ಐಪಿಎಲ್‌ಗೆ ಸರ್ಕಾರದಿಂದ ತಾತ್ಪಿಕ ಒಪ್ಪಿಗೆ: ಬಿಸಿಸಿಐ

0

‘ಈ ಬಾರಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಕ್ರಿಕೆಟ್‌ ಟೂರ್ನಿಯನ್ನು ಯುಎಇನಲ್ಲಿ ನಡೆಸಲು ಕೇಂದ್ರ ಸರ್ಕಾರವು ತಾತ್ವಿಕ ಒಪ್ಪಿಗೆ ನೀಡಿದೆ’ ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಹೇಳಿದೆ. ಇದರೊಂದಿಗೆ ಲೀಗ್‌ನ ಎಂಟು ಫ್ರ್ಯಾಂಚೈಸ್‌ಗಳು ಟೂರ್ನಿಯ ಸಿದ್ಧತೆಯ ಭಾಗವಾಗಿ ಆಟಗಾರರು ಹಾಗೂ ನೆರವು ಸಿಬ್ಬಂದಿಗೆ ಕ್ವಾರಂಟೈನ್‌ ಸೇರಿದಂತೆ ಕೋವಿಡ್‌-19 ತಪಾಸಣಾ ಕಾರ್ಯವಿಧಾನಗಳನ್ನು ಆರಂಭಿಸಿವೆ.

‘ಟೂರ್ನಿಗೆ ಸದ್ಯ ತಾತ್ವಿಕ ಅನುಮೋದನೆ ಮಾತ್ರ ದೊರೆತಿದ್ದು, ಇನ್ನು ಕೆಲವೇ ದಿನಗಳಲ್ಲಿ ಲಿಖಿತ ರೂಪದ ಒಪ್ಪಿಗೆ ಸಿಗಲಿದೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಬಿಸಿಸಿಐನ ಸೂಚನೆಯ ಅನ್ವಯ ಆಗಸ್ಟ್‌ 20ರ ನಂತರವೇ ಎಲ್ಲ ತಂಡಗಳು ಯುಎಇಗೆ ತೆರಳುತ್ತಿವೆ. ಮಹೇಂದ್ರ ಸಿಂಗ್‌ ಧೋನಿ ನಾಯಕತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಆಟಗಾರರು ಆಗಸ್ಟ್‌ 22ರಂದು ತೆರಳಲಿದ್ದಾರೆ. ಮುಂಬೈ ಇಂಡಿಯನ್ಸ್‌ ತಂಡ ತನ್ನ ಆಟಗಾರರನ್ನು ಮುಂಬೈನಲ್ಲಿ ಕ್ವಾರಂಟೈನ್‌ಗೆ ಒಳಪಡಿಸುತ್ತಿದೆ.

ಕೆಲವು ಫ್ರಾಂಚೈಸ್‌ಗಳು ತಮ್ಮ ಆಟಗಾರರು ಯುಎಇಗೆ ತೆರಳುವ ಮುನ್ನ ದೆಹಲಿ, ಮುಂಬೈ, ಚೆನ್ನೈ ಹಾಗೂ ಬೆಂಗಳೂರು ನಗರಗಳಲ್ಲಿ ಕೋವಿಡ್‌ ಪರೀಕ್ಷೆ ನಡೆಸಲು ವ್ಯವಸ್ಥೆ ಮಾಡುತ್ತಿವೆ.

‘ಆಟಗಾರರರು ಯುಎಇಗೆ ತೆರಳುವ ಮುನ್ನ ಕೋವಿಡ್‌ಗೆ ಸಂಬಂಧಿಸಿದ ಪಿಸಿಆರ್‌ ಟೆಸ್ಟ್‌ ಮಾಡಿಸಿ ‘ನೆಗೆಟಿವ್‌’ ವರದಿಯೊಂದಿಗೆ ತೆರಳುವುದು ಉತ್ತಮ. ಇದಾದ ಬಳಿಕ ಬಿಸಿಸಿಐನ ಮಾರ್ಗಸೂಚಿಗಳ (ಎಸ್‌ಒಪಿ) ಅನ್ವಯ 24 ಗಂಟೆಗಳ ಅವಧಿಯಲ್ಲಿ ಎರಡು ಬಾರಿ ತಪಾಸಣೆ ಮಾಡಿಸಿಕೊಳ್ಳಬೇಕಾಗುತ್ತದೆ’ ಎಂದು ಹೆಸರು ಬಹಿರಂಗಪಡಿಸದ ಫ್ರ್ಯಾಂಚೈಸ್‌ವೊಂದರ ಅಧಿಕಾರಿಯೊಬ್ಬರು ತಿಳಿಸಿದರು.

