ಎಪಿಎಂಸಿ, ಭೂ ಸುಧಾರಣಾ ಕಾಯ್ದೆ ವಿರೋಧಿಸಿ ಕರ್ನಾಟಕ ಬಂದ್​​ – ಆನೇಕಲ್​​ನಲ್ಲಿ ನೀರಸ ಪ್ರತಿಕ್ರಿಯೆ

0

 ಎಪಿಎಂಸಿ ಮತ್ತು ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತ ಮತ್ತು ಪ್ರಗತಿಪರ ಸಂಘಟನೆಗಳು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ಆನೇಕಲ್ ತಾಲ್ಲೂಕಿನಾದ್ಯಂತ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೌದು, ಬೆಳಗ್ಗೆ ಅತ್ತಿಬೆಲೆ ಗಡಿ, ಚಂದಾಪುರ ವೃತ್ತ ಆನೇಕಲ್ ಪಟ್ಟಣದಲ್ಲಿ ಕೆಲ ಹೊತ್ತು ರೈತ ಮತ್ತು ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು ಹೊರತುಪಡಿಸಿ ಮುಂಜಾನೆಯಿಂದಲೇ ಎಂದಿನಂತೆ ಜನಜೀವನ, ವ್ಯಾಪಾರ ವಹಿವಾಟು ಆರಂಭಗೊಂಡಿತ್ತು. ಬಿಎಂಟಿಸಿ ಬಸ್ಸುಗಳು ಸೇರಿದಂತೆ ವಾಹನ ಸಂಚಾರವು ಎಂದಿನಂತೆ ಇತ್ತು. ಇದರ ನಡುವೆ ಅತ್ತಿಬೆಲೆ ಗಡಿಯಲ್ಲಿ ಸಮಾವೇಶಗೊಂಡ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ ಹೆದ್ದಾರಿಯಲ್ಲಿ ವಾಹನಗಳನ್ನು ತಡೆದು ಪ್ರತಿಭಟನೆಗೆ ಮುಂದಾದಾಗ ಅತ್ತಿಬೆಲೆ ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಟ್ಟು ಕಳುಹಿಸಿದ್ದಾರೆ.

ಇನ್ನು, ಪ್ರತಿಭಟನೆ ವೇಳೆ ಮಾತಾಡಿದ ಕನ್ನಡಪರ ಹೋರಾಟಗಾರ ನವೀನ್​​, ಕೇಂದ್ರ ಮತ್ತು ರಾಜ್ಯ ಜಾರಿಗೊಳಿಸಲು ಮುಂದಾಗಿರುವ ಎಪಿಎಂಸಿ ಮತ್ತು ಭೂ ಸುಧಾರಣಾ ಕಾಯ್ದೆ ಹಿಂಪಡೆಯಬೇಕು. ಇಲ್ಲವಾದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ಎಪಿಎಂಸಿ ಮತ್ತು ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ರೈತರಿಗೆ ಮಾರಕವಾಗಿದೆ. ಬಂಡವಾಳಶಾಹಿಗಳ ಪರವಾಗಿದೆ. ಕಾಯ್ದೆ ಜಾರಿಯಾದರೆ ರೈತ ಭೂಮಿ ಕಳೆದುಕೊಂಡು ನಿರುದ್ಯೋಗಿ ಆಗುತ್ತಾನೆ. ಹಣವಂತರು ನೂರಾರು ಎಕರೆ ಭೂಮಿಯನ್ನು ಸುಲಭವಾಗಿ ಕಬಳಿಸಲು ಕಾಯ್ದೆ ಅನುವು ಮಾಡಿಕೊಡುತ್ತದೆ. ಹಾಗಾಗಿ ಸರ್ಕಾರ ಕೂಡಲೇ ಉದ್ದೇಶಿತ ಕಾಯ್ದೆಯನ್ನು ಹಿಂಪಡೆಯಬೇಕು. ಅದಕ್ಕಾಗಿಯೇ ಬೀದಿಗಳಿದು ಇಂದು ಹೋರಾಟ ನಡೆಸಲಾಗುತ್ತಿದೆ ಎಂದು ಕನ್ನಡ ಪರ ಹೋರಾಟಗಾರ್ತಿ ನಾಗವೇಣಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಅತ್ತಿಬೆಲೆ ಗಡಿ, ಚಂದಾಪುರ ಸರ್ಕಲ್, ಆನೇಕಲ್ ಪಟ್ಟಣ ಸೇರಿದಂತೆ ಹಲವು ಕಡೆ ರೈತ ಮತ್ತು ಕನ್ನಡಪರ ಸಂಘಟನೆಗಳ ಪ್ರತಿಭಟನೆ ಹೊರತುಪಡಿಸಿ ತಾಲ್ಲೂಕಿನಾದ್ಯಂತ ಎಂದಿನಂತೆ ವ್ಯಾಪಾರ ವಹಿವಾಟು, ವಾಹನ ಸಂಚಾರ, ಜನಜೀವನ ಇದ್ದು, ರೈತ ಮತ್ತು ಪ್ರಗತಿಪರ ಸಂಘಟನೆಗಳು ಕರೆ ನೀಡಿದ್ದ ಬಂದ್​ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here