ಆಲೆಮನೆ ಮಾಲೀಕರಿಗೆ ₹ 4 ಲಕ್ಷದವರೆಗೆ ಸಾಲ: ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌

0

ಕೇಂದ್ರದ ಆತ್ಮನಿರ್ಭರ ಭಾರತ ಯೋಜನೆಯಡಿ ಮಂಡ್ಯ ಜಿಲ್ಲೆಯ ಸಾವಯವ ಬೆಲ್ಲಕ್ಕೆ ಅಂತರರಾಷ್ಟ್ರೀಯ ಮಾರುಕಟ್ಟೆ ಒದಗಿಸಲಾಗುವುದು. ಆಲೆಮನೆಗಳಿಗೆ ಪುನಶ್ಚೇತನ ನೀಡಲು ಮಾಲೀಕರಿಗೆ ₹ 4 ಲಕ್ಷದವರೆಗೆ ಸಾಲ ಸೌಲಭ್ಯ ಒದಗಿಸಲು ಚಿಂತನೆ ನಡೆಸಲಾಗಿದೆ’ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಹೇಳಿದರು.

ನಗರದ ಎಪಿಎಂಸಿ ಎದುರಿನ ಆಲೆಮನೆಗೆ ಭೇಟಿ ನೀಡಿ ಮಾತನಾಡಿದ ಅವರು ‘ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆತ್ಮ ನಿರ್ಭರ ಯೋಜನೆಯಡಿ ₹20 ಲಕ್ಷ ಕೋಟಿ ಅನುದಾನ ಘೋಷಣೆ ಮಾಡಿದ್ಧಾರೆ. ದೇಶದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಈ ಯೋಜನೆಯಡಿ ಸಾವಯವ ಬೆಲ್ಲ, ಹೈನುಗಾರಿಕೆ, ಮೀನುಗಾರಿಕೆಗೆ ಉತ್ತೇಜನ ನೀಡಲಾಗುವುದು. ಸಹಕಾರ ಇಲಾಖೆ ವತಿಯಿಂದ ಆರ್ಥಿಕ ಸಹಾಯ ಮಾಡಲು ಚಿಂತಿಸಲಾಗಿದೆ. ಆ ಮೂಲಕ ಆಲೆಮನೆಗಳಿಗೆ ಉತ್ತೇಜನ ನೀಡಲು ಪ್ರಯತ್ನಿಸಲಾಗುವುದು’ ಎಂದರು.

‘ಆಲೆಮನೆಗಳಿಗೆ ಹಣಕಾಸಿನ ನೆರವು ನೀಡುವ ದೃಷ್ಟಿಯಿಂದ, ಸಾಲ ಸೌಲಭ್ಯ ಒದಗಿಸಿ, ಆಲೆಮನೆ ಮಾಲೀಕರಿಗೆ ಶಕ್ತಿ ತುಂಬಲಾಗುವುದು. ಮಂಡ್ಯ ಬೆಲ್ಲ ದೇಶದ ವಿವಿಧೆಡೆ ಪ್ರಸಿದ್ಧಿ ಪಡೆದಿದ್ದು ಸಾವಯವ ಬೆಲ್ಲ ತಯಾರಿಗೆ ಉತ್ತೇಜನ ನೀಡಲಾಗುವುದು. ಆಲೆಮನೆಗಳಿಗೆ ಸಾಲ ಸೌಲಭ್ಯ ನೀಡಿದರೆ ಆಧುನಿಕ ಯಂತ್ರೋಪಕರಣಗಳನ್ನು ಅಳವಡಿಸಿಕೊಂಡು ಮೇಲ್ದರ್ಜೆಗೆ ಏರಿಸಲು ಸಹಾಯಕವಾಗುತ್ತದೆ’ ಎಂದರು.

‘ಈ ಬಗ್ಗೆ 5 ವಿಭಾಗಗಳ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ಕರೆದು ಚರ್ಚೆ ನಡೆಸಲಾಗುವುದು. ಉತ್ತೇಜನ ಹಾಗೂ ಅಭಿವೃದ್ಧಿಗೆ ಬೇಕಾದ ಅಗತ್ಯ ಸಿದ್ಧತೆ ಹಾಗೂ ಸಾಲ ಸೌಲಭ್ಯಗಳ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಆಲೆಮನೆ ಮಾಲೀಕರಿಗೆ ₹8 ಸಾವಿರದಿಂದ ₹4 ಲಕ್ಷದವರೆಗೆ ಸಾಲ ನೀಡಲಾಗುವುದು’ ಎಂದರು.

