ಅ.ಭಾ.ವೀರಶೈವ ಮಹಾಸಭಾದಿಂದ ಸಾಂಕೆತಿಕ ಧರಣಿ
ಧಾರವಾಡ: ವೀರಶೈವ-ಲಿಂಗಾಯತ ಸಮಾಜವನ್ನು ಹಿಂದುಳಿದ ವರ್ಗದ (ಓಬಿಸಿ) ಪಟ್ಟಿಗೆ ಸೇರಿಸಬೇಕು ಹಾಗೂ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ಸಾಂಕೆತಿಕ ಧರಣಿ ನಡೆಸಲಾಯಿತು.
ವೀರಶೈವ ಲಿಂಗಾಯತ ಸಮುದಾಯದ ಜನರು ಬದಲಾದ ಪರಿಸ್ಥಿತಿಯಲ್ಲಿ ಆರ್ಥಿಕವಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಹೊರಡಿಸಿರುವ ಇತರ ಹಿಂದುಳಿದ ವರ್ಗಗಳ (ಓಬಿಸಿ) ಪಟ್ಟಿಯಲ್ಲಿ ವೀರಶೈವ ಲಿಂಗಾಯತ ಸಮುದಾಯವನ್ನೂ ಸೇರಿಸಿ ಆ ಮೂಲಕ ತೀವ್ರ ಹಿಂದುಳಿದಿರುವ ಸಮುದಾಯದ ಯುವ ಜನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲು ಅವಕಾಶ ಕಲ್ಪಿಸಬೇಕಿದೆ.
ಈ ಪಟ್ಟಿಯಲ್ಲಿ ಕರ್ನಾಟಕದಲ್ಲಿ ಇತರ ಹಿಂದುಳಿದವರ ಪಟ್ಟಿಯಲ್ಲಿರುವ ಎಲ್ಲ ಸಮುದಾಯಗಳನ್ನೂ ಸೇರ್ಪಡೆ ಮಾಡಬೇಕಾಗುತ್ತದೆ. ಆದರೆ, ಕೇಂದ್ರದ ಪಟ್ಟಿಯಲ್ಲಿ ವೀರಶೈವ ಲಿಂಗಾಯತ ಸಮುದಾಯವನ್ನು ಕೈಬಿಟ್ಟಿರುವುದರಿಂದ ಸಮುದಾಯದ ಬಡ ಯುವ ಜನರು ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಿಂದ ವಂಚಿತವಾಗುವಂತಾಗಿದೆ. ಕರ್ನಾಟಕ ರಾಜ್ಯದಲ್ಲಿ ಕಳೆದ ೭೦ ವರ್ಷಗಳಿಂದಲೂ ವೀರಶೈವ ಲಿಂಗಾಯತ ಸಮುದಾಯವನ್ನು ಇತರ ಹಿಂದುಳಿದ ವರ್ಗಎಂದು ಪರಿಗಣಿಸಲಾಗಿದ್ದರೂ, ಕೇಂದ್ರ ಪಟ್ಟಿಯಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದಂತೆ ಈ ಸಮುದಾಯವನ್ನು ಕೈಬಿಟ್ಟಿರುವುದು ಸಮಾಜಕ್ಕೆ ಘೋರ ಅನ್ಯಾಯ ಮಾಡಿದಂತಾಗಿದೆ. ಆದ್ದರಿಂದ ಈ ನಿಟ್ಟಿನಲ್ಲಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಲು ರಾಜ್ಯ ಸರಕಾರ ಕೂಡಲೇ ಕಾಯೋನ್ಮುಖವಾಗಬೇಕು ಎಂದು ಮುಖಂಡರು ಆಗ್ರಹಿಸಿದರು.
ಕರ್ನಾಟಕವು ಕೃಷಿ ಅವಲಂಬಿತ ರಾಜ್ಯವಾಗಿದ್ದು, ರಾಜ್ಯದಲ್ಲಿರುವ ಸುಮಾರು ಆರುವರೆ ಕೋಟಿ ಜನಸಂಖ್ಯೆಯಲ್ಲಿ ಸುಮಾರು ಒಂದುವರೆ ಕೋಟಿಗೂ ಹೆಚ್ಚು ವೀರಶೈವ – ಲಿಂಗಾಯತ ಸಮಾಜದವರಿದ್ದಾರೆ. ಇದರಲ್ಲಿ ೮೬ ಉಪಪಂಗಡಗಳಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಮತ್ತು ಕೃಷಿ ಆಧಾರಿತ ಕಸುಬು ಅವಲಂಬಿಸಿದ್ದಾರೆ. ಹಾಗೂ ಆರ್ಥಿಕವಾಗಿ ಇಂದು ಸಮಾಜದಲ್ಲಿ ಆದ ಸಾಮಾಜಿಕ ಬೆಳವಣಿಗೆಗಳಿಂದ, ಕೃಷಿವಲಯ ನಷ್ಟದಿಂದ ಬಳಲುತ್ತಿರುವುದರಿಂದ ಸಮಾಜದವರು ಹಿಂದುಳಿದಿದ್ದಾರೆ.
