯತೆ ಮೇಲೆ ಸೌಲಭ್ಯ ದೊರಕಿಸುವಂತೆ ಅಧಿಕಾರಿಗಳಿಗೆ ಅವರು ಸೂಚಿಸಿದರು.

ರಾಜ್ಯ ಸರ್ಕಾರ ಹಿರಿಯ ನಾಗರಿಕರ ಪಿಂಚಣಿಗಾಗಿ ಪ್ರತಿ ವರ್ಷ ₹7 ಸಾವಿರ ಕೋಟಿ ನೀಡುತ್ತಿದ್ದು, ಅರ್ಹ ಫಲಾನುಭವಿಗಳಿಗೆ ಪಿಂಚಣಿ ಸೌಲಭ್ಯ ದೊರೆಯಬೇಕು ಎಂದರು.

ಫಲಾನುಭವಿಗಳ ಖಾತೆಗೆ ಪಿಂಚಣಿ ಹಣ ನೇರವಾಗಿ ಜಮಾ ಆಗಬೇಕು. ಅವರ ಖಾತೆಗೆ ಆಧಾರ್ ಲಿಂಕ್ ಮಾಡುವುದರಿಂದ ಅನರ್ಹರಿಗೆ ಈ ಸೌಲಭ್ಯ ದೊರೆಯದಂತೆ ನೋಡಿಕೊಳ್ಳಲು ಸಾಧ್ಯವಿದೆ ಎಂದರು.

ವೃದ್ದಾಪ್ಯ ವೇತನ ಈ ಹಿಂದೆ ಅನರ್ಹರ ಖಾತೆಗೆ ಮತ್ತು ನಿಧನವಾದವರ ಖಾತೆಗೆ ಜಮೆಯಾಗಿದ್ದು, ವಾಪಸ್ ಸರ್ಕಾರಕ್ಕೆ ಜಮೆಯಾಗುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ರಾಜ್ಯದ ಪ್ರತಿ ಗ್ರಾಮಕ್ಕೆ ಸ್ಮಶಾನಕ್ಕೆ ಜಾಗ ಇರುವಂತೆ ಕ್ರಮ ಸಹ ಕೈಗೊಳ್ಳಲಾಗುತ್ತಿದ್ದು, ಸ್ಮಶಾನ ಭೂಮಿ ಇಲ್ಲದ ಗ್ರಾಮಗಳಲ್ಲಿ ತಕ್ಷಣ ಸರ್ಕಾರಿ ಜಮೀನು ಅಥವಾ ಖರೀದಿಸಿದ ಖಾಸಗಿ ಜಮೀನು ಮಂಜೂರು ಮಾಡಬೇಕು. ಸರ್ಕಾರದ ಒತ್ತುವರಿ ಜಮೀನನ್ನು ತಕ್ಷಣ ತೆರವುಗೊಳಿಸುವ ಜೊತೆಗೆ ಸಾಧ್ಯವಿದ್ದಲ್ಲಿ ಸ್ಮಶಾನಕ್ಕೆ ಭೂಮಿ ಒದಗಿಸಲು ಅವರು ಸೂಚನೆ ನೀಡಿದರು.

ವಿಜಯಪುರ ಜಿಲ್ಲೆಯಲ್ಲಿ ವಿಧಾನಸೌಧ ಕಟ್ಟಡ, ಅಗ್ನಿಶಾಮಕ ದಳ, ತಾಲ್ಲೂಕು ಕ್ರೀಡಾಂಗಣ ವಿವಿಧ ಕಾಲೇಜು ಮತ್ತು ವಸತಿ ಗೃಹಗಳ ನಿರ್ಮಾಣಕ್ಕಾಗಿ 137 ಎಕರೆ ಜಮೀನನ್ನು ಒದಗಿಸಿದ್ದು, ಈ ಜಮೀನು ಸಮರ್ಪಕವಾಗಿ ಬಳಕೆಯಾಗಬೇಕು ಎಂದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ನೀಡಿದ ದೂರಿನ ಅನ್ವಯ ಈಗಾಗಲೇ ವಿಜಯಪುರ ನಗರದಲ್ಲಿ ವಕ್ಫ್ ಆಸ್ತಿಯಾಗಿ ಪರಿವರ್ತಿಸಿದ ಸ್ಥಳಗಳ ಬಗ್ಗೆ ಸೂಕ್ತ ಪರಿಶೀಲನೆ ನಡೆಸುವಂತೆ ಅವರು ಸೂಚನೆ ನೀಡಿದರು.

