ಎಸ್​.ಪಿ. ಬಾಲಸುಬ್ರಹ್ಮಣ್ಯಂ ನಿಧನ; ಕರ್ನಾಟಕದ ಗಣ್ಯರ ಕಂಬನಿ

0

ಕೋಟ್ಯಾಂತರ ಅಭಿಮಾನಿಗಳ ಪ್ರಾರ್ಥನೆ ಫಲಿಸಲಿಲ್ಲ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಗಾಯಕ ಎಸ್​.ಪಿ. ಬಾಲಸುಬ್ರಹ್ಮಣ್ಯಂ ಶುಕ್ರವಾರ ಮಧ್ಯಾಹ್ನ ವಿಧಿವಶರಾದರು.

74 ವರ್ಷದ ಎಸ್. ಪಿ. ಬಾಲಸುಬ್ರಮಣ್ಯಂ ಶುಕ್ರವಾರ ಮಧ್ಯಾಹ್ನ 1.04ಕ್ಕೆ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕರ್ನಾಟಕದಲ್ಲಿಯೂ ಬಾಲಸುಬ್ರಮಣ್ಯಂ ಅಪಾರ ಅಭಿಮಾನಿಗಳನ್ನು ಹೊಂದಿದ್ದರು.

ಕರ್ನಾಟಕದ ರಾಜಕೀಯ, ಸಿನಿಮಾ ಕ್ಷೇತ್ರದ ಗಣ್ಯರು ಎಸ್. ಪಿ. ಬಾಲಸುಬ್ರಮಣ್ಯಂ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಸಾವಿರಾರು ಹಾಡುಗಳ ಮೂಲಕ ಜನರನ್ನು ರಂಜಿಸಿದ ಗಾನ ಗಂಧರ್ವನಿಗೆ ಅಂತಿಮ ನಮನವನ್ನು ಸಲ್ಲಿಸಿದ್ದಾರೆ.

ಎಸ್. ಪಿ. ಬಾಲಸುಬ್ರಮಣ್ಯಂ ಕನ್ನಡ, ಕರ್ನಾಟಕದ ಬಗ್ಗೆ ಅಪಾರ ಪ್ರೀತಿ, ಅಭಿಮಾನ ಹೊಂದಿದ್ದರು. ಇನ್ನೊಂದು ಜನ್ಮ ಇದ್ದರೆ ಕರ್ನಾಟಕದಲ್ಲಿ ಹುಟ್ಟುವೆ ಎಂದು ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ಕನ್ನಡ ಚಿತ್ರರಂಗದ ಜೊತೆ ಆತ್ಮೀಯ ಒಡನಾಟವನ್ನು ಹೊಂದಿದ್ದರು.

ಬಿ. ಎಸ್. ಯಡಿಯೂರಪ್ಪ ಸಂತಾಪ

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪೆ ಎಸ್. ಪಿ. ಬಾಲಸುಬ್ರಮಣ್ಯಂ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. “ಚಲನಚಿತ್ರರಂಗದ ಶ್ರೇಷ್ಠ ಗಾಯಕರಾಗಿದ್ದ ಅವರು, ಹಿಂದಿ ಸೇರಿದಂತೆ ದಕ್ಷಿಣ ಭಾರತದ ಎಲ್ಲ ಭಾಷೆಗಳ ಚಲನಚಿತ್ರ ಗೀತೆಗಳಿಗೆ ಹಿನ್ನೆಲೆಗಾಯನ ಮಾಡಿ ಅಪಾರ ಜನಪ್ರಿಯತೆಯನ್ನು ಗಳಿಸಿದ್ದರು. ನಟನೆ, ಸಂಗೀತ ಸಂಯೋಜನೆ, ಸಂಗೀತ ಕಾರ್ಯಕ್ರಮಗಳ ನಿರ್ವಹಣೆಯನ್ನೂ ಮಾಡಿ ಸಂಗೀತ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಯನ್ನು ಮಾಡಿದ್ದರು” ಎಂದು ಸಂತಾಪ ಸೂಚಿಸಿದ್ದಾರೆ.

