ಇಂದಿನ ಐಕಾನ್ – ಅಸಾಮಾನ್ಯ ಜ್ಞಾನ ಮತ್ತು ಡಿಗ್ರಿಗಳ ಹಸಿವು ಶ್ರೀಕಾಂತ್ ಜೀಚ್ಕಾರ್.

0

ಇಂದಿನ ಐಕಾನ್ – ಅಸಾಮಾನ್ಯ ಜ್ಞಾನ ಮತ್ತು ಡಿಗ್ರಿಗಳ ಹಸಿವು ಶ್ರೀಕಾಂತ್ ಜೀಚ್ಕಾರ್.
ನಾಗಪುರ ಜಿಲ್ಲೆಯ ಕಾತೊಳ್ ಎಂಬ ಊರಿನಲ್ಲಿ ಜನಿಸಿದ ಶ್ರೀಕಾಂತ್ ಅವರ ಹೆಸರು ಲಿಮ್ಕಾ ದಾಖಲೆಯ ಪುಸ್ತಕದಲ್ಲಿ ಎರಡು ವಿಶೇಷವಾದ ಕಾರಣಕ್ಕೆ ದಾಖಲಾಗಿದೆ. ಭಾರತದಲ್ಲಿ ಅತೀ ಹೆಚ್ಚು ಡಿಗ್ರಿಗಳನ್ನು ಪಡೆದ ವ್ಯಕ್ತಿ ಎನ್ನುವುದು ಅವರ ಹಿರಿಮೆ. ನನ್ನ ಮಟ್ಟಿಗಂತೂ ಅವರು ಒಂದು ಅದ್ಭುತವೇ ಸರಿ.
ಶ್ರೀಕಾಂತ್ ಅವರ ತಂದೆ ಒಬ್ಬ ಶ್ರೀಮಂತ ರೈತರಾಗಿದ್ದರು. ಮಗನಿಗೆ ಬಾಲ್ಯದಿಂದಲೂ ತೀವ್ರವಾದ ಓದುವ ಆಸಕ್ತಿ. ಅದರಲ್ಲೂ ಜ್ಞಾನ ಮತ್ತು ಡಿಗ್ರೀ ಪಡೆಯುವ ಹಂಬಲ. ಅದರಿಂದಾಗಿ 17 ವರ್ಷಗಳ ಅವಧಿಯಲ್ಲಿ ಬರೋಬ್ಬರಿ 42 ಯುನಿವರ್ಸಿಟಿ ಪರೀಕ್ಷೆಗಳನ್ನು ಅವರು ಬರೆದರು. ಕೆಲವೊಮ್ಮೆ ವರ್ಷಕ್ಕೆ ಎರಡು, ಮೂರು ಪರೀಕ್ಷೆ ಬರೆದರು. ಬೇಸಿಗೆಯಲ್ಲಿ ಒಂದು ಪರೀಕ್ಷೆ ಬರೆದರೆ ಚಳಿಗಾಲಕ್ಕೆ ಮತ್ತೊಂದು ಪರೀಕ್ಷೆ ಬರೆಯುತ್ತಿದ್ದರು. ಬರೆದು ಮುಗಿಸಿದ್ದು ಬರೋಬ್ಬರಿ 20 ಪದವಿಗಳನ್ನು! ಅದರಲ್ಲಿ ಹೆಚ್ಚಿನವು ಸ್ನಾತಕೋತ್ತರ
ಪದವಿಗಳು! ಅವೆಲ್ಲವನ್ನೂ ಅವರು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು. ಅವರಿಗೆ ಹತ್ತಾರು ಚಿನ್ನದ ಪದಕಗಳು ದೊರೆತವು!
ಶ್ರೀಕಾಂತ್ ಮೊದಲು ಪಡೆದದ್ದು ಎಂಬಿಬಿಸ್ ಡಿಗ್ರಿ. ಅದರ ಬೆನ್ನಿಗೆ MD ಸ್ನಾತಕೋತ್ತರ ಪದವಿಯನ್ನು ಮುಗಿಸಿದರು. ಹಾಗಂತ ಅವರು ವೈದ್ಯರಾಗಿ ಪ್ರಾಕ್ಟಿಸ್ ಮಾಡಲೇ ಇಲ್ಲ! ಮರುವರ್ಷ ಕಾನೂನು ಪದವಿ ಪರೀಕ್ಷೆ ಬರೆದರು. ನಂತರ ಇಂಟರ್ ನ್ಯಾಷನಲ್ ಕಾನೂನು ಸ್ನಾತಕೋತ್ತರ ಪದವಿ ( LLM) ಪಡೆದರು.ಅದರ ಬೆನ್ನಿಗೆ ಪತ್ರಿಕೋದ್ಯಮದಲ್ಲಿ ಪದವಿ ಪಡೆದರು. ಸಂಸ್ಕೃತ ಭಾಷೆಯಲ್ಲಿ D.Litt ಪಡೆದು ಡಾಕ್ಟರ್ ಆದರು!
ವರ್ಷಕ್ಕೆ ಎರಡೆರಡು ಸ್ನಾತಕೊತ್ತರ ಪದವಿಗಳಂತೆ ಹತ್ತು ಪದವಿಗಳನ್ನು ಪೂರ್ತಿ ಮಾಡಿದರು. MA ( ಪಬ್ಲಿಕ್ ಅಡ್ಮಿನಿಸ್ಟ್ರೇಷನ್), MA ( Sociology), MA ( Economics), MA ( ಸಂಸ್ಕೃತ), MA ( ಇತಿಹಾಸ), MA ( English literature), MA ( Philosophy), MA ( Political science), MA ( Ancient Indian History), MA ( Psychology)… ಹೀಗೆ ಹತ್ತು ಸ್ನಾತಕೋತ್ತರ ಪದವಿಗಳನ್ನು ಪ್ರಥಮ ಶ್ರೇಣಿಯಲ್ಲಿ ಪಾಸಾದರು. ಅದರ ಜೊತೆ ಜೊತೆಗೆ ಮಾಸ್ಟರ್ಸ್ ಇನ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ( MBA) ಮತ್ತು ಡಿಪ್ಲೊಮಾ ಇನ್ ಬಿಸಿನೆಸ್ ಮೇನೆಜ್ಮೆಂಟ್ ( ಡಿಬಿಎಂ) ಪದವಿ ಕೂಡ ಮುಗಿಸಿದರು!
