ಇಂದಿನ ಐಕಾನ್ – ಶೂನ್ಯದಿಂದ ಸಾಮ್ರಾಜ್ಯ ಕಟ್ಟಿದ ಸತೀಶ್.

0

ಇಂದಿನ ಐಕಾನ್ – ಶೂನ್ಯದಿಂದ ಸಾಮ್ರಾಜ್ಯ ಕಟ್ಟಿದ ಸತೀಶ್ (ರಾವ್) ಮರಾಟೆ.( ಭಾಗ ೨).
ಸತೀಶ್ ರಾವ್ ಅವರು ಅಮೆರಿಕಾದಿಂದ ನನ್ನ ಜೊತೆ ತುಂಬಾ ಉತ್ಸಾಹದಿಂದ ಮಾತಾಡುತ್ತಿದ್ದರು. ಅವರೇ ಹೇಳಿದ ಅವರ ಬದುಕಿನ ಕಥೆಯ ಎರಡನೇ ಭಾಗವನ್ನು ತಮ್ಮ ಮುಂದೆ ಇಂದು ಇಡುತ್ತಿದ್ದೇನೆ.
ಇಡೀ ಜಗತ್ತನ್ನು ಬೈಸಿಕಲ್ ಮೇಲೆ ಸುತ್ತುವ ನನ್ನ ಕನಸನ್ನು ಹೊತ್ತುಕೊಂಡು ನಾನು ಹಡಗನ್ನು ಏರಿದ್ದೆ. ಹಡಗು ಸಮುದ್ರದ ದೈತ್ಯ ಅಲೆಗಳನ್ನು ಸೀಳಿಕೊಂಡು ಮುಂದೆ ಹೋಗುತ್ತಿತ್ತು. ನಾನು ಮುಂದೆ ಬರಲಿರುವ ಸವಾಲುಗಳನ್ನು ಎದುರಿಸಲು ಮಾನಸಿಕವಾಗಿ ಸಿದ್ಧನಾಗುತ್ತಿದ್ದೆ. ಹಿಂದೆ ಒಮ್ಮೆ ವಿಮಾನದಲ್ಲಿ ಟೆಹ್ರಾನ್ ತನಕ ಹೋಗಿದ್ದೆ. ಆಗ ಇರಾನ್ ಇರಾಕ್ ಯುದ್ಧ ಆರಂಭವಾದ ಕಾರಣ ನಿರಾಶನಾಗಿ ಹಿಂದೆ ಬಂದಿದ್ದೆ. ಆದರೆ ಈ ಬಾರಿ ಯಾವ ಕಷ್ಟ ಬಂದರೂ ಹಿಂದೆ ಬರುವ ಪ್ರಶ್ನೆ ಇರಲಿಲ್ಲ! ಕಿಸೆಯಲ್ಲಿ ತುಂಬಾ ದುಡ್ಡು ಇರಲಿಲ್ಲ! ಆದರೆ ಎದೆಯಲ್ಲಿ ಸಂಕಲ್ಪ ಗಟ್ಟಿ ಇತ್ತು!
ಮಧ್ಯಪ್ರಾಚ್ಯ ರಾಷ್ಟ್ರಗಳನ್ನು ದಾಟಿ ಯುರೋಪ್ ಮತ್ತು ಆಫ್ರಿಕಾ ಖಂಡಗಳ ಬೇರೆ ಬೇರೆ ದೇಶಗಳನ್ನು ಬೈಸಿಕಲ್ ಮೂಲಕ ಕ್ರಮಿಸುವ ಬಹಳ ದೊಡ್ಡ ಯೋಜನೆಯೊಂದು ತಲೆಯಲ್ಲಿ ಕೂತು ಕಾವು ಕೊಡುತ್ತಿತ್ತು. ಹಸಿವೆ, ನಿದ್ರೆಗಳು ಮರೆತು ಹೋಗಿದ್ದವು. ಜೋರ್ಡಾನ್, ಸೌದಿ ಅರೇಬಿಯಾ, ದುಬಾಯಿ, ಈಜಿಪ್ಟ್, ಅಲೆಕ್ಸಾಂಡ್ರಿಯಾ, ಉಗಾಂಡ, ಕೈರೋ, ಲಿಬಿಯಾ, ಗ್ರೀಸ್, ರಶ್ಯಾ, ಜರ್ಮನಿ, ಸ್ಪೇನ್, ನಾರ್ವೆ,ಲಂಡನ್….. ಹೀಗೆ ಯುರೋಪ್ ಮತ್ತು ಆಫ್ರಿಕಾ ಖಂಡಗಳ ಪ್ರಯಾಣ ನನಗೆ ಅಪಾರವಾದ ಅನುಭವ ಮತ್ತು ಜ್ಞಾನವನ್ನು ಕೊಟ್ಟಿತ್ತು. ಅಲ್ಲಿಯ ಜನ ಜೀವನ, ಸಂಸ್ಕೃತಿ, ಆಹಾರ ಪದ್ಧತಿ, ಭಾಷೆ, ತೊಡುಗೆಗಳು, ಹಬ್ಬಗಳು, ಮನರಂಜನೆ, ಜಾನಪದ, ಪ್ರಾಕೃತಿಕ ಸೌಂದರ್ಯ ಇವೆಲ್ಲವೂ ನನ್ನನ್ನು ಹೊಸ ಪ್ರಪಂಚಕ್ಕೆ ಕರೆದು ಕೊಂಡು ಹೋದವು. ಖರ್ಚಿಗೆ ಹಣದ ಕೊರತೆಯಾದಾಗ ಪೇಪರ್, ಹಣ್ಣು ಮತ್ತು ನೀರಿನ ಬಾಟಲ್ ಮಾರುತ್ತಿದ್ದೆ. ಪ್ರತೀ ದಿನ ದಿನಚರಿ ಬರೆಯುತ್ತಿದ್ದೆ. ನಿದ್ದೆ ಬಂದಾಗ ಮಲಗುತ್ತಿದ್ದೆ. ಹಸಿವಾದಾಗ ಊಟ ಮಾಡುತ್ತಿದ್ದೆ. ಎರಡೂವರೆ ವರ್ಷಗಳ ಅವಧಿಯಲ್ಲಿ ನಾನು ಐವತ್ತೆರಡು ದೇಶಗಳ ಯಾತ್ರೆಯನ್ನು ಯಶಸ್ವಿ ಆಗಿ ಮುಗಿಸಿದ್ದೆ!
ಬಾಲ್ಯದಿಂದಲೂ ಅಮೆರಿಕವು ನನ್ನ ಕನಸಿನ ತಾಣ! ನ್ಯೂಯಾರ್ಕ್ ತಲುಪಿದ ನಂತರ ನಾನು ತಲುಪಬೇಕಾದ ಗಮ್ಯವನ್ನು ತಲುಪಿದ್ದೇನೆ ಅಂತ ಅನ್ನಿಸಲು ಆರಂಭವಾಯಿತು. ಬದುಕಲು ಉದ್ಯೋಗವು ಖಂಡಿತವಾಗಿಯೂ ನನಗೆ ಬೇಕಾಗಿತ್ತು. ಅಲ್ಲಿದ್ದ ಭಾರತೀಯರ ವಿಳಾಸವನ್ನು ಹುಡುಕಿಕೊಂಡು ಹೊರಟೆ. ಆಗ ಸಿಕ್ಕವರು ‘ಸಿತಾರಾ’ ಹೋಟೆಲಿನ ಮಾಲೀಕರಾದ ಕಡಂದಲೆ ರತ್ನಾಕರ ಶೆಟ್ಟಿಯವರು. ಅದು ಮಾಂಸಾಹಾರಿ ಹೊಟೇಲು ಆಗಿತ್ತು. ನನಗೆ ಅವರು ನೀಡಿದ ಉದ್ಯೋಗ ಸಪ್ಲೈರ್ ಕೆಲಸ. ತುಂಬಾ ಖುಷಿಯಿಂದ ನಾನು ಆ ಕೆಲಸವನ್ನು ಮಾಡುತ್ತಿದ್ದೆ. ಸಂಜೆ ಕಾಲೇಜಿಗೆ ಹೋಗಿ ಯೆವಿಯೇಶನ್ ಡಿಪ್ಲೊಮಾ ಕೋರ್ಸ್ ಪೂರ್ತಿ ಮಾಡಿದೆ. ನಾನು ಭಾರತದಿಂದ ಕೇವಲ ಏಳನೇ ತರಗತಿ ಓದಿ ಬಂದವನು. ಆದರೆ ವಿಶ್ವದ ತಿರುಗಾಟ ಮಾಡಿ ನನ್ನ ಇಂಗ್ಲೀಷ್ ಅದ್ಭುತವಾಗಿ ಬೆಳೆದಿತ್ತು!
