ಆದಿತ್ಯನಾಥ್ ದೇಶದಲ್ಲೇ ಶ್ರೇಷ್ಠ ಸಿಎಂ, ಆದರೆ ಉತ್ತರ ಪ್ರದೇಶದಲ್ಲಿ ಅಲ್ಲ !

0

‘ಇಂಡಿಯಾ ಟುಡೇ’ ಮೀಡಿಯಾ ಗ್ರೂಪ್ ನ ದ್ವೈ ವಾರ್ಷಿಕ ‘ಮೂಡ್ ಆಫ್ ದಿ ನೇಷನ್’ ಸಮೀಕ್ಷೆಯಲ್ಲಿ ಸತತ ಮೂರನೇ ಬಾರಿ ಉತ್ತರ ಪ್ರದೇಶದ ಆದಿತ್ಯನಾಥ್ ದೇಶದಲ್ಲೇ ಶ್ರೇಷ್ಠ ಮುಖ್ಯ ಮಂತ್ರಿಯಾಗಿ ಹೊರಹೊಮ್ಮಿದ್ದಾರೆ. ಈ ಸಮೀಕ್ಷೆ ಹಾಗು ಈ ಹಿಂದಿನ ಇದೇ ಸಮೀಕ್ಷೆಯ ಫಲಿತಾಂಶಗಳ ಬಗ್ಗೆ theprint.in ನಲ್ಲಿ ಹಿರಿಯ ಪತ್ರಕರ್ತ ಶಿವಂ ವಿಜ್ ಮಾಡಿರುವ ವಿಶ್ಲೇಷಣೆಯ ಮುಖ್ಯಾಂಶಗಳು ಇಲ್ಲಿವೆ :

ಈ ಬಗ್ಗೆ ‘ಇಂಡಿಯಾ ಟುಡೇ’ ಹಾಗು ಅದರ ಸಮೂಹದ ಮಾಧ್ಯಮ ಸಂಸ್ಥೆಗಳು ನಡೆಸುತ್ತಿರುವ ನಿರಂತರ ಪ್ರಚಾರದ ಭರಾಟೆ ಯಾರನ್ನಾದರೂ ಅವಕ್ಕಾಗಿಸುತ್ತವೆ. ‘ಇಂಡಿಯಾ ಟುಡೇ’ ಮಾಡಿರುವ ಈ ‘ಸಂಶೋಧನೆ’ ಪ್ರಚಾರದ ಒಂದು ಪೂರ್ಣ ಪ್ಯಾಕೇಜ್ ರೀತಿ ಕಂಡರೆ ಆಶ್ಚರ್ಯವಿಲ್ಲ.

ಈ ಭಾರೀ ಪ್ರಚಾರ ನೋಡಿದರೆ ಯಾರೇ ಆದರೂ ಉತ್ತರ ಪ್ರದೇಶದ ಜನರು ಆದಿತ್ಯನಾಥ್ ಬಗ್ಗೆ ಬಹಳ ಸಂತೃಪ್ತಿಯಲ್ಲಿದ್ದಾರೆ ಎಂದೇ ಭಾವಿಸಬೇಕು. ಆದರೆ ‘ಇಂಡಿಯಾ ಟುಡೇ’ಯ ಅದೇ ಸಮೀಕ್ಷೆಯ ಪ್ರಕಾರವೇ ವಾಸ್ತವ ಹಾಗಿಲ್ಲ.

‘ಇಂಡಿಯಾ ಟುಡೇ’ ಸಮೀಕ್ಷೆಗೆ ದತ್ತಾಂಶ ಸಂಗ್ರಹಿಸುವ ಕಾರ್ವಿ ಇನ್ಸೈಟ್ರ್ಸ್ ನ ಅಂಕಿ ಅಂಶಗಳು ಪ್ರಶ್ನಾರ್ಹವಲ್ಲ. ಆದರೆ ಅದನ್ನು ‘ಇಂಡಿಯಾ ಟುಡೇ’ ಪ್ರಸ್ತುತಪಡಿಸುವ ರೀತಿ ಮಾತ್ರ ಪ್ರಶ್ನಾರ್ಹ.