“ಹತ್ತಕ್ಕಿಂತ ಹೆಚ್ಚು ಭಾಷೆಗಳಲ್ಲಿ 40 ಸಾವಿರಕ್ಕೂ ಮೀರಿ ಹಾಡುಗಳನ್ನು ಹಾಡಿದ ಕೀರ್ತಿ ಅವರದ್ದು. ಕನ್ನಡ ಮತ್ತು ಕನ್ನಡಿಗರ ಬಗ್ಗೆ ವಿಶೇಷ ಅಭಿಮಾನವನ್ನು ಹೊಂದಿದ್ದರು. ಪದ್ಮಶ್ರೀ, ಪದ್ಮವಿಭೂಷಣ ಪ್ರಶಸ್ತಿ ಹಾಗೂ ಇನ್ನಿತರ ಪ್ರಶಸ್ತಿ ಗೌರವಗಳನ್ನು ಪಡೆದ ಸುಪ್ರಸಿದ್ಧ ಗಾಯಕರು. ಅವರ ಹಾಡುಗಳು ಜನಮಾನಸದಲ್ಲಿ ಚಿರಸ್ಥಾಯಿಯಾಗಿ ನೆಲೆಸಿದೆ. ಅವರ ನಿಧನದಿಂದ ಸಂಗೀತ ಕ್ಷೇತ್ರದ ಪ್ರಮುಖ ಕೊಂಡಿಯೊಂದು ಕಳಚಿದಂತಾಗಿದೆ” ಎಂದು ಹೇಳಿದ್ದಾರೆ.

ದೇಶಕ್ಕೆ ತುಂಬಲಾರದ ನಷ್ಟ

ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು ಎಸ್. ಪಿ. ಬಾಲಸುಬ್ರಮಣ್ಯಂ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. “ಎಸ್‌ಪಿಬಿ ಅವರ ನಿಧನ ದೇಶಕ್ಕೆ ಅದರಲ್ಲೂ ಸಂಗೀತ ಕ್ಷೇತ್ರಕ್ಕೆ ಅಪಾರ ನಷ್ಟ ಉಂಟು ಮಾಡಿದೆ” ಎಂದು ಹೇಳಿದ್ದಾರೆ.

ಸಂಗೀತ ಕ್ಷೇತ್ರ ಬಡವಾಗಿದೆ

ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌ ಎಸ್. ಪಿ. ಬಾಲಸುಬ್ರಮಣ್ಯಂ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. “ಗಾನ ಗಂಧರ್ವ ಡಾ. ಎಸ್​. ಪಿ. ಬಾಲಸುಬ್ರಹ್ಮಣ್ಯಂ ಇನ್ನಿಲ್ಲ ಎಂಬುದನ್ನು ಕಲ್ಪಿಸಿಕೊಳ್ಳಲೂ ಆಗುತ್ತಿಲ್ಲ. ಎಸ್‌ಪಿಬಿ ಅವರನ್ನು ಕಳೆದುಕೊಂಡ ಸಂಗೀತ ಕ್ಷೇತ್ರ ತುಂಬಾ ಬಡವಾಗಿದೆ. ಬಹುಭಾಷಾ ಗಾಯಕರಾಗಿದ್ದ ಕಂಚಿನ ಕಂಠದ ಬಾಲಸುಬ್ರಹ್ಮಣ್ಯಂ ಅವರು 16 ಭಾರತೀಯ ಭಾಷೆಗಳಲ್ಲಿ 40,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿ ದಾಖಲೆ‌ ಬರೆದ ಗಾಯಕ ಎಂಬುದು ಇತಿಹಾಸದಲ್ಲಿ ದಾಖಲಾಗಿದೆ. ಅವರು ಹಾಡಿದ ಹಾಡುಗಳನ್ನು ಕೇಳುತ್ತಾ ಬೆಳೆದ ನಾವು ಅವರ ಅಗಲಿಕೆಯನ್ನೂ ನೋಡಬೇಕಾದ ಸಂದರ್ಭ ಬಂದಿದ್ದು ದುರ್ದೈವ. ಅವರ ಆತ್ಮಕ್ಕೆ ಚಿರಶಾಂತಿ‌ ದೊರಕಲಿ‌ ಮತ್ತು ಅವರ ಕುಟುಂಬದ ಸದಸ್ಯರಿಗೆ, ಅಪಾರ ಸಂಗೀತ ಅಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ” ಎಂದು ಸಂತಾಪ ಸೂಚಿಸಿದ್ದಾರೆ.

