ಉಪಚುನಾವಣೆ: ನಿರೀಕ್ಷೆಯಂತೆ ಇಬ್ಬರು ಅಭ್ಯರ್ಥಿಗಳಿಗೆ ಕಾಂಗ್ರೆಸ್​​​ ಟಿಕೆಟ್​ ಘೋಷಣೆ​

0

ಬೆಂಗಳೂರಿನ ಆರ್.ಆರ್.ನಗರ ಹಾಗೂ ಶಿರಾ ವಿಧಾನಸಭಾ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆಯಾಗಿದೆ. ಜೆಡಿಎಸ್​ ಹಾಗೂ ಬಿಜೆಪಿ ನಾಯಕರು ಅಭ್ಯರ್ಥಿಗಳ ಆಯ್ಕೆ ಗೊಂದಲದಲ್ಲಿರುವಾಗಲೇ ಕಾಂಗ್ರೆಸ್ ತನ್ನ ಉರಿಯಾಳುಗಳನ್ನ ಕಣಕ್ಕಿಳಿಸಿ ಬೆರಗು ಮೂಡಿಸಿದೆ. ಶಿರಾದಲ್ಲಿ ನಿರೀಕ್ಷಿಸಿದಂತೆಯೇ ಅಭ್ಯರ್ಥಿಗೆ ಟಿಕೆಟ್ ನೀಡಿದ್ದರೆ, ರಾಜರಾಜೇಶ್ವರಿನಗರದಲ್ಲಿ ಕೊನೆಗೂ ಅಚ್ಚರಿಯ ಅಭ್ಯರ್ಥಿಯನ್ನೇ ಕಣಕ್ಕಿಳಿಸಲಾಗಿದೆ.

ಎರಡು ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಧಿಕೃತವಾಗಿ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದೆ. ನಿರೀಕ್ಷಿಸಿದಂತೆಯೇ ಶಿರಾದಿಂದ ಮಾಜಿ ಕಾನೂನು ಸಚಿವ ಟಿ.ಬಿ.ಜಯಚಂದ್ರರಿಗೆ ಟಿಕೆಟ್ ನೀಡಲಾಗಿದೆ. ಆರ್.ಅರ್.ನಗರಕ್ಕೆ ಅಚ್ಚರಿಯೆಂಬಂತೆ ಐಎಎಸ್ ಅಧಿಕಾರಿ ದಿವಂಗತ ಡಿ.ಕೆ.ರವಿಯವರ ಪತ್ನಿ ಕುಸುಮಾ ಅವರನ್ನ ಕಣಕ್ಕಿಳಿಸಿದೆ. ಈ ಬಗ್ಗೆ ಇಂದು ಎಐಸಿಸಿ ಅಧಿಕೃತವಾಗಿ ಪಟ್ಟಿಯನ್ನೂ ಪ್ರಕಟಿಸಿದೆ. ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಇನ್ನೂ ಅಭ್ಯರ್ಥಿಯ ಆಯ್ಕೆ ಹುಡುಕಾಟದಲ್ಲಿರುವಾಗಲೇ ಕಾಂಗ್ರೆಸ್ ಎರಡೂ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನ ಪ್ರಕಟಿಸಿ ಅಚ್ಚರಿ ಮೂಡಿಸಿದೆ.