ಇಂಡಿಯಾ ಟುಡೇ’ಯ ಶ್ರೇಷ್ಠ ಮುಖ್ಯಮಂತ್ರಿ ಪಟ್ಟ ಆ ಮುಖ್ಯಮಂತ್ರಿ ತನ್ನ ರಾಜ್ಯದಲ್ಲಿ ಸಂಪಾದಿಸಿರುವ ಜನಪ್ರಿಯತೆ ಅಥವಾ ವಿಶ್ವಾಸಾರ್ಹತೆಯ ಪ್ರತೀಕ ಅಲ್ಲ. ಒಬ್ಬ ಮುಖ್ಯಮಂತ್ರಿ ತನ್ನ ರಾಜ್ಯದಲ್ಲಿ ಅತ್ಯುತ್ತಮ ನಿರ್ವಹಣೆ ಮಾಡಿದ್ದರೂ ಇಂಡಿಯಾ ಟುಡೇಯ ಈ ಪಟ್ಟಿಯಲ್ಲಿ ಆತ ಸ್ಥಾನ ಪಡೆಯದೇ ಇರುವ ಸಾಧ್ಯತೆ ಇದೆ.

‘ಇಂಡಿಯಾ ಟುಡೇ’ಯ ಈ ಸಮೀಕ್ಷೆಯಲ್ಲಿ ಒಬ್ಬ ಸಿಎಂ ತನ್ನ ರಾಜ್ಯದಲ್ಲಿ ಎಷ್ಟು ಯಶಸ್ವಿಯಾಗಿದ್ದಾರೆ ಎಂದು ಹೈಲೈಟ್ ಮಾಡುವುದಿಲ್ಲ. ಆ ವಿಷಯದ ಬಗ್ಗೆ ಸಮೀಕ್ಷೆ ಹೆಚ್ಚು ಮಾತನಾಡುವುದೇ ಇಲ್ಲ. ಉದಾಹರಣೆಗೆ, ಈಗ ಬಂದಿರುವ ಸಮೀಕ್ಷೆಯ ಪ್ರಕಾರ ಉತ್ತರ ಪ್ರದೇಶದಲ್ಲಿ ಆದಿತ್ಯನಾಥ್ ಅವರ ಜನಪ್ರಿಯತೆ ರೇಟಿಂಗ್ 49% ಮಾತ್ರ. ಇದು ಬಿಹಾರದಲ್ಲಿ ನಿತೀಶ್ ಕುಮಾರ್ (55%) , ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ (59%), ದಿಲ್ಲಿಯಲ್ಲಿ ಅರವಿಂದ್ ಕೇಜ್ರಿವಾಲ್ (63%), ಆಂಧ್ರ ಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿ (87%) ಅವರ ಜನಪ್ರಿಯತೆ ರೇಟಿಂಗ್ ಗಿಂತ ಕಡಿಮೆ. ಆದರೆ ಈ ವಿಷಯ ಸಮೀಕ್ಷೆಯಲ್ಲಿ ಹೈಲೈಟ್ ಆಗುವುದೇ ಇಲ್ಲ.

