ಇದು ಶಿಕ್ಷಕರ ಗ್ರಾಮ: ಪ್ರತಿ ಮನೆಯಲ್ಲೂ ಇದ್ದರೆ ಒಬ್ಬ ಟೀಚರ್..!

0

ಬೆಳಗಾವಿ ಜಿಲ್ಲೆಯಲ್ಲಿ ಇಂಚಲ ಅನ್ನೋ ಒಂದು ಪುಟ್ಟ ಗ್ರಾಮವಿದೆ. ಈ ಹಳ್ಳಿಯ ಪ್ರತಿಯೊಂದು ಮನೆಯಲ್ಲೂ ಒಬ್ಬರಾದರೂ ಶಿಕ್ಷಕರು ಸಿಕ್ಕೇ ಸಿಗ್ತಾರೆ. ಹಾಗಾಗಿನೇ ಈ ಗ್ರಾಮವನ್ನ ಶಿಕ್ಷಕರ ಗ್ರಾಮ ಅಂತಾನೇ ಕರೆಯುತ್ತಾರೆ.

ಹೌದು, ಈ ಗ್ರಾಮದಲ್ಲಿ ಅಷ್ಟೊ ಇಷ್ಟೊ ಅಲ್ಲ ಬರೋಬ್ಬರಿ 900ಕ್ಕೂ ಹೆಚ್ಚು ಮಂದಿ ಶಿಕ್ಷಕರಿದ್ದಾರೆ. ಹಾಗಂತ, ಇಲ್ಲೇನು ಬಹಳಷ್ಟು ಮನೆಗಳಿಲ್ಲ. ಗ್ರಾಮದಲ್ಲಿ ಕೇವಲ 1 ಸಾವಿರ ಮನೆಗಳಿರಬೋದು ಅಷ್ಟೆ. ಹಾಗಾಗಿ ಇಡೀ ರಾಜ್ಯದಲ್ಲಿಯೇ ಅತೀ ಹೆಚ್ಚು ಶಿಕ್ಷಕರನ್ನ ಸಮಾಜಕ್ಕೆ ನೀಡಿದ ಕೊಡುಗೆ ಈ ಇಂಚಲ ಗ್ರಾಮಕ್ಕೆ ಸಲ್ಲುತ್ತದೆ.

ಇಂಚಲ ಮಠದ ಶಿವಾನಂದ ಭಾರತಿ ಸ್ವಾಮೀಜಿಯವರಿಗೆ ಈ ಊರನ್ನ ಶಿಕ್ಷಕರ ಗ್ರಾಮ ಮಾಡಿದ ಕೀರ್ತಿ ನೇರವಾಗಿ ಸಲ್ಲುತ್ತೆ. ಯಾಕಂದ್ರೆ, ಸುಮಾರು 40 ವರ್ಷಗಳ ಹಿಂದೆ ಇದು ಅಕ್ಷರಶಃ ಕುಗ್ರಾಮವಾಗಿತ್ತಂತೆ. ಕೊಲೆ, ಸುಲಿಗೆಯಂತಹ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ವು. ಹಾಗಾಗಿ ಗ್ರಾಮದಲ್ಲಿರುವ ಜನ ವಿದ್ಯಾವಂತರಾದ್ರೆ ಈ ಸಮಸ್ಯೆಗೆ ಪರಿಹಾರ ಸಿಗುತ್ತೆ ಎಂದು ಭಾವಿಸಿದ ಶಿವಾನಂದ ಭಾರತಿ ಸ್ವಾಮೀಜಿಗಳು 1975ರಲ್ಲಿ ಶಿಕ್ಷಣ ಸಂಸ್ಥೆಯೊಂದನ್ನ ಹುಟ್ಟು ಹಾಕಿದರು. ಅದೇ ವರ್ಷ ಪ್ರೌಢಶಾಲೆ, 1982ರಲ್ಲಿ ಪಿಯು ಕಾಲೇಜ್​, 1985ರಲ್ಲಿ ಡಿ.ಎಡ್ ಕಾಲೇಜು ಸ್ಥಾಪನೆ ಮಾಡಿದರು. ಆಗ ಪ್ರತಿ ವರ್ಷ ಶಿಕ್ಷಕರ ಭರ್ತಿ ನಡೆಯುತಿತ್ತು. ಹೀಗಾಗಿ ಡಿ.ಎಡ್ ಮುಗಿಸಿದ ಪ್ರತಿಯೊಬ್ಬರು ಶಿಕ್ಷಕರಾಗಿ ಸೇರಿಕೊಂಡರು.

ಸದ್ಯ 900 ಶಿಕ್ಷಕರು ಈ ಇಂಚಲದಿಂದ ಹೋಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಷ್ಟೇ ಅಲ್ಲ ಟಿಸಿಎಚ್, ಡಿ.ಎಡ್ ಓದಿದ ನೂರಾರು ವಿದ್ಯಾರ್ಥಿಗಳು ಶಿಕ್ಷಕರಾಗಲು ಸರ್ಕಾರದ ಅರ್ಜಿ ಆಹ್ವಾನಕ್ಕಾಗಿ ಕಾದು ಕುಳಿತಿದ್ದಾರೆ.

LEAVE A REPLY

Please enter your comment!
Please enter your name here