ಇಂದಿನ ಐಕಾನ್ – ವಿಠ್ಠಲ ಬೇಲಾಡಿ ಎಂಬ ಮಹಾಗುರು. ( ನನ್ನ ಕಾರ್ಕಳದ ಮೊತ್ತ ಮೊದಲ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ).

0

ಇಂದಿನ ಐಕಾನ್ – ವಿಠ್ಠಲ ಬೇಲಾಡಿ ಎಂಬ ಮಹಾಗುರು. ( ನನ್ನ ಕಾರ್ಕಳದ ಮೊತ್ತ ಮೊದಲ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ).
ನಾನು 30 ವರ್ಷಗಳಿಂದ ಬಹಳ ಗೌರವದಿಂದ ಆರಾಧಿಸಿಕೊಂಡು ಬಂದಿರುವ ಒಬ್ಬ ಮಹಾಶಿಕ್ಷಕ ವಿಠ್ಠಲ ಬೇಲಾಡಿ ಅವರು ನಮ್ಮ ಇಂದಿನ ಐಕಾನ್. 1984-85ರ ಇಸವಿಯಲ್ಲಿ ಅವರು ನನ್ನ ಕಾರ್ಕಳ ತಾಲೂಕಿಗೆ ಶಿಕ್ಷಕರ ಮೊದಲ ರಾಷ್ಟ್ರಪ್ರಶಸ್ತಿಯನ್ನು ತಂದು ಕೊಟ್ಟವರು ಎಂಬ ಹೆಮ್ಮೆ ನಮಗೆ. ಶಿಕ್ಷಣ ಕ್ಷೇತ್ರಕ್ಕೆ ಅವರಷ್ಟು ಸಮರ್ಪಣಾ ಭಾವದಿಂದ ತೊಡಗಿಸಿಕೊಂಡ ಇನ್ನೊಬ್ಬ ಶಿಕ್ಷಕ ನಮಗೆ ಅನ್ಯತ್ರ ದುರ್ಲಭ!
ವಿಠ್ಠಲ ಮಾಸ್ಟ್ರು ಹುಟ್ಟಿದ್ದು ಕೇರಳ ರಾಜ್ಯದ ಮಂಜೇಶ್ವರ ಸಮೀಪದ ಒಂದು ಸಣ್ಣ ಹಳ್ಳಿ ಪಳ್ಳತಡ್ಕದಲ್ಲಿ. ತಂದೆ ಬಿರ್ಮಣ್ಣ ಶೆಟ್ಟಿ. ತಾಯಿ ಬಾಗಿ ಶೆಟ್ಟಿ. ಬುನಾದಿ ಶಿಕ್ಷಣ ಪಡೆದದ್ದು ಮೀಯಪದವು ವಿದ್ಯಾವರ್ಧಕ ಶಾಲೆಯಲ್ಲಿ. ಎಂಟನೇ ತರಗತಿ ಮುಗಿಸಿ ಮುಂದೆ ಓದುವ ಉತ್ಸಾಹ ಇದ್ದರೂ ಬಾಲ್ಯದ ಹಸಿವು ಮತ್ತು ಬಡತನ ಅವರನ್ನು ಹೆಚ್ಚು ಓದಲು ಬಿಡಲಿಲ್ಲ. ಶಿಕ್ಷಕರ ತರಬೇತಿ ಪಡೆದದ್ದು ಉಜಿರೆಯ ಸಿದ್ಧವನದಲ್ಲಿ.
