ಈ ಊರಲ್ಲಿ ಒಕ್ಕಲಿಗರು ಬಿಟ್ಟು ಬೇರೆ ಸಮುದಾಯ ವಾಸಕ್ಕೆ ಬಂದ್ರೆ ಆಪತ್ತು ಖಚಿತ: ಇದು ನಿಗೂಢ ಗ್ರಾಮವಂತೆ..!?

0

ಇದು ವಿಚಿತ್ರವೂ? ಅಥವಾ ಕಾಕತಾಳೀಯವೋ? ಯಾರಿಗೂ ತಿಳಿಯುತ್ತಿಲ್ಲ. ಏಕೆಂದರೆ ಮಂಡ್ಯದ ಈ ಒಂದು ಊರಲ್ಲಿ ಅದೊಂದು ಸಮುದಾಯ ಹೊರತುಪಡಿಸಿದರೆ, ಬೇರೆ ಜನಾಂಗದ ಜನ ವಾಸ ಮಾಡಿದ್ದೇ ಆದಲ್ಲಿ ಅವರು ಏಳಿಗೆ ಆಗುವುದಿಲ್ಲವಂತೆ. ನಾನಾ ರೀತಿಯ ಸಮಸ್ಯೆ ಕಾಡಿ ಮೂರೇ ದಿನಕ್ಕೆ ಊರು ಖಾಲಿ ಮಾಡುವ ಪರಿಸ್ಥಿತಿ ಉಂಟಾಗುತ್ತದೆಯಂತೆ. ಅಷ್ಟಕ್ಕೂ ಅದ್ಯಾವ ಊರು ಅಂತೀರಾ ಈ ಸ್ಟೋರಿ ನೋಡಿ.

ಸದ್ಯ ನಿಗೂಢತೆ ಸೃಷ್ಟಿಸಿರೋ ಊರಿನ ಹೆಸರು ಮದ್ದೂರು ತಾಲ್ಲೂಕಿನ ಹನುಮಂತಪುರ. ಈ ಗ್ರಾಮದಲ್ಲಿ ಸರಿಸುಮಾರು 350 ಕುಟುಂಬಗಳಿದ್ದು, 1200 ಮಂದಿಯಷ್ಟು ಜನ ವಾಸ ಮಾಡ್ತಿದ್ದಾರೆ. ಎಲ್ಲರು ಸಹ ಒಂದೇ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಒಂದು ಗ್ರಾಮ ಅಂದಮೇಲೆ ಎಲ್ಲ ಸಮುದಾಯದ ಜನರು ಇರಬೇಕು. ಆದರೆ, ಇಲ್ಲಿ ಒಂದೇ ಸಮುದಾಯ ಹೇಗೆ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಆದರೆ, ಈ ಗ್ರಾಮದಲ್ಲಿ ಒಕ್ಕಲಿಗರು ಬಿಟ್ಟು ಬೇರೆ ಜನಾಂಗದ ಜನ ಬಂದು ವಾಸ ಮಾಡಲು ಮುಂದಾದ್ರೆ ಅವರಿಗೆ ನಾನಾ ರೀತಿಯ ಸಮಸ್ಯೆಗಳು ಕಾಡುತ್ತಂತೆ. ಅನಾರೋಗ್ಯ, ಆರ್ಥಿಕ ಸಮಸ್ಯೆ ಮತ್ತು ಜಿಗುಪ್ಸೆ ಉಂಟಾಗಿ ಕೇವಲ ಮೂರೇ ದಿನಕ್ಕೆ ಊರು ಖಾಲಿ ಮಾಡಬೇಕಾದ ಪರಿಸ್ಥಿತಿ ಬರುತ್ತಂತೆ. ಈ ಬಗ್ಗೆ ಸ್ವತ: ಕಣ್ಣಾರೆ ನೋಡಿರುವ ಗ್ರಾಮಸ್ಥರು ನಡೆದಿರುವ ಘಟನೆಗಳನ್ನು ಸಹ ವಿವರಿಸಿದ್ದಾರೆ.