ಒಂದು ದಿನ ಸಿತಾರಾ ಹೋಟೆಲಿಗೆ ಪ್ರಸಿದ್ದವಾದ ಹೊಟೇಲು ಉದ್ಯಮಿ ಕಡಂದಲೆ ಕೃಷ್ಣ ಭಟ್ಟರು ಬಂದರು. ಅವರದ್ದು WOODLANDS ಎಂಬ ಜನಪ್ರಿಯವಾದ ಸಸ್ಯಾಹಾರಿ ಹೊಟೇಲು ಅಮೆರಿಕಾದಲ್ಲಿ ಇತ್ತು.
“ಏನೋ ಮಾಣಿ, ಈ ಮಾಂಸಾಹಾರಿ ಹೋಟೆಲಿನಲ್ಲಿ ಏನು ಮಾಡುತ್ತಿರುವೆ? ನಮ್ಮ ಹೋಟೆಲಿಗೆ ಬಾ.” ಎಂದು ಕರೆದುಕೊಂಡು ಹೋದರು. ಅಲ್ಲಿ ಕೂಡ ನನಗೆ ಸಪ್ಲೈ ಕೆಲಸವೇ ದೊರೆಯಿತು. ಆದರೆ ಮತ್ತೆ ನನ್ನ ದುರದೃಷ್ಟ ಕಾಡಿತು. ನಾನು ಕೆಲಸಕ್ಕೆ ಸೇರಿದ ಮೂರೇ ತಿಂಗಳಲ್ಲಿ ಹೋಟೆಲಿಗೆ ಬೆಂಕಿ ಬಿತ್ತು. ಕೃಷ್ಣ ಭಟ್ಟರು ಹೊಟೇಲು ಮುಚ್ಚಿ ಭಾರತಕ್ಕೆ ಹೋದರು!
ಆದರೆ ನಾನು ಲೈಫಲ್ಲಿ ಸೆಟಲ್ ಆಗದ ಹೊರತು ಭಾರತಕ್ಕೆ ಹೋಗುವುದಿಲ್ಲ ಎಂದು ಸಂಕಲ್ಪ ಮಾಡಿ ಅಮೇರಿಕಾಕ್ಕೆ ಬಂದಿದ್ದೆ. ಮತ್ತೆ ಕೆಲಸಕ್ಕಾಗಿ ಹುಡುಕಾಟ ಶುರು. ಆಗ ಪಲಿಮಾರು ಬಾಗಿಲ್ತಾಯ ಕುಟುಂಬದ ‘ಉಡುಪಿ ಕೆಫೆ’ ಎಂಬ ಸಸ್ಯಾಹಾರಿ ಹೊಟೇಲು ನನಗೆ ಉದ್ಯೋಗವನ್ನು ನೀಡಿತು. ಅಲ್ಲಿ ಕೂಡಾ ನಾನು ಸಪ್ಲೈ ಕೆಲಸ ಮಾಡುತ್ತಿದ್ದೆ. ಆದರೂ ನನ್ನ ಗಮನವೆಲ್ಲ ಅಡಿಗೆ ಕೋಣೆಯ ಕಡೆಗೆ ಇತ್ತು. ಬೆಂಗಳೂರಿನ ಅಪ್ಪನ ಹೋಟೆಲಿನಲ್ಲಿ ಕೆಲಸ ಮಾಡುವಾಗ ಒಂದಿಷ್ಟು ರೆಸಿಪಿಗಳನ್ನು ಕಲಿತಿದ್ದೆ. ಹೊಸ ಹೊಸ ತಿಂಡಿ, ಅಡುಗೆ ನಾನು ಕಲಿತದ್ದು ಉಡುಪಿ ಕೆಫೆಯಲ್ಲಿ!ಅಮೆರಿಕಾದಲ್ಲಿ ಪರಿಪೂರ್ಣ ಭಾರತೀಯ ರೆಸಿಪಿಗಳ ಸಸ್ಯಾಹಾರಿ ಹೋಟೆಲಿನ ಕೊರತೆ ಇರುವುದನ್ನು ನಾನು ಗಮನಿಸಿದ್ದೆ. ಅಲ್ಲಿ ಅಧಿಕ ಸಂಖ್ಯೆಯ ಭಾರತೀಯರು ಇದ್ದು ಅವರು ಭಾರತೀಯ ಖಾದ್ಯಗಳನ್ನು ಇಷ್ಟ ಪಡುತ್ತಿದ್ದರು. ನನ್ನ ಕನಸುಗಳು ಈಗ ಹೊಸ ಬಣ್ಣಗಳನ್ನು ತುಂಬಿಸಿಕೊಳ್ಳುತ್ತಿದ್ದವು. ನಿದ್ರೆ ಹಾರಿ ಹೋಗಿತ್ತು!