ಶಿಕ್ಷಣ ತರಬೇತಿಯನ್ನು ಮುಗಿಸಿ ಕಾರ್ಕಳದ ಕಡೆಗೆ ಉದ್ಯೋಗ ಹುಡುಕಿ ಬಂದ ಅವರಿಗೆ ಮೊದಲು ಬರೆಬೈಲು ಎಂಬಲ್ಲಿ ಇದ್ದ ಒಂದು ಅನುದಾನಿತ ಶಾಲೆಯಲ್ಲಿ ಒಂದೂವರೆ ತಿಂಗಳು ಮೇಷ್ಟ್ರ ಕೆಲಸ ದೊರೆಯಿತು. ಮುಂದೆ ಬೇಲಾಡಿಯ ಅನುದಾನಿತ ಶಾಲೆಯ ಸಂಚಾಲಕರಾದ ಮಾರಣ್ಣ ಮಾಡ ಅವರನ್ನು ಭೇಟಿ ಮಾಡಿ ಕೆಲಸ ಕೇಳಿದರು. ಆಗ ಸಂಚಾಲಕರು ಹೇಳಿದ್ದು ಒಂದೇ ಮಾತು. “ಹುಡುಗ, ನಿನ್ನ ಮುಖದಲ್ಲಿ ಒಂದು ವರ್ಚಸ್ಸು ಇದೆ. ನಿನ್ನ ಸರ್ಟಿಫಿಕೇಟ್ ಯಾವುದೂ ನನಗೆ ಬೇಡ. ನಾಳೆಯಿಂದ ಕೆಲಸಕ್ಕೆ ಬಾ!” ಮಾರಣ್ಣ ಮಾಡರ ಆ ಒಂದು ನಂಬಿಕೆ ಹುಡುಗನನ್ನು ಬಹಳ ಎತ್ತರಕ್ಕೆ ಬೆಳೆಸಿತು! ಶಾಲೆಯನ್ನು ಕೂಡ. ಆಗಿನ್ನೂ ಮೇಷ್ಟ್ರಿಗೆ 19 ವರ್ಷ. ಬಿಸಿ ರಕ್ತ!
ಮಂಜೇಶ್ವರದ ಮೂಲೆಯಿಂದ ಬೇಲಾಡಿಗೆ ಬಂದ ಮೇಷ್ಟ್ರು ಮುಂದೆ ಅದೇ ಊರಿನವರಾದರು. ಅಲ್ಲೇ ನೆಲೆಸಿದರು. ಅವರ ಮೊದಲ ತಿಂಗಳ ವೇತನ ಕೇವಲ 49 ರೂಪಾಯಿ ಅಂದರೆ ನಂಬುವುದು ಕಷ್ಟ ಆಗುತ್ತದೆ. ವರ್ಷಕ್ಕೆ 50 ಪೈಸೆ ಇನ್ಕ್ರಿಮೆಂಟ್! ಆಗಿನ ಕಾಲದ ಶಿಕ್ಷಕರಿಗೆ ಅದೆಲ್ಲವೂ ನಗಣ್ಯ. ಅವರಿಗೆ ಬೇಕಾದದ್ದು ವಿದ್ಯಾರ್ಥಿಗಳ ಭವಿಷ್ಯ ಮತ್ತು ಶಾಲೆಯ ಪ್ರಗತಿ. ಅವರು ಯಾರೂ ಗಡಿಯಾರ ನೋಡಿ ಪಾಠ ಮಾಡಲಿಲ್ಲ. ವಿಠ್ಠಲ ಮೇಷ್ಟ್ರು ಮುಂದಿನ 40 ವರ್ಷ ತಮ್ಮನ್ನು ಮರೆತರು. ಶಾಲೆ, ಮಕ್ಕಳು ಮತ್ತು ತಮ್ಮ ಸಹೋದ್ಯೋಗಿಗಳು ಇವಷ್ಟೇ ಅವರ ಪ್ರಪಂಚ! ಆಡಳಿತ ಮಂಡಳಿಯ ಪೂರ್ಣ ಸಹಕಾರ ಪಡೆದ ಅವರು ಬೇಲಾಡಿಯ ಅನುದಾನಿತ ಶಾಲೆಯನ್ನು ಬಹು ಎತ್ತರಕ್ಕೆ ತೆಗೆದುಕೊಂಡು ಹೋದರು. ಒಬ್ಬ ಮುಖ್ಯೋಪಾಧ್ಯಾಯ ಹೇಗಿರಬೇಕು ಎನ್ನುವುದಕ್ಕೆ ಒಂದು ಉತ್ತಮ ಮಾದರಿ ಎಂದರೆ ಅದು ವಿಠ್ಠಲ ಮೇಷ್ಟ್ರು. ಶಿಕ್ಷಣ ಅಂದರೆ ಅದು ಬರೆ ಜ್ಞಾನ ಸಂಪಾದನೆ ಮಾತ್ರವಲ್ಲ, ಅದು ಸಂಸ್ಕಾರ, ಸಂಸ್ಕೃತಿ ಮತ್ತು ಆತ್ಮವಿಶ್ವಾಸಗಳನ್ನು ತುಂಬಬೇಕು ಎಂದು ಬಲವಾಗಿ ನಂಬಿದರು. ತಮ್ಮ ಸೇವೆಯ ಅವಧಿಯಲ್ಲಿ ಅದನ್ನೇ ಮಾಡುತ್ತ ಬಂದರು. ಬೇಲಾಡಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಯು ಜೀವನದಲ್ಲಿ ಎಂದಿಗೂ
ಸೋಲಬಾರದು ಎನ್ನುವುದು ಅವರ ಅಫಿದಾವಿತ್!