ಹನುಮಂತಪುರ ಗ್ರಾಮ ನಿರ್ಮಾಣವಾಗಿ ಸರಿಸುಮಾರು 300 ವರ್ಷ ಕಳೆದಿದೆಯಂತೆ. ಆಗಿನಿಂದಲೂ ಸಹ ಇದೇ ಪರಿಸ್ಥಿತಿ ಇದೆಯಂತೆ. ಬೇರೆ ಸಮುದಾಯದ ಜನಕ್ಕೆ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಗ್ರಾಮದ ಹಿರಿಯ ನಾಗರೀಕರಿಗೆ ಅವರ ತಾತ, ಮುತ್ತಾತಂದಿರು ಇದನ್ನೇ ಹೇಳಿದ್ದಾರಂತೆ.

ಸುಮಾರು 20-30 ವರ್ಷಗಳ ಹಿಂದೆ ಗ್ರಾಮಕ್ಕೆ ಬಂದಿದ್ದ ಕಲ್ಲು ಹೊಡೆಯೋರು ಮತ್ತು ಇತರೆ ಸಮುದಾಯದವ್ರು ಒಂದೆರಡು ದಿನ ಗ್ರಾಮದಲ್ಲಿ ವಾಸ ಮಾಡುವಾಗ ಹಾವು ಕಾಣಿಸಿಕೊಳ್ಳೋದು, ನಾಯಿ ಕಚ್ಚೋದು ಸೇರಿದಂತೆ ಇನ್ನಿತರ ಆರೋಗ್ಯ ಹಾಗೂ ಆರ್ಥಿಕ ಸಮಸ್ಯೆ ಉಂಟಾಗಿ ಎರಡೇ ದಿನಕ್ಕೆ ಊರು ಖಾಲಿ ಮಾಡಿದರಂತೆ.

ಇನ್ನು ಇಲ್ಲಿಯ ಜನ ಗ್ರಾಮ ದೇವತೆಗಳಾದ ಮಾಸ್ತಮ್ಮ, ಮಾರಮ್ಮ ಹಾಗೂ ಬೋರಮ್ಮ ದೇವರುಗಳಿಗೆ ಪೂಜೆ ಸಲ್ಲಿಸಿ, ಹೋಮ ನಡೆಸಿದ್ರೂ ಯಾವುದೇ ಪ್ರಯೋಜನವಾಗಿಲ್ಲವಂತೆ. ಮದುವೆಯಾಗದ ಬ್ರಹ್ಮಚಾರಿಗಳಾದ್ರೆ ಅನ್ಯ ಸಮುದಾಯದವ್ರು ಇಲ್ಲಿ ಜೀವನ ನಡೆಸಬಹುದು. ಸಂಸಾರಿಕ ಅನ್ಯ ಜಾತಿಯವ್ರಿಗೆ ಈ ಗ್ರಾಮ ಯೋಗ್ಯವಲ್ಲ ಅನ್ನೋದು ಗ್ರಾಮಸ್ಥರ ವಾದ. ಗ್ರಾಮಸ್ಥರು ದೇವಾಲಯದ ಅರ್ಚಕರನ್ನು ಒಕ್ಕಲಿಗರನ್ನೇ ನೇಮಿಸಿಕೊಂಡಿದ್ದು, ಕ್ಷೌರಕ್ಕಾಗಿ ಪಕ್ಕದೂರಿಗೆ ಹೋಗಬೇಕಾದ ಅನಿವಾರ್ಯತೆ ಇದೆಯಂತೆ. ಆದರೆ, ಇಲ್ಲಿಯವರೆಗೂ ಸಗ ಗ್ರಾಮದಲ್ಲಿರುವ ನಿಗೂಢ ಏನೆಂಬುದು ಮಾತ್ರ ಯಾರಿಗೂ ತಿಳಿದಿಲ್ಲ. ಇದು ವಿಚಿತ್ರವೂ? ಅಥವಾ ಕಾಕತಾಳೀಯವೋ? ಎಂಬಂತಿದೆ. (ದಿಗ್ವಿಜಯ ನ್ಯೂಸ್​)

LEAVE A REPLY

Please enter your comment!
Please enter your name here