“ಈ ಬಿಜೆಪಿ ಅವಧಿಯಲ್ಲಿ ಯಾಕಾದರೂ ಶಾಸಕನಾದೆನೋ ಎನ್ನುವ ನೋವು ಕಾಡುತ್ತಿದೆ”ಎಂದು ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ಬೇಸರ ವ್ಯಕ್ತ ಪಡಿಸಿದ್ದಾರೆ.
“ಅಧಿಕಾರದ ದುರಾಸೆಯಿಂದ ಅಧಿಕಾರಕ್ಕೆ ಬಂದಿರುವ ಯಡಿಯೂರಪ್ಪನವರ ನೇತೃತ್ವದ ಸರಕಾರ, ಅಭಿವೃದ್ದಿ ಕೆಲಸಕ್ಕೆ ಚಿಕ್ಕಾಸನ್ನೂ ಬಿಡುಗಡೆ ಮಾಡುತ್ತಿಲ್ಲ”ಎಂದು ನಂಜೇಗೌಡ್ರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
“ಒಂದು ಆರ್ ಒ ಪ್ಲಾಂಟ್, ಬೀದಿ ದೀಪ ಅಳವಡಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಯಾವುದಕ್ಕೂ ಹಣವನ್ನು ಬಿಡುಗಡೆ ಮಾಡುತ್ತಿಲ್ಲ. ಸ್ವಾಭಾವಿಕವಾಗಿ, ಬಿಜೆಪಿ ಸರಕಾರದ ವೇಳೆ ಯಾಕಾದರೂ ಶಾಸಕನಾದೆ ಎನ್ನುವ ನೋವು ಕಾಡುತ್ತಿದೆ”ಎಂದು ನಂಜೇಗೌಡ ಹೇಳಿದ್ದಾರೆ.
“ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದ ಆರಂಭದಲ್ಲಿ ದಾಖಲೆಯ ಅನುದಾನವನ್ನು ಕ್ಷೇತ್ರಕ್ಕೆ ಮಂಜೂರು ಮಾಡಿಸಿದ್ದೆ. ಆದರೆ, ಸರಕಾರ ಪತನಗೊಂಡಿತು. ಎಲ್ಲಾ ಬಿಜೆಪಿಯ ದುರಾಸೆಯಿಂದ. ಈಗ ಮಂಜೂರಾಗಿದ್ದ ಹಣ ಬಿಡುಗಡೆಯಾಗುತ್ತಿಲ್ಲ”ಎಂದು ನಂಜೇಗೌಡರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಮಾಲೂರಿನ, ಹಾಲು ಉತ್ಪಾದಕರ ಮತ್ತು ಮಹಿಳಾ ಸಂಘದ ಸದಸ್ಯರಿಗೆ ಸಾಲ ವಿತರಣೆ ಮಾಡಿ ಮಾತನಾಡುತ್ತಿದ್ದ ನಂಜೇಗೌಡ, “ಈಗ ರಾಜ್ಯ ಸರಕಾರ ತೀವ್ರ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದೆ. ಮಂಜೂರಾಗಿರುವ ಯೋಜನೆಗಳಿಗೆ ಹಣ ಬಿಡುಗಡೆ ಮಾಡಲು ಸರಕಾರದಲ್ಲಿ ದುಡ್ಡಿಲ್ಲ”ಎಂದು ಆರೋಪಿಸಿದ್ದಾರೆ.
“ಸರಕಾರ ನನ್ನ ಕ್ಷೇತ್ರಕ್ಕೆ ಹಣ ನೀಡದಿದ್ದರೂ, ಡಿಸಿಸಿ ಬ್ಯಾಂಕುಗಳು ಸಾಲ ನೀಡುತ್ತಿರುವುದು ಸಮಾಧಾನದ ವಿಷಯ. ಹಾಲು ಉತ್ಪಾದಕರಿಗೂ ಬ್ಯಾಂಕ್ ಸಾಲ ನೀಡುತ್ತಿರುವುದು ಸಮಾಧಾನಕರ ವಿಚಾರ”ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದ್ದಾರೆ.