ಶಾಲೆಯಲ್ಲಿ ಪ್ರತೀ ಶುಕ್ರವಾರ ಭಜನೆ ಆರಂಭ ಮಾಡಿದರು. 10,000ಕ್ಕಿಂತ ಅಧಿಕ ಪುಸ್ತಕಗಳನ್ನು ಸಂಗ್ರಹಿಸಿ ಅದ್ಭುತ ಗ್ರಂಥಾಲಯವನ್ನು ಮಾಡಿದರು. ಅವರ ಗ್ರಂಥಾಲಯದ ಒಪ್ಪ ಓರಣ ನೋಡಿ ನಾನು ಆಶ್ಚರ್ಯ ಪಟ್ಟಿದ್ದೇನೆ. ಹತ್ತಾರು ಗ್ರಾಮಗಳನ್ನು ಕಾಲ್ನಡಿಗೆಯಲ್ಲಿ ಸಂಚಾರ ಮಾಡಿ ಪೋಷಕರನ್ನು ಮಾತಾಡಿಸಿ ಶಾಲೆಯಲ್ಲಿ ಉತ್ತಮ ಮಕ್ಕಳು ಬರುವ ಹಾಗೆ ಮಾಡಿದರು. ಆರಂಭದಲ್ಲಿ 75 ಮಕ್ಕಳು ಇದ್ದ ಶಾಲೆ ನಮ್ಮ ಮೇಷ್ಟ್ರ ನಾಯಕತ್ವದಲ್ಲಿ 350 ಮಕ್ಕಳನ್ನು ಪಡೆಯಿತು. 13 ಅತ್ಯುತ್ತಮ ಶಿಕ್ಷಕರನ್ನು ಒಳಗೊಂಡಿತ್ತು. ಆ ಎಲ್ಲಾ ಅಧ್ಯಾಪಕರು ಒಬ್ಬರಿಗಿಂತ ಒಬ್ಬರು ಸೇವಾ ಮನೋಭಾವ ಇದ್ದವರು ಮತ್ತು ಮುಖ್ಯ ಗುರುಗಳಾದ ವಿಠ್ಠಲ ಶೆಟ್ಟಿ ಅವರನ್ನು ಅನುಸರಿಸಿದರು.
