ಇಂಗ್ಲೆಂಡ್‌ಗೆ ಆಸ್ಟ್ರೇಲಿಯ ಕ್ರಿಕೆಟ್ ತಂಡ ಪಯಣ

0

ಆಸ್ಟ್ರೇಲಿಯ ಕ್ರಿಕೆಟ್ ತಂಡ ರವಿವಾರ ಇಂಗ್ಲೆಂಡ್ ಪ್ರವಾಸ ಕೈಗೊಂಡಿದೆ. ಉಭಯ ತಂಡಗಳು ಪ್ರೇಕ್ಷಕರಿಲ್ಲದ ಸ್ಟೇಡಿಯಂಗಳಲ್ಲಿ, ಜೈವಿಕ ಸುರಕ್ಷಿತ ಶಿಷ್ಟಾಚಾರದೊಂದಿಗೆ ತಲಾ 3 ಪಂದ್ಯಗಳ ಏಕದಿನ ಹಾಗೂ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಸರಣಿಯನ್ನು ಆಡಲು ತಯಾರಿ ನಡೆಸಿವೆ.

ಜಾಗತಿಕ ಮಟ್ಟದಲ್ಲಿ ಕೊರೋನ ವೈರಸ್ ಹಾವಳಿ ಆರಂಭವಾದ ಬಳಿಕ ಇದೇ ಮೊದಲ ಬಾರಿ ಆಸ್ಟ್ರೇಲಿಯ ಕ್ರಿಕೆಟ್ ತಂಡ ತನ್ನ ದೇಶದಿಂದ ಹೊರಗೆ ಪ್ರಯಾಣ ಬೆಳೆಸಿದೆ.

ನ್ಯೂಝಿಲ್ಯಾಂಡ್ ವಿರುದ್ಧ ನಿಗದಿಯಾಗಿದ್ದ ಏಕದಿನ ಸರಣಿ ರದ್ದಾದ ಬಳಿಕ ಆಸ್ಟ್ರೇಲಿಯ ಮಾರ್ಚ್ 13ರಿಂದ ಯಾವುದೇ ಪಂದ್ಯ ಆಡಿಲ್ಲ. ನಾಯಕ ಸ್ಟೀವ್ ಸ್ಮಿತ್ ಸಿಡ್ನಿಯಿಂದಪರ್ತ್‌ಗೆ ತೆರಳಿದರು. ಅಲ್ಲಿಂದ ಚಾರ್ಟರ್ಡ್ ವಿಮಾನದಲ್ಲಿ ಆಸ್ಟ್ರೇಲಿಯ ಕ್ರಿಕೆಟ್ ತಂಡ ದೊಂದಿಗೆ ಲಂಡನ್‌ಗೆ ಪ್ರಯಾಣಿಸಿದರು. ಸ್ಮಿತ್ ಕಳೆದ ವರ್ಷ ಚೆಂಡು ವಿರೂಪ ಗೊಳಿಸಿದ ಪ್ರಕರಣದಲ್ಲಿ 12 ತಿಂಗಳ ನಿಷೇಧ ಶಿಕ್ಷೆ ಅನುಭವಿಸಿದ ನಂತರ ಇಂಗ್ಲೆಂಡ್‌ನಲ್ಲಿ ಕ್ರಿಕೆಟ್ ಪಂದ್ಯ ಆಡಿದಾಗ ಇಂಗ್ಲೆಂಡ್ ಅಭಿಮಾನಿಗಳು ಸ್ಮಿತ್‌ರನ್ನು ನಿಂದಿಸಿದ್ದರು. ಆಯಶಸ್ ಸರಣಿಯಲ್ಲಿ 110ರ ಸರಾಸರಿಯಲ್ಲಿ ಒಟ್ಟು 774 ರನ್ ಗಳಿಸಿದ್ದ ಸ್ಮಿತ್ ತನ್ನನ್ನು ನಿಂದಿಸಿದವರಿಗೆ ತಕ್ಕ ಉತ್ತರವನ್ನೇ ನೀಡಿದ್ದರು.

ಆಸ್ಟ್ರೇಲಿಯದ 21 ಸದಸ್ಯರಿರುವ ತಂಡ ಲಂಡನ್‌ಗೆ ತೆರಳಿದ್ದು, ಎರಡು ವಾರಗಳ ಕ್ವಾರಂಟೈನ್ ಸಮಯದಲ್ಲಿ ಕನಿಷ್ಠ ಐದು ಅಂತರ್-ತಂಡ ಪಂದ್ಯಗಳನ್ನು ಆಡಲಿದೆ. ಕಟ್ಟುನಿಟ್ಟಿನ ಜೈವಿಕ ಸುರಕ್ಷಿತ ವ್ಯವಸ್ಥೆ ಇರುವ ಸೌತಾಂಪ್ಟನ್‌ಗೆ ಆಸ್ಟ್ರೇಲಿಯ ತಂಡ ತೆರಳಲಿದೆ.

ಆಟಗಾರರು ಗಾಲ್ಫ್ ಆಡಬಹುದು ಆದರೆ, ಡ್ರಿಂಕ್ಸ್ ಅಥವಾ ಊಟಕ್ಕಾಗಿ ಹೊಟೇಲ್‌ನ್ನು ತೊರೆಯುವಂತಿಲ್ಲ. ಯಾವುದೇ ಬಯೋ ಸೆಕ್ಯೂರಿಟಿ ಉಲ್ಲಂಘನೆಯು ಸರಣಿಯನ್ನು ಗೊಂದಲಕ್ಕೆ ತಳ್ಳಬಹುದು.

ಟಿ-20 ಸರಣಿಯ ಮೊದಲ ಪಂದ್ಯವು ಸೆಪ್ಟಂಬರ್ 4ರಂದು ಸೌತಾಂಪ್ಟನ್‌ನ ರೋಸ್‌ಬೌಲ್‌ನಲ್ಲಿ ನಡೆಯಲಿದೆ. ಏಕದಿನ ಸರಣಿಯು ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫೋರ್ಡ್‌ನಲ್ಲಿ ಸೆಪ್ಟಂಬರ್ 10ರಿಂದ ಆರಂಭವಾಗಲಿದೆ.

LEAVE A REPLY

Please enter your comment!
Please enter your name here