ಉಡುಪಿ: ಮಂಗಳವಾರ 219 ಮಂದಿಯಲ್ಲಿ ಕೊರೋನ ಸೋಂಕು ದೃಢ

0

ಜಿಲ್ಲೆಯಲ್ಲಿ ಮಂಗಳವಾರ ಒಟ್ಟು 219 ಮಂದಿಯಲ್ಲಿ ನೋವೆಲ್ ಕೊರೋನ ವೈರಸ್ ಸೋಂಕು ಪತ್ತೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ ಇದುವರೆಗೆ ಪಾಸಿಟಿವ್ ಕಂಡು ಬಂದವರ ಒಟ್ಟು ಸಂಖ್ಯೆ 6510ಕ್ಕೇರಿದೆ. ಇಂದು ದಿನದಲ್ಲಿ 1203 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷಾ ವರದಿಗಳು ನೆಗೆಟಿವ್ ಫಲಿತಾಂಶ ನೀಡಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ‌ಚಂದ್ರ ಸೂಡ ತಿಳಿಸಿದ್ದಾರೆ.

ಇಂದು ಕೊರೋನ ಸೋಂಕು ಪತ್ತೆಯಾದ 219 ಮಂದಿಯಲ್ಲಿ ಉಡುಪಿ ತಾಲೂಕಿನ 115 ಮಂದಿ, ಕುಂದಾಪುರ ತಾಲೂಕಿನ 68 ಹಾಗೂ ಕಾರ್ಕಳ ತಾಲೂಕಿನ 33 ಮಂದಿ ಸೇರಿದ್ದಾರೆ. ಉಳಿದ ಮೂವರು ಹೊರಜಿಲ್ಲೆಯ ವರಾಗಿದ್ದು, ಜಿಲ್ಲೆಯಲ್ಲಿ ಚಿಕಿತ್ಸೆಗೆ ಬಂದು ಪಾಸಿಟಿವ್ ಆಗಿದ್ದಾರೆ.

ಮಕ್ಕಳು ಸೇರಿದಂತೆ 140 ಮಂದಿ ಪುರುಷರು ಹಾಗೂ 79 ಮಂದಿ ಮಹಿಳೆಯರಲ್ಲಿ ಸೋಂಕು ಕಂಡು ಬಂದಿದೆ. ಇವರಲ್ಲಿ 100 ಪುರುಷರು ಹಾಗೂ 61 ಮಹಿಳೆ ಯರಲ್ಲಿ ರೋಗದ ಲಕ್ಷಣಗಳು ಕಂಡುಬಂದಿಲ್ಲ. ಇಂದಿನ 219 ಪಾಸಿಟಿವ್ ಪ್ರಕರಣಗಳೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ ಸೋಂಕು ಪತ್ತೆಯಾದವರ ಸಂಖ್ಯೆ 6510ಕ್ಕೇರಿದೆ ಎಂದು ಡಾ.ಸೂಡ ತಿಳಿಸಿದರು.

ಮಂಗಳವಾರ ಕೊರೋನ ಪಾಸಿಟಿವ್ ದೃಢಗೊಂಡ 219 ಮಂದಿಯಲ್ಲಿ 64 ಮಂದಿ ಪಾಸಿಟಿವ್ ಬಂದವರ ಸಂಪರ್ಕದಿಂದ, 39 ಮಂದಿ ಶೀತ ಜ್ವರ ದಿಂದ, 2 ಮಂದಿ ಉಸಿರಾಟ ತೊಂದರೆಯಿಂದ ಬಳಲುತಿದ್ದು ಅವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇನ್ನು ಇಬ್ಬರು ದೇಶೀಯ ಹಾಗೂ ವಿದೇಶ ಪ್ರವಾಸದಿಂದ ಮರಳಿದ್ದು, ಪಾಸಿಟಿವ್ ಕಾಣಿಸಿಕೊಂಡಿದೆ. 112 ಮಂದಿಯ ಸೋಂಕಿನ ಸಂಪರ್ಕ ಇನ್ನೂ ತನಿಖೆಯಲ್ಲಿ ದೆ ಎಂದರು.

183 ಮಂದಿ ಗುಣಮುಖ: ಜಿಲ್ಲೆಯಲ್ಲಿ ಮಂಗಳವಾರ ಒಟ್ಟು 183 ಮಂದಿ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡು ಬಿಡುಗಡೆಗೊಂಡಿದ್ದಾರೆ. ಇವರಲ್ಲಿ 112 ಮಂದಿ ಕೋವಿಡ್ ಆಸ್ಪತ್ರೆಗಳಿಂದ, 71 ಮಂದಿ ಹೋಮ್ ಐಸೋಲೇಷನ್ ನಲ್ಲಿದ್ದು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾದವರ ಸಂಖ್ಯೆ 3768ಕ್ಕೇರಿದೆ. ಈಗಾಗಲೇ ಪಾಸಿಟಿವ್ ಬಂದ 2676 ಮಂದಿ ಚಿಕಿತ್ಸೆಯಲ್ಲಿದ್ದು, ಇವರಲ್ಲಿ 1396 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಹಾಗೂ 1280 ಹೋಮ್ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಡಿಎಚ್‌ಓ ಹೇಳಿದರು.