ಆರ್.ಆರ್.ನಗರ ಕ್ಷೇತ್ರದ ಉಪಚುನಾವಣೆಯನ್ನ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹಾಗೂ ಸಂಸದ ಡಿ.ಕೆ.ಸುರೇಶ್ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಅಭ್ಯರ್ಥಿ ಗೆಲ್ಲಿಸಿಕೊಂಡು ಬರುವ ಸಂಪೂರ್ಣ ಹೊಣೆಯನ್ನ ಹೊತ್ತಿದ್ದಾರೆ. ಕುಸುಮಾ ಗೆಲ್ಲಿಸಿಕೊಂಡರಷ್ಟೇ ತಮ್ಮ ವರ್ಚಸ್ಸು ಉಳಿಯುತ್ತೆ ಇಲ್ಲವಾದರೆ ಮಣ್ಣುಪಾಲಾಗುತ್ತೆ ಅನ್ನೋದು ಸಹೋದರರಿಗೂ ಗೊತ್ತಿದೆ. ಹೀಗಾಗಿಯೇ ಬಿಜೆಪಿ ಅಭ್ಯರ್ಥಿಯ ವಿರುದ್ಧ ಕುಸುಮಾರನ್ನ ಗೆಲ್ಲಿಸಿಕೊಂಡು ಬರೋಕೆ ಹಲವು ತಂತ್ರಗಳನ್ನೇ ರೂಪಿಸುತ್ತಿದ್ದಾರೆ. ಯಾಕಂದ್ರೆ ಬಿಜೆಪಿಯ ಮುನಿರತ್ನಂ ಇಲ್ಲವೇ ಮುನಿರಾಜು ಗೌಡ ಅವರನ್ನಸಮರ್ಥವಾಗಿ ಎದುರಿಸಬಲ್ಲ ಶಕ್ತಿ ಕುಸುಮಾಗೆ ಇಲ್ಲ. ತಂದೆ ಹನುಮಂತರಾಯಪ್ಪನವರ ರಾಜಕೀಯ ಚಾಣಾಕ್ಷತನವೂ ಇಲ್ಲ. ಇದು ಡಿಕೆ ಬ್ರದರ್ಸ್ ಗೂ ಗೊತ್ತಿದೆ. ಹಾಗಾಗಿಯೇ ಬೇರೆಯದೇ ತಂತ್ರಗಾರಿಕೆಯನ್ನ ಹೆಣೆಯುತ್ತಿದ್ದಾರೆ. ಕುಸುಮಾ ಅಮೆರಿಕಾದಲ್ಲಿ ಕಲಿತವರು, ಉತ್ತಮ ವಿದ್ಯಾವಂತೆ, ಮೇಲಾಗಿ ಡಿಕೆ ರವಿಯವರ ಪತ್ನಿ, ಇದರ ಜೊತೆ ಕ್ಷೇತ್ರದಲ್ಲಿರುವ ಒಕ್ಕಲಿಗ ಸಮುದಾಯ ಕೈಹಿಡಿದರೆ ಸಾಕು ಗೆದ್ದಂತೆಯೇ ಎಂಬ ಲೆಕ್ಕಾಚಾರವನ್ನೂ ಕೈ ನಾಯಕರು ಹಾಕಿದ್ದಾರೆ.

ಅಲ್ಲದೆ ಬಿಜೆಪಿಯಲ್ಲಿ ಮುನಿರತ್ನಗೆ ಟಿಕೆಟ್ ಕೊಟ್ಟರೆ ಮುನಿರಾಜುಗೌಡಗೆ ಅಸಮಾಧಾನವಾಗಲಿದೆ. ತುಳಸಿಗೆ ಕೊಟ್ಟರೆ ಮುನಿರತ್ನಂ ತಟಸ್ಥವಾಗ್ತಾರೆ ಇದು ಡಿಕೆ ಬ್ರದರ್ಸ್ ಲೆಕ್ಕಾಚಾರ. ಇದರಿಂದ ಮುನಿರತ್ನಂಗೆ ಟಿಕೆಟ್ ಸಿಗದಿದ್ದರೆ, ಪರೋಕ್ಷವಾಗಿ ಅವರ ಸಪೋರ್ಟ್ ಪಡೆದು ಕುಸುಮಾ ಗೆಲ್ಲಿಸಿಕೊಳ್ಳಬಹುದೆಂಬ ಫ್ಲಾನ್ ಕೂಡ ಇದೆ.

ಜೆಡಿಎಸ್ ಪ್ರಬಲ ಅಭ್ಯರ್ಥಿ ಹಾಕೋದು ಡೌಟಿದೆ, ಇದರ ಲಾಭ ಹಾಗೂ ಮಹಿಳೆಗೆ ನೀವು ಮತ ನೀಡಿದರೆ ನಿಮ್ಮ ನೆರವಿಗೆ ನಿಲ್ತಾರೆ ಎಂಬ ಮಾತನ್ನೇ ಜನರಮುಂದಿಟ್ಟು ಕುಸುಮಾ ಗೆಲ್ಲಿಸಿಕೊಳ್ಳೋಕೆ ಡಿಕೆ ಸಹೋದರರು ಲೆಕ್ಕಾಚಾರ ಹಾಕಿದ್ದಾರೆ. ಇದು ವರ್ಕೌಟ್ ಆದರೆ ಕುಸುಮಾ ಗೆಲುವು ಕಷ್ಟವೇನಾಗಲ್ಲ ಅನ್ನೋ ಮಾತೂ ಇದೆ.

