ಇಂದಿನ ಐಕಾನ್ – ರೀಲಲ್ಲಿ ವಿಲನ್, ರಿಯಲಲ್ಲಿ ಹೀರೋ ಸೋನು ಸೂದ್!

0

ಇಡೀ ದೇಶವೇ ಇಂದು ಸಾಂಕ್ರಾಮಿಕವಾದ ಕೋವಿಡ್ 19 ಸೋಂಕಿಗೆ ಸಿಲುಕಿ ನಲುಗಿ ಹೋಗುತ್ತಿರುವ ಸಂದರ್ಭದಲ್ಲಿ ಒಬ್ಬ ನಿಜವಾದ ಹೀರೋ ಮೂಡಿ ಬಂದಿದ್ದಾನೆ. ಸಿನೆಮಾ ರಂಗದಿಂದ ಕೋಟಿ ಕೋಟಿ ಹಣ ಬಾಚಿದ ಸೂಪರ್ ಸ್ಟಾರ್ ನಟರು ಇದ್ಯಾವುದೂ ತನಗೆ ಸಂಬಂಧವೇ ಇಲ್ಲ ಎಂದು ಮನೆಯಲ್ಲಿ ಬೆಚ್ಚಗೆ ಕೂತಿರುವ ಸಂದರ್ಭದಲ್ಲಿ ಒಬ್ಬ ಸಾಮಾನ್ಯ ನಟ ಫೀಲ್ದಿಗೆ ಇಳಿದು ಜನರ ಕಷ್ಟಗಳಿಗೆ ಅತ್ಯಂತ ವೇಗವಾಗಿ ಸ್ಪಂದಿಸುತ್ತ ತನ್ನಿಂದ ಸಾಧ್ಯ
ಆದಷ್ಟು ಸಹಾಯವನ್ನು ಮಾಡುತ್ತಾ ಎಲ್ಲರ ಹೃದಯಗಳನ್ನು ಗೆದ್ದಿದ್ದಾನೆ. ಆತನೇ ಬಹುಭಾಷಾ ನಟ, ಗುಣದಲ್ಲಿ ಹೃದಯವಂತ ಸೋನು ಸೂದ್!
ಆತ ಹುಟ್ಟಿದ್ದು ಪಂಜಾಬಿನ ಮೊಗಾ ಎಂಬ ಪುಟ್ಟ ಊರಲ್ಲಿ. ಅವನ ತಂದೆ ಬಟ್ಟೆ ವ್ಯಾಪಾರಿ. ತಾಯಿ ಶಿಕ್ಷಕಿ. ಇವನೊಬ್ಬ ಮಾತ್ರ ಗಂಡು ಮಗ. ಉಳಿದವರು ಇಬ್ಬರು ಹೆಣ್ಣು ಮಕ್ಕಳು. ಮಧ್ಯಮ ವರ್ಗದ ಕುಟುಂಬ. ಸೋನು ಸ್ವಂತ ಪ್ರತಿಭೆಯಿಂದ ಇಂಜಿನಿಯರಿಂಗ್ ಸೀಟ್ ಸಂಪಾದನೆ ಮಾಡುತ್ತಾನೆ. ನಾಗಪುರದ ಯಶವಂತ್ ರಾವ್ ಚೌಹಾಣ್ ಕಾಲೇಜಿನಲ್ಲಿ ಆತ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ ಪಡೆಯುತ್ತಾನೆ. ಕಟ್ಟು ಮಸ್ತಾದ ದೇಹ, ಗಡಸು ಕಂಠ, ಚುರುಕಾದ ಕಣ್ಣುಗಳು, ನೆರಿಗೆ ಬೀಳದ ಮುಖ ಇವುಗಳು ಅವನನ್ನು ಮಾಡೆಲಿಂಗ್ ಕ್ಷೇತ್ರಕ್ಕೆ ಕರೆದುಕೊಂಡು ಬಂದವು. ಮುಂದೆ ಸಿನೆಮಾದಲ್ಲಿ ಅಭಿನಯಿಸುವ ಅವಕಾಶವನ್ನು ಹುಡುಕಿಕೊಂಡು ಮುಂಬೈಗೆ ಬಂದಾಗ ಕಿಸೆಯಲ್ಲಿ ಇದ್ದದ್ದು 5,500 ರೂಪಾಯಿ ಮಾತ್ರ! ಅದೂ ಖಾಲಿಯಾಗಿ ಉಪವಾಸ ಮಲಗುವ ಸಂದರ್ಭದಲ್ಲಿ ಕೂಡ ತನ್ನ ಕನಸನ್ನು ಆತ ಬಿಟ್ಟು ಕೊಡಲಿಲ್ಲ. ಒಂದು ಕಡೆ ಮಾಡೆಲಿಂಗ್, ಮತ್ತೊಂದು ಕಡೆ ಜಾಹೀರಾತು ಚಿತ್ರಗಳು ಹೀಗೆ ಸೋನು ಅವಕಾಶಕ್ಕಾಗಿ ಎರಡು ವರ್ಷಗಳ ಕಾಲ ಕಾದರು.