ಇನ್ನು ಆಲ್ ಇಂಡಿಯಾ ರೇಟಿಂಗ್ ಗಳಲ್ಲಿ, ಆದಿತ್ಯನಾಥ್ ಶ್ರೇಷ್ಠ ಸಿಎಂ ಎಂದು ಸಮೀಕ್ಷೆಯಲ್ಲಿ 24% ಜನರು ಹೇಳಿದ್ದಾರೆ. ಈ ರೇಟಿಂಗ್ ಬಂದಿರುವುದು ಯಾವ ರಾಜ್ಯಗಳಿಂದ ?. ಅದು ಇಡೀ ದೇಶದ ಎಲ್ಲ ರಾಜ್ಯಗಳ ಜನರಿಂದ ಸಂಗ್ರಹಿಸಿದ ಅಭಿಪ್ರಾಯವೇ ಅಥವಾ ಕೇವಲ ಹಿಂದಿ ರಾಜ್ಯಗಳಿಗೆ ಸೀಮಿತವಾಗಿದ್ದೇ ?, ಕೇವಲ 2% ಜನರು ಗುಜರಾತ್ ನ ಬಿಜೆಪಿ ಸಿಎಂ ವಿಜಯ್ ರೂಪಾನಿ ಪರ ರೇಟಿಂಗ್ ನೀಡಿದ್ದಾರೆ. ಅಂದರೆ ಗುಜರಾತ್ ನಲ್ಲೂ ಬಿಜೆಪಿ ಬೆಂಬಲಿಗರು ವಿಜಯ್ ರೂಪಾನಿಯಂತಹ ಬೋರಿಂಗ್ ಸಿಎಂ ಗಿಂತ ಹಿಂದುತ್ವ ಹೀರೋ ಆದಿತ್ಯನಾಥ್ ಆಗಬಹುದು ಎಂದು ಪರಿಗಣಿಸಿರಬಹುದು.

ಆದಿತ್ಯನಾಥ್ ರ ಆಲ್ ಇಂಡಿಯಾ ರೇಟಿಂಗ್ ಜನವರಿ 2020ರಲ್ಲಿ 18% ಇದ್ದಿದ್ದು ಈಗ 24% ಆಗಿದೆ. ಇದು ದೇಶದ ಹಿಂದುತ್ವ ಮತದಾರರ ಪ್ರಮಾಣ ಆಗಿದೆ. 2009ರಲ್ಲಿ ಆದಂತೆ ಬಿಜೆಪಿ ಲೋಕಸಭಾ ಚುನಾವಣೆ ಸೋತಾಗ ಅದಕ್ಕೆ ಬರುವ ಮತಗಳ ಪ್ರಮಾಣ ಇದೇ 20% ದ ಆಜುಬಾಜಿನಲ್ಲಿರುತ್ತದೆ ಎಂಬುದು ಗಮನಾರ್ಹ.

ಆಗಸ್ಟ್ 2018ರಲ್ಲಿ ‘ಇಂಡಿಯಾ ಟುಡೇ’ಯ ಇದೇ ಸಮೀಕ್ಷೆಯಲ್ಲಿ ಮಮತಾ ಬ್ಯಾನರ್ಜಿ ದೇಶದ ಫೆವರಿಟ್ ಸಿಎಂ ಆಗಿದ್ದರು. ಆಗ ‘ಇಂಡಿಯಾ ಟುಡೇ’ ಒಂದು ಸ್ಪಷ್ಟೀಕರಣವನ್ನೂ ಸಮೀಕ್ಷೆಯಲ್ಲೇ ಪ್ರಕಟಿಸಿತ್ತು. ” ಈ ಸಮೀಕ್ಷೆ ಮತದಾರರ ಅಭಿಪ್ರಾಯ ಆಗಿರುವುದರಿಂದ ಈ ನಂಬರ್ 1 ಸ್ಥಾನ ರಾಜಕೀಯ ಜನಪ್ರಿಯತೆಯ ಪ್ರತಿಬಿಂಬವೇ ಹೊರತು ಆಡಳಿತದ ಗುಣಮಟ್ಟದ್ದಲ್ಲ ” ಎಂಬುದು ಆ ಸ್ಪಷ್ಟೀಕರಣ. ಆದರೆ …

