ಉತ್ತರ ಪ್ರದೇಶದಲ್ಲಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತ್ಯೆಯಾದ ರೌಡಿ ಶೀಟರ್ ವಿಕಾಸ್ ದುಬೆ ಕುರಿತು ವೆಬ್ ಸಿರೀಸ್ ನಿರ್ದೇಶನ ಮಾಡಲು ಬಾಲಿವುಡ್ ನಿರ್ದೇಶಕರೊಬ್ಬರು ಮುಂದಾಗಿದ್ದಾರೆ.
ಹಿಂದಿ ಹಿರಿಯ ನಿರ್ದೇಶಕ ಹನ್ಸಲ್ ಮೆಹ್ತಾ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ ಎಂಬ ಸುದ್ದಿ ಚರ್ಚೆಯಲ್ಲಿದೆ. ಶಾಹಿದ್ ಮತ್ತು ಒಮೆರ್ಟಾ ಚಿತ್ರಗಳ ಖ್ಯಾತಿಯ ಹನ್ಸಲ್ ಮೆಹ್ತಾ ಈಗಾಗಲೇ ಸ್ಕ್ರಿಪ್ಟ್ ಸಿದ್ದಪಡಿಸುತ್ತಿದ್ದು, ಶೈಲೇಶ್ ಸಿಂಗ್ ನಿರ್ಮಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಪತ್ರಕರ್ತ ರಾಹುಲ್ ರೌತ್ ಈ ಕುರಿತು ಮಾಹಿತಿ ನೀಡಿದ್ದು, ಮುಂದಿನ ವರ್ಷ ಶೂಟಿಂಗ್ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ. ಜರ್ನಲಿಸ್ಟ್ ಟ್ವೀಟ್ ಗೆ ಸ್ಪಷ್ಟನೆ ನೀಡಿರುವ ಹನ್ಸಲ್ ಮೆಹ್ತಾ ಕೆಲಸ ಪ್ರಗತಿಯಲ್ಲಿದೆ ಎಂದು ಖಚಿತಪಡಿಸಿದ್ದಾರೆ.
‘ಇದು ಬಹಳ ಪ್ರಮುಖ ಕಥೆಯಾಗಿದ್ದು, ರಾಜಕೀಯ, ಅಪರಾಧ ಮತ್ತು ಶಾಸಕರು ಕುತೂಹಲಕಾರಿ ಸಂಬಂಧದ ಪ್ರತಿಬಿಂಬವಾಗಿದೆ. ಹಾಗಾಗಿ, ರಾಜಕೀಯ ಥ್ರಿಲ್ಲರ್ ರೋಚಕವಾಗಿರಲಿದೆ. ಸದ್ಯಕ್ಕೆ ಪಾತ್ರಗಳ ಕುರಿತು ಏನೂ ನಿರ್ಧಾರವಾಗಿಲ್ಲ’ ಎಂದು ಹನ್ಸಲ್ ಮೆಹ್ತಾ ಮಾಹಿತಿ ನೀಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಹಲವು ಪ್ರಮುಖ ಕೇಸ್‌ಗಳಲ್ಲಿ ಮುಖ್ಯ ಆರೋಪಿಯಾಗಿದ್ದ ವಿಕಾಸ್ ದುಬೆ ಆರು ಜನ ಪೊಲೀಸರನ್ನು ಕೊಂದು ಎಸ್ಕೇಪ್ ಆಗಿದ್ದ. ಬಳಿಕ, ಈತನನ್ನು ಜುಲೈ 10 ರಂದು ಬಂಧಿಸಿ ಕಾನ್ಪುರಕ್ಕೆ ಕರೆತರುವ ವೇಳೆ ಎನ್‌ಕೌಂಟರ್ ಮಾಡಲಾಗಿದೆ.
ಇದು ನಕಲಿ ಎನ್‌ಕೌಂಟರ್, ಉದ್ದೇಶಪೂರ್ವವಾಗಿ, ಪೂರ್ವನಿಯೋಜಿತವಾಗಿ ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ ಎಂದು ಆರೋಪಿಸಿ ನ್ಯಾಯಾಲಯದಲ್ಲಿ ಅರ್ಜಿ ಸಹ ದಾಖಲಾಗಿದೆ.