ಚಿರ ಮೌನಕ್ಕೆ ಶರಣಾಗಿದ್ದಾರೆ

ಆರೋಗ್ಯ ಸಚಿವ ಬಿ. ಶ್ರೀರಾಮುಲು ಎಸ್. ಪಿ. ಬಾಲಸುಬ್ರಮಣ್ಯಂ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. “ದೇಶ ಕಂಡ ಶ್ರೇಷ್ಠ ಗಾಯಕ, ಹಲವಾರು ಭಾಷೆಗಳಲ್ಲಿ ಹಾಡಿ ಕೋಟ್ಯಂತರ ಅಭಿಮಾನಿಗಳ ಪ್ರೀತಿ ಸಂಪಾದಿಸಿದ ಹಾಡುಗಾರ, ನಟ, ಸಂಗೀತ ನಿರ್ದೇಶಕ ಶ್ರೀ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ನಮ್ಮನ್ನೆಲ್ಲ ಅಗಲಿದ್ದಾರೆ. ಕೊರೊನ ಸೋಂಕಿನೊಂದಿಗೆ ಸತತವಾಗಿ ಹೋರಾಡಿದ ಅವರು ಕೊನೆಗೂ ವಿಧಿಯ ಕರೆಗೆ ಓಗೊಟ್ಟು ಗಾಯನ‌ ನಿಲ್ಲಿಸಿ ಚಿರಮೌನಕ್ಕೆ ಶರಣಾಗಿದ್ದಾರೆ” ಎಂದು ಹೇಳಿದ್ದಾರೆ.

“ಅವರ ಸಾವು ಇಡೀ ಭಾರತೀಯ ಚಿತ್ರರಂಗದಲ್ಲಿ ಶೂನ್ಯಭಾವ ಸೃಷ್ಟಿಸಿದೆ. ಎಲ್ಲರ ಪ್ರೀತಿಯ ‘ಬಾಲು’ ಅವರ ಅಗಲಿಕೆ ಎಂದೂ ತುಂಬಲಾರದ ನಷ್ಟ. ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ಈ ನೋವು ತಡೆದುಕೊಳ್ಳುವ ಶಕ್ತಿ ಭಗವಂತ ನೀಡಲಿ. ನಮ್ಮಂತಹ ಎಷ್ಟೋ ಅಭಿಮಾನಿಗಳ ಹೃದಯದಲ್ಲಿ ಎಸ್‌ಪಿಬಿ ಎಂದಿಗೂ ಅಜರಾಮರ” ಎಂದು ಶ್ರೀರಾಮುಲು ಸಂತಾಪ ಸೂಚಿಸಿದ್ದಾರೆ.

ಗಾನ ಕೋಗಿಲೆ ಮೌನವಾಗಿದೆ

ತೋಟಗಾರಿಕಾ ಸಚಿವ ನಾರಾಯಣ ಗೌಡ ಅವರು ಎಸ್. ಪಿ. ಬಾಲಸುಬ್ರಮಣ್ಯಂ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. “ಸಂಗೀತ ದಿಗ್ಗಜ, ಖ್ಯಾತ ಹಿನ್ನೆಲೆ ಗಾಯಕ, ನಟ, ಸಂಗೀತ ನಿರ್ದೇಶಕ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂ ನಿಧನ ನಾಡಿಗೆ ತುಂಬಲಾರದ ನಷ್ಟ. ಗಾನಕೋಗಿಲೆ ಶಾಶ್ವತ ಮೌನಕ್ಕೆ ಶರಣಾಗಿದೆ. ಅವರ ಆತ್ಮಕ್ಕೆ ಚಿರ ಶಾಂತಿ ಸಿಗಲಿ” ಎಂದು ಹೇಳಿದ್ದಾರೆ.

ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟ

ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಸ್. ಪಿ. ಬಾಲಸುಬ್ರಮಣ್ಯಂ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. “ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರ ಅಗಲಿಕೆ ಸಾಂಸ್ಕೃತಿಕ ಲೋಕಕ್ಕೆ ತುಂಬಿಬಾರದ ನಷ್ಟ” ಎಂದು ಹೇಳಿದ್ದಾರೆ.