ನಗರ ಸ್ಥಳೀಯ ಸಂಸ್ಥೆ ಅಭಿವೃದ್ಧಿ ಅನುದಾನ, ಎನ್‌ಡಿಆರ್‌ಎಫ್ ಅನುದಾನ, ಲೋಕೋಪಯೋಗಿ ಇಲಾಖೆ ಅನುದಾನವನ್ನು ಬಳಸಿಕೊಂಡು ವಿಜಯಪುರ ನಗರದ ರಸ್ತೆ ದುರಸ್ತಿ ಮಾಡುವಂತೆ ಅವರು ಸೂಚಿಸಿದರು.

ಪ್ರಕೃತಿ ವಿಕೋಪದ ಅಡಿಯಲ್ಲಿ ಈಗಾಗಲೇ ಅತಿವೃಷ್ಟಿ ಮತ್ತು ಪ್ರವಾಹದಿಂದ ಹಾನಿಗೊಳಗಾದ ಮನೆಗಳ ಅರ್ಹ ಫಲಾನುಭವಿಗಳಿಗೆ ಪರಿಹಾರ ಸೌಲಭ್ಯ ದೊರಕಿಸಬೇಕು. ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ನೈಜ ಹಾನಿ ಪ್ರಮಾಣ ಪರಿಶೀಲಿಸಿ ವರದಿ ಸಿದ್ಧಪಡಿಸಬೇಕು ಎಂದು ಸೂಚಿಸಿದರು.

ಅತಿವೃಷ್ಟಿ ಮತ್ತು ಪ್ರವಾಹದಿಂದ ಹಾನಿಯಾದ ಬಗ್ಗೆ ಸೂಕ್ತ ಅಂಕಿ ಅಂಶಗಳ ದಾಖಲೀಕರಣಗೊಳಿಸಬೇಕು. ಯಾವುದೇ ಪರಿಸ್ಥಿತಿಯಲ್ಲಿ ಅವ್ಯವಹಾರಕ್ಕೆ ಅವಕಾಶ ನೀಡಬಾರದು ಎಂದರು.

ಕೋವಿಡ್ ನಿರ್ವಹಣೆಗಾಗಿ ಯಾವುದೇ ಸಾಧನ ಸಲಕರಣೆ ಖರೀದಿ ಮಾಡಿದ್ದರೆ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದರು.

ಆಹಾರ ನಿಗಮದ ಅಧ್ಯಕ್ಷ ಎ.ಎಸ್ ಪಾಟೀಲ ನಡಹಳ್ಳಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ವಿವಿಧ ಸಮಸ್ಯೆಗಳ ಬಗ್ಗೆ ಸಚಿವರ ಗಮನಕ್ಕೆ ತಂದರು.

ಶಾಸಕ ರಾಜುಗೌಡ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜೆ.ರವಿಶಂಕರ್, ಪ್ರಕೃತಿ ವಿಕೋಪ ನಿರ್ವಹಣಾ ಆಯುಕ್ತ ಮನೋಜ ಕುಮಾರ್, ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್, ಜಿಲ್ಲಾ ಪಂಚಾಯ್ತಿ ಸಿಇಒ ಗೋವಿಂದ ರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಔದ್ರಾಮ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ ಅರಸಿದ್ಧಿ ಇದ್ದರು.

LEAVE A REPLY

Please enter your comment!
Please enter your name here