ಇನ್ನು ಶಿರಾದಲ್ಲೂ ಜೆಡಿಎಸ್ ಹಾಗೂ ಬಿಜೆಪಿಯಲ್ಲಿ ಯಾರಿಗೆ ಟಿಕೆಟ್ ಅನ್ನೋದು ಫಿಕ್ಸ್ ಆಗಿಲ್ಲ. ಆದರೆ ಕಾಂಗ್ರೆಸ್ ನಲ್ಲಿ ಮಾತ್ರ ನಿರೀಕ್ಷಿಸಿದಂತೆಯೇ ಮಾಜಿ ಕಾನೂನು ಸಚಿವ ಜಯಚಂದ್ರರಿಗೆ ಟಿಕೆಟ್ ನೀಡಲಾಗಿದೆ. ಹೀಗಾಗಿ ಜಯಚಂದ್ರರನ್ನ ಗೆಲ್ಲಿಸಿಕೊಳ್ಳಲೇಬೇಕೆಂಬ ನಿರ್ಧಾರಕ್ಕೆ ಕಾಂಗ್ರೆಸ್ ನಾಯಕರು ಬಂದಿದ್ದಾರೆ. ಜಿಲ್ಲಾ ಕಾಂಗ್ರೆಸ್ ನಲ್ಲಿದ್ದ ಭಿನ್ನಮತವನ್ನ ತಣ್ಣಗೆ ಮಾಡಿದ್ದಾರೆ. ಪರಸ್ಪರ ಒಬ್ಬರನ್ನ ಕಂಡರೆ ಮತ್ತೊಬ್ಬರು ಕಿಡಿಕಾರುತ್ತಿದ್ದ ಜಯಚಂದ್ರ, ರಾಜಣ್ಣ ಹಾಗೂ ಪರಮೇಶ್ವರ್ ಅವರನ್ನ ಒಂದು ಗೂಡಿಸಲಾಗಿದೆ. ಜಯಚಂದ್ರರನ್ನ ಗೆಲ್ಲಿಸಿಕೊಂಡು ಬರುವಂತೆ ಪರಮೇಶ್ವರ್​ಗೆ ಉಸ್ತುವಾರಿ ನೀಡಲಾಗಿದೆ. ಪರಂಗೆ ಹೆಗಲಾಗಿ ಕೆಲಸ ಮಾಡುವಂತೆ ರಾಜಣ್ಣಗೂ ಜವಾಬ್ದಾರಿ ನೀಡಲಾಗಿದೆ. ಕ್ಷೇತ್ರದಲ್ಲಿ ಪ್ರಸ್ತುತ ಬಿಜೆಪಿಗೆ ಭದ್ರವಾದ ನೆಲೆಯಿಲ್ಲ. ಏನಿದ್ದರೂ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆಯೇ ನೇರವಾದ ಹಣಾಹಣಿ ಇರೋದು.

ಜೆಡಿಎಸ್​ನಲ್ಲಿ ನಿಧನರಾದ ಶಾಸಕ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ ಇಲ್ಲವೇ ಅವರ ಪುತ್ರ ಸತ್ಯಪ್ರಕಾಶ್​ಗೆ ಟಿಕೆಟ್ ಸಿಗಲಿದೆ ಎಂಬ ಮಾಹಿತಿಯಿದೆ. ಆದರೆ ಟಿಕೆಟ್ ಆಕಾಂಕ್ಷಿಗಳಾಗಿದ್ದ ರಾಜೇಶ್ ಗೌಡ ಬಿಜೆಪಿ ಸೇರಿದ್ದರೆ,ಕಲ್ಕೆರೆ ರವಿಕುಮಾರ್ ಕಾಂಗ್ರೆಸ್ ಸೇರಿದ್ದಾರೆ. ಹೀಗಾಗಿ ಜೆಡಿಎಸ್ ನೆಲೆ ಕೂಡ ಅದುರತೊಡಗಿದೆ. ಮತ್ತೊಂದು ಕಡೆ ರಾಜೇಶ್ ಗೌಡ ಬಿಜೆಪಿಗೆ ಹೋಗಿರೋದರಿಂದ ಸ್ವಲ್ಪ ಬಿಜೆಪಿಗೂ ಬಲಬಂದಂತಾಗಿದೆ. ಆದರೆ, ಕಾಂಗ್ರೆಸ್ ನಷ್ಟಕ್ಕಿಂತ ಲಾಭವೇ ಹೆಚ್ಚಾಗಿದೆ. ರವಿಕುಮಾರ್ ಬಂದಿರೋದ್ರಿಂದ ಜಯಚಂದ್ರರ ಗೆಲುವಿನ ಆಸೆ ಮತ್ತಷ್ಟು ಹೆಚ್ಚಾಗಿದೆ. ಇದಕ್ಕೆ ಪೂರಕವಾಗಿ ಪರಮೇಶ್ವರ್ ಹಾಗೂ ರಾಜಣ್ಣ ಕ್ಷೇತ್ರದಲ್ಲಿ ಕುಂಚಿಟಿಗ, ಯಾದವ, ಮುಸ್ಲಿಂ, ದಲಿತ ಮತಗಳ ಕ್ರೋಡೀಕರಣಕ್ಕೆ ಫ್ಲಾನ್ ನಡೆಸಿದ್ದಾರೆ. ಸಮುದಾಯವಾರು ಸಭೆಗಳನ್ನ ನಡೆಸುತ್ತಿದ್ದಾರೆ. ಹೀಗಾಗಿ ಜಯಚಂದ್ರ ಗೆಲ್ಲಿಸಿಕೊಳ್ಳೋಕೆ ಅಗತ್ಯವಾದ ಸೀನರಿಯನ್ನ ಕ್ರಿಯೇಟ್ ಮಾಡಿಕೊಳ್ಳುತ್ತಿದ್ದಾರೆ.