ಆದಿತ್ಯನಾಥ್ ಮೊದಲ ಸ್ಥಾನ ಪಡೆಯಲು ಪ್ರಾರಂಭಿಸಿದ ಮೇಲೆ ಈ ಸಮೀಕ್ಷೆಯಲ್ಲಿ ಆ ಸ್ಪಷ್ಟೀಕರಣ ಮಾಯವಾಗಿದೆ !. ಆದಿತ್ಯನಾಥ್ ಆಯ್ಕೆಯನ್ನು ಅಜ್ಜಿ ತನ್ನ ಮೊದಲ ಮೊಮ್ಮಗಳ ಆಗಮನವನ್ನು ಸಂಭ್ರಮಿಸಿದಂತೆ ಸಂಭ್ರಮಿಸುವ ‘ಇಂಡಿಯಾ ಟುಡೇ’ಗೆ ಈಗ ರಾಜಕೀಯ ಜನಪ್ರಿಯತೆ ಹಾಗು ಆಡಳಿತದ ಗುಣಮಟ್ಟಗಳ ನಡುವಿನ ವ್ಯತ್ಯಾಸವನ್ನು ಜನರಿಗೆ ತಿಳಿಸುವ ಅಗತ್ಯವೇ ಕಾಣುತ್ತಿಲ್ಲ.

ಸ್ಪಷ್ಟೀಕರಣ ನೀಡಲು ಮರೆತು ಬಿಡುವ ‘ಇಂಡಿಯಾ ಟುಡೇ’ ಆದಿತ್ಯನಾಥ್ ಗುಣಗಾನ ಮಾಡಲು ಸರಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆಯಂತೆಯೇ ಕಾರ್ಯೋನ್ಮುಖವಾಗಿದೆ. ‘2018ರ ಬಜೆಟ್ ನಲ್ಲಿ ಘೋಷಿಸಿರುವ ಒಂದು ರಕ್ಷಣಾ ಕೈಗಾರಿಕಾ ಕಾರಿಡಾರ್ ಒಂದು ಉತ್ತರ ಪ್ರದೇಶದ ಅತ್ಯಂತ ಬಡ ಪ್ರದೇಶವಾದ ಬುಂದೇಲ್ ಖಂಡ್ ಮೂಲಕ ಹಾದು ಹೋಗಲಿದೆ. ಇದರಿಂದ ರಾಜ್ಯದಲ್ಲಿ ಭಾರೀ ಅಭಿವೃದ್ಧಿ ಕಾಣಲಿದ್ದು, ಆದಿತ್ಯನಾಥ್ ರಾಜಕೀಯ ವರ್ಚಸ್ಸಿಗೂ ಸಹಕಾರಿಯಾಗಲಿದೆ ” ಎಂದು ಯಾವತ್ತೋ ಆಗಲಿರುವ ಯೋಜನೆ ಬಗ್ಗೆ ಸರಕಾರದ ಜಾಹೀರಾತು ಹೇಳಿದಂತೆ ಹೇಳುತ್ತದೆ ‘ಇಂಡಿಯಾ ಟುಡೇ’.

ಜನವರಿ 2020ರ ಸಮೀಕ್ಷೆಯಲ್ಲಿ ಯಾವುದೇ ಸಿಎಂಗಳ ತವರು ರಾಜ್ಯದ ರ್ಯಾಂಕಿಂಗ್ ಬಗ್ಗೆ ಮಾತಾಡಲೇ ಇಲ್ಲ. ಏಕೆ ಗೊತ್ತೇ ? ಆ ವಿಷಯದಲ್ಲಿ ಆದಿತ್ಯನಾಥ್ ಅವರ ರ್ಯಾಂಕಿಂಗ್ ಅಷ್ಟು ಕೆಟ್ಟದಾಗಿತ್ತು.

ಇನ್ನು ಆಗಸ್ಟ್ 2020ರ ಸರ್ವೆಯ ಕೊನೆಯ ಪ್ಯಾರಾದಲ್ಲಿ “ತವರು ರಾಜ್ಯ ರ್ಯಾಂಕಿಂಗ್” ನಲ್ಲಿ ನವೀನ ಪಟ್ನಾಯಕ್ 75%, ಅಶೋಕ್ ಗೆಹಲೋಟ್ 73% ಪಡೆದಿದ್ದಾರೆ ಎಂದಿದೆ. ಆದರೆ ಅಲ್ಲಿ ಆದಿತ್ಯನಾಥ್ ಅವರದ್ದು ಕೇವಲ 54%. ನಿತೀಶ್ ಕುಮಾರ್ ಗೂ ಅಷ್ಟೇ ರ್ಯಾಂಕ್ ಸಿಕ್ಕಿದೆ.