ಈ ಮಧ್ಯೆ ಫ್ಲವರ್ ಡಿಸೈನ್ ಕೋರ್ಸನ್ನು ಪೂರ್ತಿ ಮಾಡಿದೆ. ಟೆಕ್ಸಾಸ್ ನಗರದಲ್ಲಿ ‘ಏರ್ ಕ್ರಾಫ್ಟ್ ಮೆಕಾನಿಕ್’ ಆಗಿ ಅನುಭವವನ್ನು ಪಡೆದೆ. ಕಾಂಟಿನೆಂಟಲ್ ಏರ್ಲೈನ್ಸ್ ಎಂಬ ವಿಮಾನ ಯಾನ ಸಂಸ್ಥೆಯು ನನ್ನನ್ನು ತುಂಬಾ ಬೆಳೆಸಿತು. ನನ್ನ ಕಿಸೆಯನ್ನು ತುಂಬಿಸಿತು. ಸತತವಾದ ಪರಿಶ್ರಮದಿಂದ ನನಗೆ ಅಮೆರಿಕಾದ ಗ್ರೀನ್ ಕಾರ್ಡ್ ಕೂಡ ದೊರೆಯಿತು.
ನನ್ನ ನೂರಾರು ಸಂಕಷ್ಟಗಳ ನಡುವೆ ಕೂಡ ನನ್ನ ತಂದೆ, ತಾಯಿ ಮತ್ತು ಕುಟುಂಬವನ್ನು ನಾನು ಮರೆಯಲೇ ಇಲ್ಲ. ನಾನು ಉಪವಾಸ ಇದ್ದರೂ ಪ್ರತೀ ತಿಂಗಳು ಮನೆಗೆ ಹಣ ಕಳುಹಿಸುತ್ತಿದ್ದೆ. ವಾರಕ್ಕೊಮ್ಮೆ ಫೋನ್ ಮಾಡಿ ಮಾತಾಡುತ್ತಿದ್ದೆ. ನನ್ನ ಕಷ್ಟಗಳ ಬಗ್ಗೆ ಏನೂ ಹೇಳುತ್ತಿರಲಿಲ್ಲ. ಒಬ್ಬಂಟಿತನ ಫೀಲ್ ಆದಾಗ ನನ್ನಷ್ಟಕ್ಕೆ ಕೂತು ಅಳುತ್ತಿದ್ದೆ.
ಅಮೆರಿಕಾದಲ್ಲಿ ನನ್ನದೇ ಆದ ಒಂದು ಹೊಟೇಲು ಆರಂಭಿಸಬೇಕು ಎಂದು ಕನಸು ಕಾಣುತ್ತಿದ್ದ ಸಂದರ್ಭ. ಹಣ ಹೊಂದಿಸಲು ದಿನವೂ ಓಡಾಟ ನಡೆಸುತ್ತಿದ್ದೆ. ಆದರೆ ನನ್ನ ದುರದೃಷ್ಟ ನನಗಿಂತ ಮುಂದೆ ಇತ್ತು! 1995ರ ಒಂದು ದಿನ ನನ್ನ ಅಮ್ಮ ಜೋರಾಗಿ ಅಳುತ್ತಾ ನಡುಗುವ ಧ್ವನಿಯಿಂದ ನನಗೆ ಫೋನ್ ಮಾಡಿದರು.
“ಸತೀಶಾ, ನಿನ್ನ ಅಪ್ಪ ತೀರಿ ಹೋಗಿದ್ದಾರೆ. ನೀನೊಬ್ಬನೇ ಮಗ ನನಗೆ. ಇನ್ನು ಅಮೆರಿಕಾ ಸಾಕು! ಊರಿಗೆ ಬಾ!” ನಾನು ತಲೆ ಮೇಲೆ ಕೈಯಿಟ್ಟು ಭಾರತಕ್ಕೆ ಹೊರಟೆ.
( ಮುಂದುವರೆಯುವುದು).
ನೆರವು – ಸಿಯಾ ಸಂತೋಷ್ ನಾಯಕ್.
ಬರಹ – ರಾಜೇಂದ್ರ ಭಟ್ ಕೆ.

LEAVE A REPLY

Please enter your comment!
Please enter your name here