ಭಾವಪೂರ್ಣ ವಿದಾಯಗಳು

ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಎಸ್. ಪಿ. ಬಾಲಸುಬ್ರಮಣ್ಯಂ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. “ಗಾನ ಗಾರುಡಿಗ ಬಾಲಸುಬ್ರಹ್ಮಣ್ಯಂ ಅವರ ಅಗಲಿಕೆ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಅವರ ಮುಂದಾಳತ್ವದಲ್ಲಿ ದೀರ್ಘಕಾಲ ಮೂಡಿಬಂದ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮವನ್ನು ವೀಕ್ಷಿಸುತಿದ್ದೆ. ಅವರ ಸರಳತೆ, ಸ್ಪರ್ಧಿಗಳನ್ನು ಹುರುದುಂಬಿಸುತ್ತಿದ್ದ ರೀತಿಗೆ ನಾನವರ ಅಭಿಮಾನಿಯಾಗಿದ್ದೆ. ಇಂತಹ ಮಹಾನ್ ಗಾಯಕನಿಗೆ ನನ್ನ ಭಾವಪೂರ್ಣ ವಿದಾಯಗಳು” ಎಂದು ಹೇಳಿದ್ದಾರೆ.

ಉಪಮುಖ್ಯಮಂತ್ರಿಗಳಿಂದ ಸಂತಾಪ

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಎಸ್. ಪಿ. ಬಾಲಸುಬ್ರಮಣ್ಯಂ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. “ಗಾನಗಂಧರ್ವ ಎಸ್.ಪಿ. ಬಾಲಸುಬ್ರಹ್ಮಣ್ಯಂ ಇಹಲೋಕ ತ್ಯಜಿಸಿದ್ದಾರೆಂಬ ಸುದ್ದಿ ಕೇಳಿ ಅಘಾತವಾಗಿದೆ. ಸಂಗೀತಲೋಕಕ್ಕೆ ಇವರ ಕೊಡುಗೆ ಅಪಾರ. ಅನೇಕ ಪ್ರತಿಭೆಗಳಿಗೆ ಬದುಕು ಕಲ್ಪಿಸಿದ್ದ ಇವರ ಸಾವಿನಿಂದ ಅಪಾರ ನಷ್ಟವಾಗಿದೆ” ಎಂದು ಹೇಳಿದ್ದಾರೆ.

ಕನ್ನಡಿಗರ ಹೃದಯ ಕಮಲದಲ್ಲಿ ಶಾಶ್ವತ

ಕರ್ನಾಟಕ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಎಸ್‌ಪಿಬಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. “ತಮ್ಮ ಮಧುರ ಕಂಠದಿಂದ ಅಸಂಖ್ಯಾತ ಜನರನ್ನು ಭಾವಪರವಶರನ್ನಾಗಿ ಮಾಡಿ, ಕನ್ನಡಿಗರ ಹೃದಯಕಮಲದಲ್ಲಿ ಶಾಶ್ವತ ಸ್ಥಾನ ಪಡೆದುಕೊಂಡ, ಪದ್ಮಭೂಷಣ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ನಮ್ಮನ್ನ ಅಗಲಿರುವುದು ತುಂಬಲಾರದ ನಷ್ಟ” ಎಂದು ಹೇಳಿದ್ದಾರೆ. ಅವರ ಆತ್ಮಕ್ಕೆ ಸದ್ಗತಿ ಮತ್ತು ಅವರ ಕುಟುಂಬಕ್ಕೆ ಮತ್ತು ಆತ್ಮೀಯರಿಗೆ ದು:ಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಪ್ರಾರ್ಥನೆ.

ಎಚ್. ಡಿ. ಕುಮಾರಸ್ವಾಮಿ ಸಂತಾಪ

“ಬಾಲಸುಬ್ರಹ್ಮಣ್ಯಂ ಗಾನಸುಧೆಯ ಮೋಡಿಗೆ ಒಳಗಾದವರಲ್ಲಿ ನಾನೂ ಒಬ್ಬ. ಮರುಜನ್ಮ ಎಂಬುದಿದ್ದರೆ ಕನ್ನಡನಾಡಿನಲ್ಲಿ ಹುಟ್ಟಲು ಬಯಸುತ್ತೇನೆ ಎಂಬ ಎಸ್ಪಿಬಿಯವರ ಮಾತು ಈಗಲೂ ಕಿವಿಯಲ್ಲಿ ಅನುರಣಿಸುತ್ತಿದೆ” ಎಂದು ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

 

LEAVE A REPLY

Please enter your comment!
Please enter your name here