ಶೈಕ್ಷಣಿಕ ಕ್ಷೇತ್ರದಲ್ಲಿ ಸಮಾಜದ ಮಠ-ಮಾನ್ಯಗಳು ಹಾಗೂ ಸಂಘ-ಸಂಸ್ಥೆಗಳು ವರ್ಗ, ವರ್ಣ, ಜಾತಿ ಭೇದವಿಲ್ಲದೇ ಅಪಾರ ಪ್ರಮಾಣದಲ್ಲಿ ಸೇವೆ ಸಲ್ಲಿಸುತ್ತಿದ್ದರೂ ನಮ್ಮ ಸಮಾಜದವರು ಶೈಕ್ಷಣಿಕ ಕ್ಷೇತ್ರದಲ್ಲಿ ಹಿಂದುಳಿದಿದೆ ಎಂಬುದು ಗಮನಹಾರ್ಹ.ಆದ್ದರಿಂದ ಸಮುದಾಯದ ಹಿತದೃಷ್ಠಿಯಿಂದ ನಿಗಮ ಸ್ಥಾಪಿಸಿ ಅಗತ್ಯ ಅನುದಾನ ಒದಗಿಸಬೇಕು ಎಂದು ಸಭೆಯಲ್ಲಿ ಮಾತನಾಡಿದ ಸಮಾಜದ ಮುಖಂಡರು ಆಗ್ರಹಿಸಿದರು.
ಧರಣಿಯ ಆರಂಭದ ಪೂರ್ವದಲ್ಲಿ ಬುಧವಾರ ನಿಧನರಾದ ಕೇಂದ್ರ ಸಚಿವ ಸುರೇಶ ಅಂಗಡಿ ಅವರ ಆತ್ಮಕ್ಕೆ ಮೌನ ಆಚರಿಸಿ ಶಾಂತಿ ಕೋರಲಾಯಿತು.
ಉಪ್ಪಿನ ಬೆಟಗೇರಿಯ ಶ್ರೀ ಕುಮಾರ ವಿರುಪಾಕ್ಷ ಮಹಾಸ್ವಾಮೀಜಿ, ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಗುರುರಾಜ ಹುಣಸಿಮರದ, ಮಾಜಿ ಸಚಿವ ಪಿ.ಸಿ.ಸಿದ್ಧನಗೌಡ್ರ, ಮಾಜಿ ಸಭಾಪತಿ ವೀರಣ್ಣ ಮತ್ತೀಕಟ್ಟಿ, ಶಿವಶರಣ ಕಲಬಶೆಟ್ಟರ, ಬಿ.ವೈ.ಪಾಟೀಲ, ಬಿ.ಎಸ್.ಗೋಲಪ್ಪನವರ, ಸಿದ್ದಣ್ಣ ಕಂಬಾರ, ಯಲ್ಲಪ್ಪ ಕಲಿವಾಳ, ಎಂ.ಎಫ್.ಹಿರೇಮಠ, ಸದಾನಂದ ಡಂಗನವರ, ಈರೇಶ ಅಂಚಟಗೇರಿ, ರಾಜಣ್ಣ ಕೊರವಿ, ಸ್ವಾತಿ ಮಾಳಗಿ, ಶರಣಪ್ಪ ಮತ್ತೀಕಟ್ಟಿ, ಐ.ಸಿ.ಗೋಕುಲ, ಬಿ.ಎಂ.ಸೂರಗೊಂಡ, ಮಲ್ಲನಗೌಡ ಪಾಟೀಲ, ಬಸವರಾಜ ಕಿತ್ತೂರ, ಮೈಲಾರ ಉಪ್ಪಿನ, ಪ್ರಭಾವತಿ ಒಡ್ಡೀನ, ಶ್ರೀಶೈಲ ಕಮತರ, ದ್ಯಾಮಣ್ಣ ರೇವಣ್ಣವರ, ವಿಜಯಲಕ್ಷ್ಮೀ ಕಲ್ಯಾಣಶೆಟ್ಟರ ಮಡಿವಾಳಪ್ಪ ಸಿಂದೋಗಿ,ರವಿ ಬಡ್ನಿ ಮುಂತಾದವರು ಧರಣಿಯಲ್ಲಿ ಭಾಗವಹಿಸಿದ್ದರು.