ಆನೆ ಮಾನವ ಸಂಘರ್ಷ ಪ್ರತಿಧ್ವನಿ

0

ಬೆಂಗಳೂರು:ಕೊಡಗು ಜಿಲ್ಲೆಯಲ್ಲಿ ಕಾಡಾನೆ ಮತ್ತು ಮಾನವ ಸಂಘರ್ಷ ನಿರಂತರವಾಗಿ ನಡೆಯುತ್ತಿದ್ದು, ಸಂಘರ್ಷಕ್ಕೆ ಸರ್ಕಾರ ಗುರುತಿಸಿರುವ ಪ್ರಮುಖ ಹಾಗೂ ವೈಜ್ಞಾನಿಕ ಕಾರಣಗಳೇನು ಎಂದು ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರು ಪ್ರಶ್ನಿಸಿದ್ದು
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಆನಂದ್ ಸಿಂಗ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಕಾಡಾನೆ ಮತ್ತು ಮಾನವ ಸಂಘರ್ಷಕ್ಕೆ ಪ್ರಮುಖ ಕಾರಣಗಳೆಂದರೆ, ಆನೆ ವಲಯ ಪ್ರದೇಶಗಳಲ್ಲಿ ಅತಿಯಾದ ವಾಹನ ಸಂಚಾರ ದಟ್ಟಣೆ ಹಾಗೂ ರಸ್ತೆಯಲ್ಲಿನ ಚಲನವಲನಗಳು, ಹೆಚ್ಚಿನ ಸಂಖ್ಯೆಯಲ್ಲಿ ತಲೆಯೆತ್ತುತ್ತಿರುವ ಪ್ರವಾಸಿ ಚಟುವಟಿಕೆಗಳು, ಆನೆ ವಲಯ ಪ್ರದೇಶಗಳಲ್ಲಿನ ಭೂ ಪ್ರದೇಶದ ಬಳಕೆಯಲ್ಲಿ ಬದಲಾವಣೆಗಳು ಎಂದು ಅವರು ಉತ್ತರಿಸಿದರು.
ಈ ಕಾರಣಗಳನ್ನು ಗುರುತಿಸಿದ ನಂತರದಲ್ಲಿ, ಸರ್ಕಾರ ಈ ಸಮಸ್ಯೆಯನ್ನು ಪರಿಹರಿಸಲು ಕೈಗೊಂಡಿರುವ ಕ್ರಮಗಳೇನು ಸಂಪೂರ್ಣ ವಿವರ ನೀಡುವಂತೆ ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಮರು ಪ್ರಶ್ನೆ ಹಾಕಿದ ಸಂದರ್ಭ
ಸಚಿವರು ಮಾನವ ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕಾಗಿ 51.37
ಕಿ.ಮೀ. ಸೋಲಾರ್ ತಂತಿ ಬೇಲಿ ನಿರ್ಮಾಣ ಮಾಡಲಾಗಿದೆ, ಅರಣ್ಯ ಅಂಚಿನ ಗ್ರಾಮಗಳಲ್ಲಿ ಆನೆಗಳು ಕಾಡಿನಿಂದ ನಾಡಿಗೆ ಬಾರದಂತೆ 45.41 ಕಿ.ಮೀ. ಆನೆ ತಡೆ ಕಂದಕ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ, ಅರಣ್ಯದಂಚಿನ ಗ್ರಾಮಗಳಲ್ಲಿ ರೈತರಿಗೆ ಶೇಕಡ 5೦:5೦ರ ರಿಯಾಯಿತಿಯಲ್ಲಿ ಸೋಲಾರ್ ತಂತಿ ಬೇಲಿ ನಿರ್ಮಾಣವನ್ನು ಕೈಗೊಳ್ಳಲು ಅರಣ್ಯ ಇಲಾಖೆಯಿಂದ ಶೇಕಡ 50 ರಷ್ಟು ಸಹಾಯಧನ ನೀಡಾಲಾಗುತ್ತಿದ್ದು, 2020-21ನೇ ಸಾಲಿನಲ್ಲಿ 4,783 ಕೀ.ಮೀ. ಕಾಮಗಾರಿ ಪ್ರಗತಿಯಲ್ಲಿದೆ, ಹಾಗೂ ಕಾಡಾನೆ ಹಾವಳಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು 13.42 ಕಿ.