ಆರ್​ ಆರ್​​ ನಗರ, ಶಿರಾ ಉಪಚುನಾವಣೆ – ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಗೊಂದಲ ಇಲ್ಲ: ಡಿಸಿಎಂ ಅಶ್ವತ್ಥನಾರಾಯಣ

0

ರಾಜರಾಜೇಶ್ವರಿ ನಗರ ಹಾಗೂ ತುಮಕೂರು ಜಿಲ್ಲೆಯ ಶಿರಾ ವಿಧಾನಸಭೆ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆಯನ್ನು ಪಕ್ಷದ ಕೋರ್ ಕಮಿಟಿಯು ಶೀಘ್ರದಲ್ಲೇ ಮಾಡುತ್ತದೆ. ಈ ಬಗ್ಗೆ ಪಕ್ಷದಲ್ಲಿ ಯಾವುದೇ ರೀತಿಯ ಗೊಂದಗಳು ಇಲ್ಲ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಸ್ಪಷ್ಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು. ರಾಜರಾಜೇಶ್ವರಿ ನಗರದಲ್ಲಿ ಮಾಜಿ ಶಾಸಕ ಮುನಿರತ್ನ ಅವರಿಗೆ ಟಿಕೆಟ್ ಕೊಡಬೇಕಾ? ಬೇಡವಾ? ಎನ್ನುವುದನ್ನು ಪಕ್ಷದ ನಾಯಕರು ನಿರ್ಧರಿಸುತ್ತದೆ. ಈ ವಿಷಯವನ್ನು ಬಹಿರಂಗವಾಗಿ ಚರ್ಚೆ ಮಾಡಲಾಗದು. ಪಕ್ಷದ ಮಟ್ಟದಲ್ಲಿ ಎಲ್ಲವೂ ಸಮಾಲೋಚನೆ ನಡೆಯುತ್ತಿದೆ. ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಣೆ ಹೊರಬೀಳುತ್ತದೆ ಎಂದು ತಿಳಿಸಿದರು. ಕಳೆದ ಒಂದು ವರ್ಷದಿಂದ ರಾಜ್ಯ ಸರಕಾರ ಉತ್ತಮವಾಗಿ ಕೆಲಸ ಮಾಡಿದೆ. ಕೋವಿಡ್‌ ನಿರ್ವಹಣೆ, ನೆರೆ ಸೇರಿ ಎಲ್ಲ ಸವಾಲುಗಳನ್ನು ಸಮರ್ಥವಾಗಿ ಎದುರಿಸಿದೆ ಎಂದರು.

ಅನೇಕ ಸುಧಾರಣೆಗಳನ್ನು ಜಾರಿಗೆ ತಂದಿದೆ. ಹೀಗಾಗಿ ರಾಜರಾಜೇಶ್ವರಿ ನಗರ ಮತ್ತು ಶಿರಾ ಹಾಗೂ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಪಕ್ಷವೇ ಗೆಲ್ಲುತ್ತದೆ ಎಂಬ ವಿಶ್ವಾಸ ನನಗಿದೆ. ಚುನಾವಣೆಗೆ ಪಕ್ಷ ಉತ್ತಮವಾಗಿ ಸಿದ್ಧತೆ ಮಾಡಿಕೊಂಡಿದೆ ಎಂದು ಡಿಸಿಎಂ ತಿಳಿಸಿದರು. ಕೋವಿಡ್ ಕಾರಣಕ್ಕೆ ಮನೆಯಲ್ಲೇ ಚಿಕಿತ್ಸೆ ಪಡೆದು, ಗುಣಮುಖರಾಗಿ ಬಂದ ಅವರು ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಿದ್ದರು.

