ಆಕರ್ಷಿಸುವ ಗಡಚಿಂತಿ ಜಲಪಾತ

0

ಹನುಮಸಾಗರ: ಸಮೀಪದ ಗಡಚಿಂತಿ ಗ್ರಾಮದ ಜಲಪಾತವು ಈಚೆಗೆ ಸುರಿದ ಮಳೆಯಿಂದ ಮೈದುಂಬಿಗೊಂಡು ಹಾಲಿನ ನೊರೆಯಂತೆ ಹರಿಯುತ್ತಾ ನೋಡಗರನ್ನು ಆಕರ್ಷಿಸುತ್ತಿದೆ.

ಹೀಗೆ ನಿರಂತರವಾಗಿ ಮಳೆಯಾದರೆ ಈ ಜಲಪಾತ ಮೂರು ತಿಂಗಳವರೆಗೂ ಭೋರ್ಗರೆಯುವ ಸಾಧ್ಯತೆ ಇದೆ ಎಂದು ಸ್ಥಳೀಯರು ಹೇಳುತ್ತಾರೆ. ಗದಗ ಜಿಲ್ಲೆಯ ಬೈರಾಪೂರ ಬೆಟ್ಟದ ಮೂಲಕ ಹರಿದು ಬರುವ ಹಳ್ಳದ ನೀರು ಗಡಚಿಂತಿ ಗ್ರಾಮದ ಬಳಿಯ ಬೆಟ್ಟದಲ್ಲಿ ಜಲಪಾತ ಸೃಷ್ಟಿಸಿಕೊಂಡಿದೆ.

ಬೈರಾಪೂರ ಬೆಟ್ಟದಲ್ಲಿ ಮಳೆಯಾದರೆ ಈ ಜಲಪಾತಕ್ಕೆ ನೀರು ಬರುತ್ತದೆ. ಕಲ್ಲಿನ ಪಡುವಿನ ಮೂಲಕ ದೊಡ್ಡ ಪ್ರಮಾಣದಲ್ಲಿ ನೀರು ಹರಿದು ಮೆಟ್ಟಿಲಿನಂತಿರುವ ಬಂಡೆಗಳ ಮೇಲೆ ಜಾರಿ ಬರುವಾಗ ನೀರು ಹಾಲಿನ ಹೊಳಪಿನಂತೆ ಕಾಣುತ್ತದೆ.

‘ನಮ್ಮೂರಲ್ಲಿ ಜಲಪಾತ ಇದೆ ಎಂಬುದನ್ನು ನಮ್ಮೂರಿನ ಆಸುಪಾಸಿನ ಜನರಿಗೆ ಬಿಟ್ಟರೆ ಯಾರಿಗೂ ಗೊತ್ತಿಲ್ಲ, ಗೊತ್ತಾದರೂ ರಸ್ತೆ ಇಲ್ಲದ ಕಾರಣ ಬಂದವರಿ ಮರಳಿ ಹೋಗಬೇಕಾದ ಸ್ಥಿತಿ ಇದೆ. ಮಾರ್ಗಫಲಕಗಳೂ ಇಲ್ಲ. ಇಲ್ಲಿನ ತಾಲ್ಲೂಕು, ಜಿಲ್ಲಾ ಆಡಳಿತಕ್ಕೂ ಈ ಜಪಾಲತದ ಪರಿಚಯವಿಲ್ಲ’ ಎಂದು ಸ್ಥಳೀಯ ಮುಖಂಡ ಯಮನೂರಪ್ಪ ಅಬ್ಬಿಗೇರಿ ನೋವಿನಿಂದ ಹೇಳುತ್ತಾರೆ.

ಜಲಪಾತ ಮೈದುಂಬಿ ಧರೆಗೆ ಅಪ್ಪಳಿಸುತ್ತಿರುವ ದೃಶ್ಯ ನಯನ ಮನೋಹರವಾಗಿದೆ. ಬಹುತೇಕ ಜಲಪಾತಗಳನ್ನು ದೂರದಿಂದಲೇ ನಿಂತು ನೋಡಿ ಆನಂದಿಸಬಹುದು. ಯುವಕರು ಈ ಜಲಧಾರೆಗೆ ಮೈಯೊಡ್ಡಿ ಮೈ-ಮನ ಹಗುರ ಮಾಡಿಕೊಳ್ಳಬಹುದು. ಜಲ ಪಾತದ ನೀರು ಆಚನೂರ ಮಲ್ಲಯ್ಯನ ಕೆರೆ ಸೇರುತ್ತದೆ.

ಬೆಟ್ಟದ ತಪ್ಪಲಿನಿಂದ ರಭಸವಾಗಿ ಹರಿದು ಬರುವ ನೀರು ಸುಮಾರು 15 ಅಡಿ ಎತ್ತರದಿಂದ ಬೀಳುತ್ತದೆ. ನೀರು ಬೀಳುವ ಅಡಿಯಲ್ಲಿ ನಿಸರ್ಗವೇ ಮೆಟ್ಟಿಲು ಆಕಾರದಲ್ಲಿ ಹಾಸು ಬಂಡೆಯನ್ನು ನಿರ್ಮಿಸಿದೆ.

ಈ ಗ್ರಾಮಕ್ಕೆ ಕುಷ್ಟಗಿಯಿಂದ ಬೆಳಿಗ್ಗೆ ಒಂದೇ ಒಂದು ಬಸ್ ಹೋಗುವುದರಿಂದ ಅನಿವಾರ್ಯವಾಗಿ ಸ್ವಂತ ವಾಹನದಲ್ಲಿಯೇ ಹೋಗಬೇಕಾಗುತ್ತದೆ. ಕುಷ್ಟಗಿಯಿಂದ ಚಿಕ್ಕಗೊಣ್ಣಾಗರ ಮಾರ್ಗವಾಗಿ ಬಂದರೆ 40 ಕಿ.ಮೀ, ಗಜೇಂದ್ರಗಡದಿಂದ 4ಕಿ.ಮೀ ದೂರ. ಗಡಚಿಂತಿ ಗ್ರಾಮಕ್ಕೆ ಬಂದರೂ ಜಲಪಾತ ನೋಡಲು ಸುಮಾರು ಅರ್ಧ ಕಿ.ಮೀ ನಡೆದುಕೊಂಡೇ ಹೋಗಬೇಕು.

LEAVE A REPLY

Please enter your comment!
Please enter your name here