ಉತ್ತರ ಪ್ರದೇಶ ಸರ್ಕಾರದ ವಜಾಕ್ಕೆ ಒತ್ತಾಯ

0

ಉತ್ತರಪ್ರದೇಶದ ಹಾಥರಸ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣವನ್ನು ಅಲ್ಲಿಯ ಸರ್ಕಾರ ಮುಚ್ಚಿಡುವ ಹುನ್ನಾರ ನಡೆಸುತ್ತಿದ್ದು ಕೂಡಲೇ ಸರ್ಕಾರವನ್ನು ವಜಾ ಮಾಡಬೇಕು ಎಂದು ಆಗ್ರಹಿಸಿ ದಲಿತ ಶೋಷಿತ ಸಂಘರ್ಷ ಸಮಿತಿ ಸದಸ್ಯರು ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ಪ್ರಕರಣವನ್ನು ಮುಚ್ಚಿಡುವ ಉದ್ದೇಶದಿಂದ ಪೊಲೀಸ್‌ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು, ಆರೋಪಿಗಳ ರಕ್ಷಣೆಗೆ ಮುಂದಾಗಿದೆ. ಕೂಡಲೇ ನಿಷ್ಪಕ್ಷಪಾತ ತನಿಖೆ ನಡೆಸಲು ಸುಪ್ರೀಂ ಕೋರ್ಟ್‌ ಉಸ್ತುವಾರಿಯಲ್ಲಿ ಸಿಬಿಐ ತನಿಖೆ ನಡೆಸಲು ರಾಷ್ಟ್ರಪತಿ ಅವರು ಸೂಚನೆ ನೀಡಬೇಕು. ಸಂತ್ರಸ್ತೆಯ ಕುಟುಂಬಕ್ಕೆ ನ್ಯಾಯ ಮತ್ತು ರಕ್ಷಣೆ ನೀಡುವ ಭರವಸೆಯನ್ನು ರಾಷ್ಟ್ರಪತಿಗಳು ನೀಡಬೇಕು. ನೊಂದ ಕುಟುಂಬಕ್ಕೆ ₹1ಕೋಟಿ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ನೇತೃತ್ವದ ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರ ಮನುಸ್ಮೃತಿ ಆಧಾರಿತ ಆಡಳಿತ ವ್ಯವಸ್ಥೆ ನಡೆಸುತ್ತಿದೆ. ಇದರಿಂದ ಮಹಿಳೆ, ಮಕ್ಕಳ ಮಾನ, ಪ್ರಾಣ ಕಳೆದು ಹೋಗುತ್ತಿದೆ. ಇವುಗಳನ್ನು ತಡೆಯಲು ಸರ್ಕಾರಗಳಿಗೆ ರಾಷ್ಟ್ರಪತಿಗಳು ಸೂಕ್ತ ನಿರ್ದೇಶನ ನೀಡಬೇಕು. ಉತ್ತರ ಪ್ರದೇಶ ಸರ್ಕಾರ ರಾಮರಾಜ್ಯ ಬದಲಾಗಿ ಗೂಂಡಾ ರಾಜ್ಯ ಸೃಷ್ಟಿಸಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಬದಲು ಗೂಂಡಾ ಕೆಲಸ ಮಾಡುವವರ ರಕ್ಷಣೆಗೆ ನಿಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮಿತಿ ರಾಜ್ಯ ಘಟಕದ ಅಧ್ಯಕ್ಷ ವೆಂಕಟಗಿರಿಯಯ್ಯ, ಪದಾಧಿಕಾರಿಗಳಾದ ಆನಂದ, ಚನ್ನಕೇಶವ, ಶಂಕರ, ಶ್ರೀನಿವಾಸ್‌ ಇದ್ದರು.

LEAVE A REPLY

Please enter your comment!
Please enter your name here