ಉದ್ಯೋಗ ಸೃಷ್ಟಿ, ಹವಾಮಾನ ವೈಪರೀತ್ಯದ ವಿರುದ್ಧ ಹೋರಾಟ: ಕಮಲಾ ಹ್ಯಾರಿಸ್‌ ಭರವಸೆ

0

‘ಚುನಾವಣೆಯಲ್ಲಿ ಡೆಮಾಕ್ರಾಟಿಕ್‌ ಪಕ್ಷ ಆಯ್ಕೆಯಾದರೆ, ಉದ್ಯೋಗ ಸೃಷ್ಟಿ, ಹವಾಮಾನ ಬದಲಾವಣೆ ವಿರುದ್ಧ ಹೋರಾಟ ನಡೆಸುವ ಜತೆಗೆ, ಅಮೆರಿಕ ನಾಗರಿಕ ಕಲ್ಯಾಣದ ಬಗ್ಗೆ ಕಾಳಜಿವಹಿಸುವಂತಹ ಕಾಯ್ದೆಗಳನ್ನು ಜಾರಿಗೆ ತರುತ್ತೇವೆ’ ಎಂದು ಅಮೆರಿಕದ ಉಪಾಧ್ಯಕ್ಷ ಸ್ಥಾನಕ್ಕೆ ಡೆಮಾಕ್ರಟಿಕ್ ಪಕ್ಷದಿಂದ ನಾಮನಿರ್ದೇಶನಗೊಂಡಿರುವ ಭಾರತ ಮೂಲದ ಕಮಲಾ ಹ್ಯಾರಿಸ್‌ ತಿಳಿಸಿದ್ದಾರೆ.

ಡೆಮಾಕ್ರಾಟಿಕ್ ಪಕ್ಷದಿಂದ ಉಪಾಧ್ಯಕ್ಷ ಸ್ಥಾನದ ಸ್ಪರ್ಧೆಗೆ ಆಯ್ಕೆಯಾದ ನಂತರ ಮಾತನಾಡಿದ ಅವರು, ಟ್ರಂಪ್ ಆಡಳಿತದ ದುರವಸ್ಥೆಗಳನ್ನು ಪಟ್ಟಿ ಮಾಡಿ, ಆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಡೆನ್‌ – ಹ್ಯಾರಿಸ್ ಜೋಡಿಯ ಆಡಳಿತ, ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸಲಿದೆ. ಪರಿಶುದ್ಧ ಇಂಧನ ಕ್ರಾಂತಿಯ ಮೂಲಕ ಹವಾಮಾನ ಬದಲಾವಣೆಯ ವಿರುದ್ಧ ಹೋರಾಟ ನಡೆಸುತ್ತೇವೆ. ಕೈಗೆಟಕುವಂತಹ ‘ಕೇರ್‌ ಟೇಕಿಂಗ್’ ಕಾಯ್ದೆ, ಆರೋಗ್ಯ ವಿಮೆ, ನೌಕರರಿಗೆ ಅರ್ಹ ವೇತನ, ಭವಿಷ್ಯದ ‘ಮೇಡ್‌ ಇನ್‌ ಅಮೆರಿಕ’ ಪರಿಕಲ್ಪನೆಗೆ ಹೆಚ್ಚು ಒತ್ತು ನೀಡುವುದಾಗಿ ಹೇಳಿದ್ದಾರೆ.

‘ಮಹಿಳೆಯರ ಹಕ್ಕುಗಳ ರಕ್ಷಣೆಗೆ ಆದ್ಯತೆ ನೀಡುತ್ತೇವೆ. ವರ್ಣಭೇದ ನೀತಿಯನ್ನು ಬುಡಸಹಿತ ಕಿತ್ತು ಹಾಕುತ್ತೇವೆ. ಹೊಸ ಮತದಾನದ ಹಕ್ಕನ್ನು ಜಾರಿಗೆ ತರುತ್ತೇವೆ. ಇಂಥ ಎಲ್ಲ ಕ್ರಮಗಳಿಂದಾಗಿ ಪ್ರತಿಯೊಬ್ಬರ ಅಭಿಪ್ರಾಯಗಳಿಗೂ ಮನ್ನಣೆ ನೀಡಲು ಸಾಧ್ಯವಾಗುತ್ತದೆ’ ಎಂದು ಹ್ಯಾರಿಸ್ ಪ್ರತಿಪಾದಿಸಿದ್ದಾರೆ.

LEAVE A REPLY

Please enter your comment!
Please enter your name here