ಅಷ್ಟಕ್ಕೇ ಮುಗಿಯಿತು ಎಂದು ಭಾವಿಸಬೇಡಿ. ತನ್ನ 24 ನೆಯ ವಯಸ್ಸಿಗೆ ಇಂಡಿಯನ್ ಸಿವಿಲ್ ಸರ್ವಿಸ್ ಪರೀಕ್ಷೆಯನ್ನು ಬರೆದು ಮೊದಲ ಪ್ರಯತ್ನದಲ್ಲಿ ಐಪಿಎಸ್ ಪರೀಕ್ಷೆ ಪಾಸಾದರು! ತಕ್ಷಣ ರಾಜೀನಾಮೆ ಕೊಟ್ಟು ಒಂದೇ ವರ್ಷದಲ್ಲಿ ಐಎಎಸ್ ಪರೀಕ್ಷೆ ಬರೆದು ಪಾಸಾದರು! ನಾಲ್ಕು ತಿಂಗಳ ನಂತರ ಐಎಎಸ್ ಪದವಿಗೂ ರಾಜೀನಾಮೆ ಕೊಟ್ಟರು! ಕಾರಣ ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆ ಘೋಷಣೆ ಆಗಿತ್ತು. ಅವರು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆದು ಚುನಾವಣೆಗೆ ಸ್ಪರ್ಧೆ ಮಾಡಿ ಗೆದ್ದರು! ಆಗ ಅವರಿಗೆ ಕೇವಲ 26 ವರ್ಷ ಆಗಿತ್ತು! ಇಡೀ ಭಾರತದಲ್ಲಿ ಅವರು ಅತ್ಯಂತ ಕಿರಿಯ ವಯಸ್ಸಿನ ಶಾಸಕ ಆಗಿ ಎರಡನೇ ಬಾರಿ ಲಿಮ್ಕಾ ದಾಖಲೆ ಪುಸ್ತಕದಲ್ಲಿ ಸ್ಥಾನ ಪಡೆದರು! ಮೊದಲ ಬಾರಿ ಗೆದ್ದಾಗಲೇ ಮಹಾರಾಷ್ಟ್ರ ಸರಕಾರದಲ್ಲಿ ಮಂತ್ರಿಯಾಗಿ 14 ಖಾತೆಗಳನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಿದರು! ಮುಂದೆ ಆರು ವರ್ಷ ಮಹಾರಾಷ್ಟ್ರದ ಎಂಎಲ್ಸಿ ಆದರು. ಮುಂದೆ ಆರು ವರ್ಷ ಮಹಾರಾಷ್ಟ್ರದಿಂದ ರಾಜ್ಯಸಭೆಗೆ ಆಯ್ಕೆ ಆದರು.
ಅವರ ಮನೆಯಲ್ಲಿ 52,000 ಪುಸ್ತಕಗಳ ಖಾಸಗಿ ಲೈಬ್ರರಿ ಮಾಡಿದ್ದರು. ಅದರ ಜೊತೆಗೆ ಅವರು ವೃತ್ತಿಪರ ಫೋಟೋಗ್ರಾಫರ್ ಆಗಿದ್ದರು. ಪೈಂಟಿಂಗ್ ಮಾಡುತ್ತಿದ್ದರು. ರಂಗ ನಟರೂ ಆಗಿದ್ದರು.
ಇಷ್ಟೆಲ್ಲ ಸಾಧನೆಗಳನ್ನು ಮಾಡಿದ ಶ್ರೀಕಾಂತ್ ಜಿಚ್ಕಾರ್ ತಮ್ಮ 50ನೆಯ ವಯಸ್ಸಿಗೆ ನಾಗಪುರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ನಿಧನರಾದರು.
🙏ಅಷ್ಟೊಂದು ಡಿಗ್ರೀ ಪಡೆದು ಏನು ಲಾಭ ಎಂದು ನೀವು ಕೇಳಬಹುದು. ಆದರೆ ಶ್ರೀಕಾಂತ್ ಹೇಳುವ ಹಾಗೆ ಅವರಿಗೆ ಡಿಗ್ರೀ ಪಡೆಯುವ ಹಂಬಲಕ್ಕಿಂತ ಜ್ಞಾನವನ್ನು ಪಡೆಯುವ ಹಂಬಲ ತೀವ್ರವಾಗಿತ್ತು! ಇಂದು ( ಸೆಪ್ಟೆಂಬರ್ 14) ಅವರ ಹುಟ್ಟಿದ ಹಬ್ಬ. ಅವರಿಗೊಂದು ಸೆಲ್ಯೂಟ್ ಹೇಳೋಣ ಅಲ್ಲವೇ?
☑ ಬರಹ – ರಾಜೇಂದ್ರ ಭಟ್ ಕೆ.

LEAVE A REPLY

Please enter your comment!
Please enter your name here