1999ರಲ್ಲೀ ಎರಡು ತಮಿಳು ಸಿನೆಮಾಗಳಲ್ಲಿ ವಿಲನ್ ಪಾತ್ರ ದೊರೆಯಿತು. ನಂತರ ತೆಲುಗು ಸಿನೆಮಾ ರಂಗ ಅವರನ್ನು ಸಿಕ್ಕಾಪಟ್ಟೆ ಬೆಳೆಸಿತು. ಸೂಪರ್, ಆತಡು, ಅರುಂಧತಿ, ರಮಯ್ಯಾ ವಸ್ತವಯ್ಯ, ಹ್ಯಾಂಡ್ಸ್ ಅಪ್…ಮೊದಲಾದ ಸಿನೆಮಾಗಳು ಸೂಪರ್ ಹಿಟ್ ಆದವು. ಅರುಂಧತಿ ಸಿನೆಮಾ ಅನುಷ್ಕಾ ಶೆಟ್ಟಿಗೆ ಪುನರ್ಜನ್ಮ ಕೊಟ್ಟ ಹಾಗೆ ಸೋನುಗೆ ಕೂಡ ಬಹು ದೊಡ್ಡ ಬ್ರೇಕ್ ತ್ರೂ ಕೊಟ್ಟಿತು. ಬೆಸ್ಟ್ ವಿಲ್ಲನ್ ಪ್ರಶಸ್ತಿ ಬಂದಿತು. ಮುಂದೆ ಹಿಂದಿಯಲ್ಲಿ ಯುವಾ, ಶಹೀದ್ ಯೆ ಅಜಮ್, ಡಬಾಂಗ್, ಜೋಧಾ ಅಕ್ಬರ್, R….ರಾಜಕುಮಾರ್ ಹೀಗೆ ಸಾಲು ಸಾಲು ಚಿತ್ರಗಳು ಸೋನುಗೆ ಬಲು ಗಟ್ಟಿಯಾದ ಬೇಸನ್ನು ಒದಗಿಸಿದವು. ಕನ್ನಡದ ವಿಷ್ಣುವರ್ಧನ ಮತ್ತು ಕುರುಕ್ಷೇತ್ರ ( ಅರ್ಜುನನ ಪಾತ್ರ) ಸಿನೆಮಾಗಳಲ್ಲಿ ಅಭಿನಯ ಮಾಡಿರುವ ಸೋನು ಕನ್ನಡಿಗರ ಮನ ಗೆದ್ದರು. ತಮಿಳು, ತೆಲುಗು, ಹಿಂದಿ, ಕನ್ನಡ, ಉರ್ದು, ಪಂಜಾಬಿ, ಇಂಗ್ಲಿಷ್ ಹೀಗೆ ಏಳು ಭಾಷೆಗಳಲ್ಲಿ ಆರುವತ್ತು ಸಿನೆಮಾಗಳನ್ನು ಸೋನು ಪೂರ್ತಿ ಮಾಡಿದ್ದಾರೆ. ಎಲ್ಲವೂ ಗುರುತಿಸಲ್ಪಡುವ ಪಾತ್ರಗಳು. ಹೆಚ್ಚಿನವು ವಿಲನ್ ಪಾತ್ರಗಳು.
ಅಂತಹ ಸೋನು ಇಂದು ರಿಯಲ್ ಲೈಫ್ ಹೀರೋ ಆಗಿ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಕೋವಿಡ್ ಮತ್ತು ಲಾಕ್ ಡೌನ್ ಪರಿಣಾಮದಿಂದ ಸಂತ್ರಸ್ತರಾದ ಸಾವಿರಾರು ವಲಸೆ ಕಾರ್ಮಿಕರನ್ನು ಒಟ್ಟು ಸೇರಿಸಿ ಅವರ ಮೂಲ ಊರುಗಳಿಗೆ ಸುರಕ್ಷಿತವಾಗಿ ತಲುಪಿಸಲು ಉಚಿತವಾದ ಬಸ್ಸು, ರೈಲು ವ್ಯವಸ್ಥೆಯನ್ನು ಸೋನು ಮಾಡಿದ್ದಾರೆ. ತನ್ನ ಸ್ನೇಹಿತರ ತಂಡ ಕಟ್ಟಿಕೊಂಡು ಹಗಲು, ರಾತ್ರಿ ಹುಡುಕಾಡಿ ನೆಲೆ ಕಳೆದುಕೊಂಡವರಿಗೆ ಉಚಿತ ಸಾಗಾಟದ, ಔಷಧಿಯ ಮತ್ತು ಆಹಾರದ ವ್ಯವಸ್ಥೆ ಮಾಡಿದ್ದಾರೆ! ಕಿರ್ಗಿಸ್ಥಾನದಲ್ಲಿ ಸಿಕ್ಕಿ ಹಾಕಿಕೊಂಡಿದ್ದ 1,500 ಭಾರತೀಯ ಮೂಲದ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆದುಕೊಂಡು ಬರಲು ಉಚಿತವಾದ ಚಾರ್ಟರ್ ವಿಮಾನಗಳ ವ್ಯವಸ್ಥೆಯನ್ನು ಸೋನು ಮಾಡಿದ್ದಾರೆ! ಮಾಸ್ಕೊದಲ್ಲಿ ಲಾಕ್ ಡೌನ್ ಆಗಿ ಸಿಕ್ಕಿ ಹಾಕಿಕೊಂಡಿದ್ದ ಭಾರತೀಯ ಮೂಲದ 101 ಮೆಡಿಕಲ್ ವಿದ್ಯಾರ್ಥಿಗಳನ್ನು ಚಾರ್ಟರ್ ವಿಮಾನದ ಮೂಲಕ ಭಾರತಕ್ಕೆ ಕರೆದುಕೊಂಡು ಬಂದಿದ್ದಾರೆ!