ಮೀ. ರೈಲ್ವೆ ಹಳಿಗಳ ಬ್ಯಾರಿಕೇಡ್ ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಪ್ರಸ್ತುತ 9,516 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ರೈಲ್ವೆ ಬ್ಯಾರಿಕೇಡ್ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಆನಂದ್ ಸಿಂಗ್ ಅವರು ಉತ್ತರಿಸಿದರು.ಕೊಡಗು ಜಿಲ್ಲೆಯ ಅರಣ್ಯ ವೃತ್ತದ ವ್ಯಾಪ್ತಿಯ ವಲಯಗಳಲ್ಲಿ ಕಾಡಾನೆ ಹಾವಳಿಯ ತುರ್ತು ನಿರ್ವಹಣೆಗಾಗಿ 22 ರ್‍ಯಾಪಿಡ್ ರೆಸ್ಪಾನ್ಸ್ ತಂಡ ರಚಿಸಿ ಕಾರ್ಯ ನಿರ್ವಹಿಸಲಾಗುತ್ತಿದೆ. ಆಯ್ದ ವಲಯಗಳಲ್ಲಿ ಕಾಡಾನೆ ಹಿಮ್ಮೆಟ್ಟಿಸುವ ತಂಡಗಳ ರಚನೆ ಮಾಡಲಾಗಿದೆ. ಕಾಡಾನೆ ಇರುವಿಕೆ, ಅವುಗಳ ಚಲನವಲನಗಳ ಬಗ್ಗೆ ಸಾರ್ವಜನಿಕರಿಗೆ ರೈತರಿಗೆ ಮಾಹಿತಿ ನೀಡುವ ಎಸ್‌ಎಂಎಸ್ ಅಲರ್ಟ್ ವ್ಯವಸ್ಥೆ ಕಾರ್ಯ ನಿರ್ವಹಿಸುತ್ತಿದೆ.
ವನ್ಯಪ್ರಾಣಿಗಳ ದಾಳಿಯಿಂದ ಭಾದಿತ ಗ್ರಾಮಗಳ ಜನರೊಂದಿಗೆ ಸಂಪರ್ಕ ಸಭೆ ನಡೆಸಲಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ 2014 ರಿಂದ ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ 13 ಕಾಡಾನೆಗಳನ್ನು ಸೆರೆಹಿಡಿದು ಸ್ಥಳಾಂತರ ಮಾಡಲಾಗಿರುತ್ತದೆ. ಜಿಲ್ಲೆಯಲ್ಲಿ 9 ಆನೆಗಳಿಗೆ ರೇಡಿಯೋ ಕಾಲರ್‌ಗಳನ್ನು ಅಳವಡಿಸಿ, ಅವುಗಳ ಚಲನವಲನಗಳ ಬಗ್ಗೆ ನಿಗಾ ವಹಿಸಲಾಗುತ್ತಿದೆ.
ಕೊಡಗು ಜಿಲ್ಲೆಯ ನಾಗರಹೊಳೆ ವ್ಯಾಪ್ತಿಯಲ್ಲಿ ರಕ್ಷಣಾ ಕೆಲಸಗಳಿಗಾಗಿ ಎಸ್‌ಟಿಪಿಎಫ್ ತಂಡ ನೇಮಕ ಮಾಡಿ ರಕ್ಷಣಾ ಕಾರ್ಯ ಕೈಗೊಳ್ಳಲಾಗುತ್ತಿದೆ.,
ಕೊಡಗು ಜಿಲ್ಲೆಯಲ್ಲಿ ಮಾನವ-ವನ್ಯಜೀವಿ ಸಂಘರ್ಷದಿಂದ ಭಾದಿತರಾದ ವ್ಯಕ್ತಿಗಳಿಗೆ ಸಾಮಾಜಿಕ ಮತ್ತು ಆರ್ಥಿಕ ಬೆಂಬಲ ನೀಡುವುದರ ಸೌಕರ್ಯಗಳನ್ನು ಒದಗಿಸುವ ಉದ್ದೇಶದಿಂದ ಕೊಡಗು ಮಾನವ ವನ್ಯಪ್ರಾಣಿ ಸಂಘರ್ಷ-ಉಪಶಮನ ಪ್ರತಿಷ್ಠಾನ ವನ್ನು ವೃತ್ತ ಮಟ್ಟದಲ್ಲಿ ಸ್ಥಾಪಿಸಲಾಗಿದೆ ಜಿಲ್ಲೆಗೆ ಸಂಬಂಧಿಸಿದ ಕಳೆದ 5 ವರ್ಷಗಳ ಅಂಕಿ-ಅಂಶಗಳ ವಿವರಗಳನ್ನು ನೀಡಿ ಕೊಡಗು ಜಿಲ್ಲೆಯಲ್ಲಿ 2016-17 ರಲ್ಲಿ 2831 ಪ್ರಕರಣ, 2017-18 ರಲ್ಲಿ 1742 ಪ್ರಕರಣ, 2018-19 ರಲ್ಲಿ 3915 ಪ್ರಕರಣ, 2019-20 ರಲ್ಲಿ 3703 ಪ್ರಕರಣ, ಆಗಸ್ಟ್-2020 ರ ಅಂತ್ಯಕ್ಕೆ 1174 ಪ್ರಕರಣ ಮಾನವ-ವನ್ಯಜೀವಿ ಸಂಘರ್ಷದಲ್ಲಿ ಕಳೆದ 5 ವರ್ಷದಲ್ಲಿ ದಾಖಲಾದ ಪ್ರಕರಣಗಳು ಎಂದು ತಿಳಿಸಿದರು.

LEAVE A REPLY

Please enter your comment!
Please enter your name here