ಇನ್ನೊಂದು ಮಹತ್ವದ ವಿಷಯವೇನೆಂದರೆ, ಆಗಸ್ಟ್ 2019ರಲ್ಲಿ 54% ಇದ್ದ ಆದಿತ್ಯನಾಥ್ ಅವರ ತವರು ರಾಜ್ಯ ರೇಟಿಂಗ್ ಆಗಸ್ಟ್ 2020ರಲ್ಲಿ 49% ಕ್ಕೆ ಇಳಿದಿದೆ. ಆದರೆ ಶ್ರೇಷ್ಠ ಸಿಎಂ ಎಂದು ಹಾಡಿ ಹೊಗಳುವಾಗ ಇದನ್ನೆಲ್ಲಾ ಹೈಲೈಟ್ ಮಾಡಲು ಸಾಧ್ಯವೇ ?.

ತನ್ನದೇ ಸಮೀಕ್ಷೆ ಪ್ರಕಾರ ಆದಿತ್ಯನಾಥ್ ಅವರ ಜನಪ್ರಿಯತೆ ದೇಶಾದ್ಯಂತ ಹೆಚ್ಚುತ್ತಿರುವಾಗ ಅವರ ರಾಜ್ಯದಲ್ಲೇ ಅದು ಕುಗ್ಗುತ್ತಿದೆ ಎಂಬುದನ್ನು ‘ಇಂಡಿಯಾ ಟುಡೇ’ ಎತ್ತಿ ತೋರಿಸಲು ಸಿದ್ಧವಿಲ್ಲ. ಇದು ವಿಪರ್ಯಾಸ.

‘ಇಂಡಿಯಾ ಟುಡೇ’ ಎಲ್ಲ ಸಿಎಂಗಳ ಅವರವರ ತವರು ರಾಜ್ಯದಲ್ಲಿ ಜನಪ್ರಿಯತೆ ಬಗ್ಗೆ ವಿವರ ನೀಡುವುದಿಲ್ಲ. ಕೆಲವೆಡೆ ಅದರ ಬಗ್ಗೆ ಅದು ಚಕಾರ ಎತ್ತುವುದಿಲ್ಲ. ವಾಸ್ತವ ಏನೆಂದರೆ ಸದ್ಯಕ್ಕೆ ತಮ್ಮ ರಾಜ್ಯಗಳಲ್ಲಿ ಅಷ್ಟು ಜನಪ್ರಿಯರಲ್ಲದ ಹಾಗು ಆಡಳಿತದಲ್ಲೂ ಎಡವಿರುವ ನಿತೀಶ್ ಕುಮಾರ್ ಹಾಗು ಮಮತಾ ಬ್ಯಾನರ್ಜಿಗಿಂತ ಉತ್ತರ ಪ್ರದೇಶದಲ್ಲಿ ಆದಿತ್ಯನಾಥ್ ಅವರ ಆಡಳಿತದ ಬಗ್ಗೆ ಜನರಿಗೆ ಅತೃಪ್ತಿಯಿದೆ. ಅಂದರೆ ‘ಇಂಡಿಯಾ ಟುಡೇ’ ಸಮೀಕ್ಷೆ ಪ್ರಕಾರವೇ ಆದಿತ್ಯನಾಥ್ ದೇಶದ ಅತ್ಯಂತ ಕಳಪೆ ನಿರ್ವಹಣೆ ತೋರುತ್ತಿರುವ ಸಿಎಂಗಳಲ್ಲಿ ಒಬ್ಬರು. ಆದರೆ ಈ ಸತ್ಯ ಹೊರಬರಬೇಕಾದರೆ ‘ಇಂಡಿಯಾ ಟುಡೇ’ ಎಲ್ಲ ಸಿಎಂ ಗಳ ‘ತವರು ರಾಜ್ಯ ರೇಟಿಂಗ್’ ಅನ್ನು ಬಹಿರಂಗಪಡಿಸಬೇಕು.

LEAVE A REPLY

Please enter your comment!
Please enter your name here