ಶಾಲೆ- ಕಾಲೇಜು ಆರಂಭ ; ಶೀಘ್ರವೇ ಸ್ಪಷ್ಟ ಮಾಹಿತಿ

ರಾಜ್ಯದಲ್ಲಿ ಶಾಲಾ- ಕಾಲೇಜುಗಳನ್ನು ಆರಂಭ ಮಾಡುವ ಬಗ್ಗೆ ಶೀಘ್ರದಲ್ಲೇ ಸ್ಪಷ್ಟ ಮಾಹಿತಿಯನ್ನು ಸರಕಾರ ನೀಡಲಿದೆ ಎಂದು ಉನ್ನತ ಶಿಕ್ಷಣ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಹೇಳಿದರು. ಕಾಲೇಜುಗಳ ಆರಂಭಕ್ಕೆ ಸಂಬಂಧಿಸಿ ಯುಜಿಸಿ ಈಗಾಗಲೇ ಮಾರ್ಗಸೂಚಿಯನ್ನು ನೀಡಿದೆ. ಅದರಂತೆ ಸರಕಾರ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದೆ. ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ಎಸ್.‌ ಸುರೇಶ್‌ ಕುಮಾರ್‌ ಅವರ ಜತೆಗೂ ಚರ್ಚೆ ನಡೆಸಿದ ನಂತರ ಸ್ಪಷ್ಟ ಮಾಹಿತಿ ನೀಡಲಾಗುವುದು ಎಂದರು.

ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಯಾವುದೇ ಸಮಸ್ಯೆ ಆಗದಂತೆ ಎಲ್ಲ ಮುನ್ನೆಚ್ಚರಿಕೆಗಳನ್ನು ಕೈಗೊಂಡು ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಲಾಗಿದೆ. ಅದರ ಮುಂದುವರೆದ ಭಾಗವಾಗಿ ವಿದ್ಯಾರ್ಥಿಗಳು ಶಾಲೆ, ಕಾಲೇಜಿಗೆ ಎಂದಿನಿಂದ ಹಾಜರಾಗಬೇಕು ಎಂಬ ಬಗ್ಗೆ ಸಂಬಂಧಿತರ ಜತೆ ಚರ್ಚೆ ಮಾಡಲಾಗುವುದು ಎಂದರು

ಕೋವಿಡ್ ಗೆ ಮಾಸ್ಕ್ ರಾಮಬಾಣ :

ಕೋವಿಡ್‌ ತಡೆಗಟ್ಟಲು ಮಾಸ್ಕ್ ರಾಮಬಾಣ. ಮಾರಕ ವೈರಸ್ʼಗೆ ಮಾಸ್ಕ್ ಅತ್ಯುತ್ತಮ ಅಸ್ತ್ರವಾಗಿದೆ. ವೈಜ್ಞಾನಿಕವಾಗಿಯೂ ಈ ಅಂಶ ಸಾಬೀತಾಗಿದ್ದು, ಸಾರ್ವಜನಿಕರು ಇದನ್ನು ಅರ್ಥ ಮಾಡಿಕೊಂಡು ಮಾಸ್ಕ್ ಅನ್ನು ತಪ್ಪದೇ ಹಾಗೂ ಶುಚಿ ಮಾಡಿಕೊಂಡು ಬಳಸಬೇಕು ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು.

ವೈರಸ್‌ ಮತ್ತಷ್ಟು ಹರಡಲು ಬಿಡಬಾರದು. ಇದರಲ್ಲಿ ಪ್ರತಿಯೊಬ್ಬರ ಕರ್ತವ್ಯವೂ ಇದೆ. ಮಾಸ್ಕ್ ತೆಗೆದು ಮಾತನಾಡುವಂಥ ಕೆಲಸವನ್ನು ಯಾರು ಮಾಡಬಾರದು. ದಂಡ ವಿಧಿಸಲು ಸರಕಾರಕ್ಕೆ ಇಷ್ಟವಿಲ್ಲ. ಆದರೆ, ಜನರು ಈ ಬಗ್ಗೆ ಮೂಡಿಸಲಾಗಿರುವ ಜಾಗೃತಿಯ ಬಗ್ಗೆ ಗಮನ ಹರಿಸಬೇಕು ಎಂದು ಡಿಸಿಎಂ ಮನವಿ ಮಾಡಿದರು.

LEAVE A REPLY

Please enter your comment!
Please enter your name here