ಆರ್.ಆರ್.ನಗರದ ಜಾತಿ ಲೆಕ್ಕಾಚಾರವೇನು..?

1) ಕ್ಷೇತ್ರದ ಒಟ್ಟು ಮತದಾರರು – 4,80,000

2) ಒಟ್ಟು ಬೂತ್ ಗಳ ಸಂಖ್ಯೆ – 381

3) ಒಕ್ಕಲಿಗ – 1,00,000

4) ಲಿಂಗಾಯತ – 45,000

5) ಕುರುಬ – 50,000

6) ದಲಿತ – 71,000

7) ಒಬಿಸಿ – 70,000

8) ಮುಸ್ಲಿಂ – 25,000

9) ಇತರೆ ಮತಗಳು- 25,000

ಶಿರಾ ಕ್ಷೇತ್ರದ ಜಾತಿ ಲೆಕ್ಕಾಚಾರವೇನು..?

1) ಕ್ಷೇತ್ರದ ಒಟ್ಟು ಮತದಾರರು- 2,10,814

2) ಕುಂಚಿಟಿಗ ಒಕ್ಕಲಿಗ- 40,000

3) ಎಸ್ಸಿ/ಎಸ್ಟಿ- 80,000

4) ಯಾದವ- 25,000

5) ಕುರುಬ- 23,000

6) ಮುಸಲ್ಮಾನ್- 15,000

7) ಬಲಿಜಿಗ – 16,000

8) ಲಿಂಗಾಯತ- 2.000

9) ಇತರೆ 9,000

ಶಿರಾ ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಗಳನ್ನ ಘೋಷಿಸಿದೆ. ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಟಿಕೆಟ್ ಯಾರಿಗೆ ನೀಡಬೇಕು ಎಂಬ ಗೊಂದಲದಲ್ಲಿರುವಾಗಲೇ ಕೈ ನಾಯಕರು ಬಿಫಾರಂ ಕೊಟ್ಟಿದ್ದಾರೆ. ತಮ್ಮ ಅಭ್ಯರ್ಥಿಗಳನ್ನ ಗೆಲ್ಲಿಸಿಕೊಳ್ಳೋಕೆ ಎರಡು ಕ್ಷೇತ್ರಗಳ ಜಾತಿವಾರು ಪಟ್ಟಿಯನ್ನ ಕೈಗೆತ್ತಿಕೊಂಡಿದ್ದಾರೆ. ಪಟ್ಟಿಯನ್ನ ಕೈಯಲ್ಲಿಡಿದುಕೊಂಡೇ ಮತದಾರರನ್ನ ಸೆಳೆಯೋಕೆ ಸ್ಕೆಚ್ ರೂಪಿಸಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳ ವಿರುದ್ಧ ತಮ್ಮವರನ್ನ ಗೆಲ್ಲಿಸಿಕೊಳ್ಳೋಕೆ ತಂತ್ರಕುತಂತ್ರಕ್ಕೂ ಕೈಹಾಕೋಕೆ ನಿರ್ಧರಿಸಿದ್ದಾರೆ.

LEAVE A REPLY

Please enter your comment!
Please enter your name here