ಈಶ್ವರಪ್ಪ ಹೇಳಿಕೆಗೆ ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಆಕ್ರೋಶ

0

ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳ ಕುರಿತು ಈಶ್ವರಪ್ಪ ಹೇಳಿಕೆಗೆ ರಾಜನಹಳ್ಳಿ ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.

ಶಿವಮೊಗ್ಗದಲ್ಲಿ ಶುಕ್ರವಾರ ನಡೆದ ವಾಲ್ಮೀಕಿ ಸಮಾಜದ ಸಭೆಯ ನಂತರ ಅವರು ಮಾತನಾಡಿದರು.

ಮೀಸಲಾತಿ ಹೆಚ್ಚಳ ಕುರಿತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ದ್ವಂದ್ವ ಹೇಳಿಕೆ ನೀಡುತ್ತಿದ್ದಾರೆ. ಒಂದು ಬಾರಿ ವಾಲ್ಮೀಕಿ ಜನಾಂಗ ಬೇಡಿಕೆ ಈಡೇರಿಸಲಾಗುವುದು ಎನ್ನುತ್ತಾರೆ. ಮತ್ತೊಮ್ಮೆ ಕುರುಬ ಜನಾಂಗ ಸೇರಿದಂತೆ ಇನ್ನೂ ಎರಡು ಮೂರು ಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದ ನಂತರ ಮೀಸಲಾತಿ ಹೆಚ್ಚಿಸಲಾಗುವುದು ಎನ್ನುತ್ತಾರೆ. ಇದು ಸರಿಯಲ್ಲ ಎಂದರು.

ಪರಿಶಿಷ್ಟ ಪಂಗಡಕ್ಕೆ ಹೊಸದಾಗಿ ಜಾತಿ ಸೇರಿಸಲು ಕೇಂದ್ರಕ್ಕೆ ಬೇಡಿಕೆ ಸಲ್ಲಿಸಬೇಕು. ವಾಲ್ಮೀಕಿ ಸಮಾಜದ ಬೇಡಿಕೆ ಕೇಂದ್ರದಿಂದ ಅನುಮೋದನೆಯಾಗಿ ಬಂದಿದೆ. ರಾಜ್ಯ ಸರ್ಕಾರ ಅನುಷ್ಠಾನ ಮಾಡಬೇಕಿದೆ. ಇಂತಹ ಸೂಕ್ಷ್ಮ ವಿಚಾರ ಅರ್ಥ ಮಾಡಿಕೊಳ್ಳದೆ ಮಾತನಾಡುವುದು ಸರಿಯಲ್ಲ ಎಂದು ಕುಟುಕಿದರು.

‘ನಮಗೂ, ನಿಮಗೂ ಸಂಬಂಧವಿಲ್ಲ. ನಾವು ಊಟ ಮಾಡುವ ಊಟದ ತಟ್ಟೆಗೆ ಕಲ್ಲು ಹಾಕಬೇಡಿ. ನಿಮ್ಮ ಹೇಳಿಕೆ ವಾಪಸ್ ಪಡೆಯಬೇಕು. ಬಿಜೆಪಿ ವೋಟ್‌ ಬ್ಯಾಂಕ್ ರಾಜಕಾರಣ ಮಾಡಬಾರದು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚುನಾವಣೆ ಸಮಯದಲ್ಲಿ ಮಾತು ಕೊಟ್ಟಂತೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ 7.5 ಮೀಸಲಾತಿ ನೀಡಬೇಕು’ ಎಂದು ಆಗ್ರಹಿಸಿದರು

LEAVE A REPLY

Please enter your comment!
Please enter your name here