1845 ಸ್ಯಾಂಪಲ್ ಸಂಗ್ರಹ: ಸೋಂಕಿನ ಪರೀಕ್ಷೆಗಾಗಿ ಮಂಗಳವಾರ 1845 ಮಂದಿಯ ಗಂಟಲುದ್ರವದ ಸ್ಯಾಂಪಲ್‌ಗಳನ್ನು ಪಡೆಯಲಾಗಿದೆ. ಇದರಲ್ಲಿ ಕೋವಿಡ್ ಶಂಕಿತರು 1020 ಮಂದಿ, ಕೋವಿಡ್ ಸಂಪರ್ಕಿತರು 423 ಮಂದಿ ಇದ್ದರೆ, ಉಸಿರಾಟ ತೊಂದರೆಯ 10, ಶೀತಜ್ವರದಿಂದ ಬಳಲುವ 67 ಮಂದಿ ಹಾಗೂ ವಿವಿಧ ಕೋವಿಡ್ ಹಾಟ್‌ಸ್ಪಾಟ್‌ಗಳಿಂದ ಆಗಮಿಸಿದ 325 ಮಂದಿಯ ಸ್ಯಾಂಪಲ್‌ಗಳು ಸೇರಿವೆ ಎಂದು ಡಾ.ಸೂಡ ತಿಳಿಸಿದರು.

ಇಂದು ಪಡೆದ 1845 ಸ್ಯಾಂಪಲ್‌ಗಳೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಮಾದರಿಗಳ ಒಟ್ಟು ಸಂಖ್ಯೆ 47,519ಕ್ಕೇರಿದೆ. ಇವುಗಳಲ್ಲಿ ಈವರೆಗೆ 39,399 ನೆಗೆಟಿವ್, 6510 ಪಾಸಿಟಿವ್ ಬಂದಿವೆ. ಜಿಲ್ಲೆಯಲ್ಲಿ ಈವರೆಗೆ 66 ಮಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಇನ್ನು ಒಟ್ಟು 1610 ಸ್ಯಾಂಪಲ್‌ಗಳ ಪರೀಕ್ಷಾ ವರದಿ ಬರಬೇಕಿದೆ ಎಂದು ಡಾ.ಸೂಡ ವಿವರಿಸಿದರು.

ಜಿಲ್ಲೆಯಲ್ಲಿ ಮಂಗಳವಾರ 219 ಮಂದಿಯನ್ನು ಆಸ್ಪತ್ರೆಗಳ ಐಸೋಲೇಷನ್ ವಾರ್ಡ್‌ಗೆ ದಾಖಲಿಸಲಾಗಿದೆ. ಇವರಲ್ಲಿ ಒಟ್ಟು 128 ಮಂದಿ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಹಾಗೂ 91 ಮಂದಿ ಹೋಮ್ ಐಸೋಲೇಷನ್‌ನಲ್ಲಿ ಇದ್ದಾರೆ. ಜಿಲ್ಲೆಯಲ್ಲಿ ಈಗ ಒಟ್ಟು 1862 ಮಂದಿ ಹೋಮ್ ಐಸೋಲೇಷನ್ ಚಿಕಿತ್ಸೆಯಲ್ಲಿದ್ದಾರೆ ಎಂದು ಅವರು ಹೇಳಿದರು.

ಮಂಗಳವಾರ ಜಿಲ್ಲೆಯಲ್ಲಿ ಐದು ಕೋವಿಡ್ ಸಾವು

ಉಡುಪಿ ಜಿಲ್ಲೆಯಲ್ಲಿ ಇಂದು ಐವರು ಕೋವಿಡ್‌ಗೆ ಬಲಿಯಾಗಿದ್ದಾರೆ. ಅದೇ ರೀತಿ ಬ್ರಹ್ಮಾವರದ ಒಬ್ಬರು ಚಿಕಿತ್ಸೆಗೆಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾದವರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದ್ದು, ಅವರು ಇಂದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಕುಂದಾಪುರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ 80ವರ್ಷ ಪ್ರಾಯದ ವೃದ್ಧರೂ ಇಂದು ಚಿಕಿತ್ಸೆ ಫಲಕಾರಿ ಯಾಗದೇ ಮೃತಪಟ್ಟಿದ್ದಾರೆ.

ಉಳಿದಂತೆ ಕ್ಯಾನ್ಸರ್‌ನಿಂದ ಬಳಲುತಿದ್ದ ಕಾರ್ಕಳ ಕುಕ್ಕಂದೂರಿನ 35ರ ಹರೆಯದ ಯುವಕ, ಕಿಡ್ನಿ ಸಮಸ್ಯೆಗೆ ಚಿಕಿತ್ಸೆ ಪಡೆಯುತಿದ್ದ ಬೈಂದೂರಿನ 48ರ ಹರೆಯದ ಪುರುಷ, ಹಾಗೂ ರಕ್ತದೊತ್ತಡ ಸೇರಿದಂತೆ ವಿವಿಧ ಕಾಯಿಲೆಗೆ ಚಿಕಿತ್ಸೆ ಪಡೆಯುತಿದ್ದ ಕೊಕ್ಕರ್ಣೆಯ 66 ವೃದ್ಧರು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಕೋವಿಡ್-19ರಿಂದ ಮೃತಪಟ್ಟವರ ಸಂಖ್ಯೆ 71ಕ್ಕೇರಿದೆ ಎಂದು ಡಿಎಚ್‌ಓ ಡಾ. ಸುಧೀರ್‌ ಚಂದ್ರ ಸೂಡ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here