ಸಿಎಂ ಬದಲಾವಣೆ ಇಲ್ಲ: ‘ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡುತ್ತಾರೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಇನ್ನುಳಿದ ಅವಧಿಗೂ ಬಿ.ಎಸ್.ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಯಡಿಯೂರಪ್ಪ ಅವರು ಕೋವಿಡ್‌ ಸಂಕಷ್ಟ ಕಾಲವನ್ನು ಅತ್ಯಂತ ಪರಿಣಾಕಾರಿಯಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಅವರನ್ನು ಬದಲಾವಣೆ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದರು.

‘ಮೈಸೂರು ದಸರಾವನ್ನು ಸರಳವಾಗಿ ಆಚರಿಸಲು ಸಿದ್ಧತೆಗಳು ನಡೆಯುತ್ತಿದೆ. ಈ ಬಾರಿಯ ದಸರಾ ಉದ್ಘಾಟನೆಯನ್ನು 5 ಮಂದಿ ಕೊರೊನಾ ಯೋಧರು ಉದ್ಘಾಟಿಸಲಿದ್ದಾರೆ’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜೆ.ವಿಜಯಕುಮಾರ್, ನಗರ ಘಟಕ ಅಧ್ಯಕ್ಷ ವಿವೇಕ್, ಎಪಿಎಂಸಿ ಅಧ್ಯಕ್ಷೆ ವೈ.ಕೆ.ಪ್ರೇಮಾ ಮುಖಂಡರಾದ ಡಾ. ಸಿದ್ದರಾಮಯ್ಯ,ತಿಮ್ಮೇಗೌಡ, ಕೆ.ನಾಗಣ್ಣಗೌಡ ಇದ್ದರು.

********

ತರಕಾರಿ ಸಗಟು ವ್ಯಾಪಾರ ಸ್ಥಳಾಂತರಕ್ಕೆ ಮನವಿ
ಮಂಡ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಬೆಲ್ಲದ ಮಾರುಕಟ್ಟೆ ಸ್ಥಳಕ್ಕೆ ತರಕಾರಿ ಮಾರುಕಟ್ಟೆಯನ್ನೂ ಸ್ಥಳಾಂತರ ಮಾಡಬೇಕು ಎಂದು ಎಪಿಎಂಸಿ ಅಧ್ಯಕ್ಷೆ ವೈ.ಕೆ.ಪ್ರೇಮಾ ಸಚಿವರಿಗೆ ಮನವಿ ಸಲ್ಲಿಸಿದರು.

ಎಪಿಎಂಸಿ ಮಾರುಕಟ್ಟೆಯಲ್ಲಿ ಸದ್ಯ ಬೆಲ್ಲದ ವ್ಯಾಪಾರ ವಹಿವಾಟು ಮಾತ್ರ ನಡೆಯುತ್ತಿದೆ. ಬೆಲ್ಲದ ಸುಗ್ಗಿ ಹೊರತಾಗಿ ಇತರೆ ಕಾಲದಲ್ಲಿ ಮಾರುಕಟ್ಟೆ ಪ್ರಾಂಗಣದಲ್ಲಿ ಯಾವುದೇ ಆದಾಯ ಬರುವುದಿಲ್ಲ. ಈಗ 44 ಗೋದಾಮುಗಳು ಖಾಲಿ ಇವೆ. ನಗರದ ಹೃದಯಭಾಗ ಪೇಟೆಬೀದಯಲ್ಲಿ ನಡೆಯುತ್ತಿರುವ ತರಕಾರಿ ಸಗಟು ವ್ಯಾ‍ಪಾರಕ್ಕೆ ಸ್ಥಳದ ಕೊರತೆ ಇದ್ದು ಅದನ್ನು ಬೆಲ್ಲದ ಮಾರುಕಟ್ಟೆಗೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು.

ತರಕಾರಿ ಮಾರುಕಟ್ಟೆಯಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಲು ಸಾಧ್ಯವಾಗದೆ ಇರುವುದರಿಂದ ರೈತರಿಗೆ ಹಾಗೂ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿದೆ. ಈಗಾಗಲೇ ಸ್ಥಳಾಂತರಕ್ಕೆ ಅನೇಕ ಬಾರಿ ಮನವಿ ಮಾಡಿದರೂ ಅದು ಸಾಧ್ಯವಾಗಿಲ್ಲ. ಈಗಲಾದರೂ ಮಾರುಕಟ್ಟೆ ಸ್ಥಳಾಂತರ ಮಾಡುವ ಮೂಲಕ ಸಮಿತಿಗೆ ಆದಾಯ ಬರಲು ಅನುಕೂಲ ಮಾಡಿಕೊಡಬೇಕು ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.

LEAVE A REPLY

Please enter your comment!
Please enter your name here