ತನ್ನ ಶಾಲೆಯಲ್ಲಿ ಅವರು 1958ರಲ್ಲೀ ದಸರಾ ನಾಡಹಬ್ಬದ ಕಾರ್ಯಕ್ರಮ ಆರಂಭ ಮಾಡಿದರು. ಅದು ನಾಲ್ಕು ದಿನಗಳ ಕಾಲ ನಡೆಯುವ ಊರಿನ ಅತೀ ದೊಡ್ಡ ಸಾಂಸ್ಕೃತಿಕ, ಸಾಹಿತ್ಯದ ಹಬ್ಬ ಆಯಿತು. ಶಾರದೆಯ ಮಣ್ಣಿನ ಮೂರ್ತಿ ಪ್ರತಿಷ್ಠಾಪನೆ ಮಾಡಿ ನಾಲ್ಕು ದಿನಗಳ ಕಾಲ ಪೂಜೆ, ಭಜನೆ, ಅನ್ನ ಪ್ರಸಾದ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ದಸರಾ ನಾಡ ಹಬ್ಬದ ಮೆರುಗನ್ನು ಹೆಚ್ಚಿಸಿದವು. ಆ ಉತ್ಸವದ ವೇದಿಕೆಯಲ್ಲಿ ಕರಾವಳಿ ಕರ್ನಾಟಕದ ಶ್ರೇಷ್ಟ ಕವಿಗಳು, ಸಾಹಿತಿಗಳು, ವಿದ್ವತ್ ಶಿಖರಗಳು ಮಿಂಚಿದವು. ಆ ಉತ್ಸವ ಕಳೆದ ವರ್ಷದವರೆಗೆ ನಿರಂತರ 61 ವರ್ಷ ನಡೆದು ಬಂದಿತು. ಇದೊಂದು ಐತಿಹಾಸಿಕ ದಾಖಲೆಯೇ ಸರಿ! ಆ ಉತ್ಸವದ ಉಳಿಕೆಯಾದ ಆರೇಳು ಲಕ್ಷ ರೂಪಾಯಿಯನ್ನು ಶಾಲೆಯ ಅಭಿವೃದ್ಧಿಗೆ ನಿರಖು ನಿಧಿಯಾಗಿ ಅವರು ಇಟ್ಟಿದ್ದಾರೆ.
ನಮ್ಮ ಗುರುಗಳು ಅಭಿಜಾತ ಯಕ್ಷಗಾನದ ಕಲಾವಿದರು. ಸಣ್ಣ ಪ್ರಾಯದಲ್ಲಿ ಸ್ತ್ರೀ ಪಾತ್ರಗಳನ್ನು ಮಾಡುತ್ತ ಬಂದ ಅವರು ಆರುವತ್ತರ ವಯಸ್ಸಿನವರೆಗೂ ಪಾತ್ರಗಳನ್ನು ಮಾಡಿದರು. ತಾಳಮದ್ದಲೆಯ ಅರ್ಥ ಹೇಳಿದರು. ತಮ್ಮ ಶಾಲೆಯ ಮಕ್ಕಳ ಯಕ್ಷಗಾನ, ನಾಟಕ ಮತ್ತು ನೃತ್ಯ ತಂಡವನ್ನು ಕಟ್ಟಿದರು. ಅವರು ಸ್ವತಃ ಕುಣಿದು ಮಕ್ಕಳನ್ನು ಕುಣಿಸಿದರು. ಮಕ್ಕಳೊಂದಿಗೆ ಮಕ್ಕಳಾದರು.
ಒಮ್ಮೆ ಯಾವುದೋ ಅಧಿಕಾರಿಗಳು ಅವರ ಶಾಲೆಯ ಪರಿವೀಕ್ಷಣೆಗೆ ಮಧ್ಯಾಹ್ನ ಹೊತ್ತಿಗೆ ಬಂದಿದ್ದರು. ಅಧಿಕಾರಿ ಶಾಲೆಯ ಕಾಂಪೌಂಡ್ ಒಳಗೆ ಬಂದರೂ ಮಕ್ಕಳ ಶಬ್ದ ಇಲ್ಲ. ಮೇಷ್ಟ್ರು ಅನುಮತಿ ಪಡೆಯದೆ ರಜೆ ಕೊಟ್ಟಿರಬೇಕು ಎಂದು ಅವರಿಗೆ ಸಿಟ್ಟು ಬಂದಿತು. ಅವರು ಧಾಪುಗಾಲು ಹಾಕುತ್ತಾ ಶಾಲೆ ಒಳಗೆ ಬಂದು ನೋಡಿದಾಗ 350 ಮಕ್ಕಳು ತಮ್ಮ ಅಧ್ಯಯನದಲ್ಲಿ ನಿರತರಾಗಿದ್ದರು. ಮಕ್ಕಳಿಗೆ ಮೌನದ ಪ್ರಾಮುಖ್ಯತೆಯನ್ನು ವಿಠ್ಠಲ ಶೆಟ್ಟಿಯವರು ಮನವರಿಕೆ ಮಾಡಿದ್ದರು! ಆ ಅಧಿಕಾರಿಗಳು ಅಂದು ಗುರುಗಳ ಕ್ಷಮೆಯನ್ನು
ಕೇಳಿದ್ದರು.