ಅಷ್ಟು ಮಾತ್ರವಲ್ಲ ಪತ್ರಿಕೆಯಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಆಗುವ ಸಂಕಷ್ಟದ ನೂರಾರು ವರದಿಯನ್ನು ಗಮನಿಸಿ ಅವುಗಳಿಗೆ ತಕ್ಷಣ ಸ್ಪಂದನೆ ನೀಡಿದ್ದಾರೆ. ಕರ್ನಾಟಕದ ಯಾದಗಿರಿಯ ಬಡ ಕುಟುಂಬದ ಮೂರು ಮಕ್ಕಳನ್ನು ದತ್ತು ಸ್ವೀಕಾರ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ನೂರಾರು ಕುಟುಂಬಗಳಿಗೆ ಮೂರು ತಿಂಗಳ ದಿನಸಿ ವಸ್ತುಗಳು ಮತ್ತು ಔಷಧ ಸಾಮಗ್ರಿ ನೀಡಿದ್ದಾರೆ. ಕರ್ನಾಟಕದಲ್ಲಿ ಆನ್ಲೈನ್ ತರಗತಿಗಳನ್ನು ಮಿಸ್ ಮಾಡುತ್ತಿದ್ದ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಮೊಬೈಲ್ ಫೋನ್ ಉಡುಗೊರೆಯಾಗಿ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಒಬ್ಬ ರೈತನ ಮಗಳು ನೊಗಕ್ಕೆ ಭುಜ ಕೊಟ್ಟು ಗದ್ದೆ ಉಳುವ ಫೋಟೋ ನೋಡಿ ದುಃಖ ಪಟ್ಟು ಟ್ರಾಕ್ಟರ್ ಕಳುಹಿಸಿಕೊಟ್ಟಿದ್ದಾರೆ.
ವಲಸೆ ಕಾರ್ಮಿಕರು ಕೆಲಸ ಕಳೆದುಕೊಂಡು ಕಷ್ಟ ಪಡುವುದನ್ನು ಗಮನಿಸಿ ಅವರಿಗೆ ಕೆಲಸ ಕೊಡುವ ‘ಪ್ರವಾಸಿ ರೋಜಗಾರ್ ‘ ಎಂಬ ಹೆಸರಿನ ಆಪ್ ಒಂದನ್ನು ಲಾಂಚ್ ಮಾಡಿದ್ದಾರೆ. ಸಿನೆಮಾ ಸೇರುವ ಮೊದಲು ತಾನು ಪಟ್ಟ ಕಷ್ಟಗಳನ್ನು ನೆನಪಿಟ್ಟುಕೊಂಡು ನೊಂದವರ ಕಣ್ಣೀರು ಒರೆಸುವ ಕೆಲಸವನ್ನು ನಿರಂತರವಾಗಿ ಸೋನು ಮಾಡುತ್ತಿದ್ದಾರೆ. ಅವರ ಎಲ್ಲಾ ಮಾನವೀಯ ಸೇವೆಗಳಿಗೆ ಅವರ ಪತ್ನಿ ಸೋನಾಲಿ ಸೂದ್ ಬೆಂಬಲ ನೀಡುತ್ತಿದ್ದಾರೆ.
🙏 “ಮನುಕುಲದ ಸೇವೆಯೇ ಜೀವನದ ಅತ್ಯುತ್ತಮ ಕಾರ್ಯ” ಎಂದು ಅರ್ಥ ಮಾಡಿಕೊಂಡು ಸೇವೆ ಸಲ್ಲಿಸುತ್ತಿರುವ ಸೋನು ಸೂದ್ ಅವರಿಗೆ ನಮ್ಮ ಒಂದು ಸೆಲ್ಯೂಟ್ ಇರಲಿ. ಏನಂತೀರಿ?
☑ ಬರಹ – ರಾಜೇಂದ್ರ ಭಟ್ ಕೆ.

LEAVE A REPLY

Please enter your comment!
Please enter your name here