ನಮ್ಮ ಗುರುಗಳ ಆತ್ಮಚರಿತ್ರೆಯ ಪುಸ್ತಕವಾದ ‘ಪಯಣ ‘ ಓದುವಾಗ ಇಂತಹ ನೂರಾರು ಘಟನೆಗಳು ನಮ್ಮ ಮನಸ್ಸಿಗೆ ಹತ್ತಿರ ಆಗುತ್ತವೆ. ಅವರು ಬರೆದ ನೂರಾರು ಮಾನಪತ್ರಗಳ ಸಂಗ್ರಹ ಪುಸ್ತಕ
‘ಸನ್ಮಾನ ಸಂಪದ ‘ ಕೂಡ ಸಂಗ್ರಾಹ್ಯವಾಗಿದೆ.
ಊರಿನವರ ಒತ್ತಾಯದ ಮೇರೆಗೆ ಅದೇ ಶಾಲೆಯಲ್ಲಿ ಅಂಚೆ ಇಲಾಖೆಯು ಬ್ರಾಂಚ್ ಪೋಸ್ಟ್ ಆಫೀಸು ತೆರೆಯಿತು. ಆಗ ನಮ್ಮ ಗುರುಗಳು ಪೋಸ್ಟ್ ಮಾಸ್ಟರ್ ಆಗಿ ಕೂಡ ನಾಲ್ವತ್ತು ವರ್ಷ ಕೆಲಸ ಮಾಡಿದರು. ಬೆಳಿಗ್ಗೆ 6 ಘಂಟೆಗೆ ಶಾಲೆಯ ಕಾಂಪೌಂಡಿನ ಹತ್ತಿರವೇ ಇದ್ದ ಮನೆಯಿಂದ ಹೊರಟು ಶಾಲೆಗೆ ಬರುತ್ತಿದ್ದ ಗುರುಗಳು ರಾತ್ರಿ 10 ಘಂಟೆಯತನಕ ಶಾಲೆಯಲ್ಲೇ ಇರುತ್ತಿದ್ದರು!1994ರಲ್ಲೀ ಅವರು ಸೇವಾ ನಿವೃತ್ತರಾದರು.
ಈ ವರ್ಷ ಕಾರ್ಕಳ ತಾ. ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಕೂಡ ಅವರಿಗೆ ದೊರೆಯಿತು.
1980 ರಲ್ಲೀ ರಾಜ್ಯ ಪ್ರಶಸ್ತಿ ,1984 ರ ರಾಷ್ಟ್ರಪ್ರಶಸ್ತಿ ನಮ್ಮ ಗುರುಗಳಿಗೆ ಅರ್ಜಿ ಹಾಕದೆ ದೊರೆಯಿತು ಅನ್ನುವುದು ನಿಜವಾದ ಗೌರವ! ಆಗಿನ ಕಾಲದಲ್ಲಿ ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ಪರಿಪಾಠವೆ ಇರಲಿಲ್ಲ. ನಿವೃತ್ತಿ ಆಗಿ ಇಪ್ಪತ್ತೈದು ವರ್ಷಗಳು ಕಳೆದರೂ ಇನ್ನೂ ಅದ್ಭುತವಾದ ಸ್ಮರಣಶಕ್ತಿ ಇರುವ, ಜೀವನ ಪ್ರೀತಿ ಇರುವ, ಶಿಕ್ಷಣ ರಂಗದಲ್ಲಿ ಈಗಲೂ ಕ್ರಿಯಾಶೀಲ ಆಗಿರುವ ಎಲ್ಲರನ್ನೂ ಸಮಾನವಾಗಿ ಪ್ರೀತಿಸುವ ವಿಠ್ಠಲ ಶೆಟ್ಟಿಯವರ ಆಶೀರ್ವಾದ ನಮಗೆ ಎಂದಿಗೂ ದೊರೆಯಲಿ.
🙏ತಮಗೆಲ್ಲ ಶಿಕ್ಷಕರ ದಿನದ ಶುಭಾಶಯಗಳು.
☑ ಬರಹ – ರಾಜೇಂದ್ರ ಭಟ್ ಕೆ.

LEAVE A REPLY

Please enter your comment!
Please enter your name here