ಎರಡು ಪರೀಕ್ಷೆಗಳು ಕಡ್ಡಾಯವಾಗಿದ್ದು, ಯುಎಇಗೆ ತೆರಳುವ ಮುನ್ನ ಒಟ್ಟು ನಾಲ್ಕು ಬಾರಿ ತಪಾಸಣೆ ಮಾಡಿಸಿಕೊಳ್ಳಬೇಕಾಗುತ್ತದೆ’ ಎಂದು ಅವರು ನುಡಿದರು.

‘ಜೀವ ಸುರಕ್ಷಾ ವಾತಾವರಣದಲ್ಲಿ ಉಳಿಯಬೇಕೆಂಬ ಷರತ್ತಿನ ಮೇಲೆ ಆಟಗಾರರು ಹಾಗೂ ನೆರವು ಸಿಬ್ಬಂದಿಗೆ ಅವರ ಕುಟುಂಬ ಸದಸ್ಯರನ್ನು ಕರೆದೊಯ್ಯಲು ಅವಕಾಶ ನೀಡಲಾಗಿದೆ. ಅದಾಗ್ಯೂ ಕಟ್ಟುನಿಟ್ಟಿನ ಕ್ವಾರಂಟೈನ್‌ ನಿಯಮಗಳಿಂದಾಗಿ ಆಟಗಾರರು ಈ ಕುರಿತು ಹೆಚ್ಚು ಆಸಕ್ತಿ ತೋರುತ್ತಿಲ್ಲ ಎನ್ನಲಾಗಿದೆ.

‘ನನಗೆ ಐದು ವರ್ಷದ ಮಗುವಿದೆ. ಇಂತಹ ಬಿಕ್ಕಟ್ಟಿನ ಸ್ಥಿತಿಯಲ್ಲಿ ಕುಟುಂಬವನ್ನು ಜೊತೆಗೆ ಕರೆದೊಯ್ಯುವ ಅಪಾಯವನ್ನು ಮೈಮೇಲೆಳೆದುಕೊಳ್ಳುವುದಿಲ್ಲ. ಆರೋಗ್ಯಕ್ಕೆ ಮೊದಲ ಆದ್ಯತೆ’ ಎಂದು ಆಟಗಾರರೊಬ್ಬರು ತಿಳಿಸಿದ್ದಾರೆ.

ವಸತಿಗೆ ಸಂಬಂಧಿಸಿದಂತೆ ಒಂದು ಫ್ರ್ಯಾಂಚೈಸ್‌, ರೆಸಾರ್ಟ್‌ವೊಂದನ್ನು ಕಾಯ್ದಿರಿಸುವ ಗುರಿ ಹೊಂದಿದೆ. ಮತ್ತೊಂದು ಫ್ರ್ಯಾಂಚೈಸ್‌, ಅಬುಧಾಬಿಯಲ್ಲಿ ವಿಸ್ತಾರವುಳ್ಳ ಪ್ರದೇಶವನ್ನು ಬಾಡಿಗೆಯಾಗಿ ತೆಗೆದುಕೊಂಡು ತನ್ನ ಎಲ್ಲ ಸಿಬ್ಬಂದಿಯನ್ನು ಅಲ್ಲಿರಿಸಬಹುದು. ಪ್ರತ್ಯೇಕ ಭದ್ರತಾ ಸಿಬ್ಬಂದಿ ಹಾಗೂ ಬಾಣಸಿಗರನ್ನು ಇವರು ನೇಮಿಸಿಕೊಳ್ಳಬಹುದು.

ಪ್ರತಿ ತಂಡದಲ್ಲಿ 24 ಆಟಗಾರರಿಗೆ ಮಾತ್ರ ಅವಕಾಶ ನೀಡಿರುವ ಬಿಸಿಸಿಐ, ನೆರವು ಸಿಬ್ಬಂದಿಯನ್ನು ಹೊಂದುವುದರ ಮೇಲೆ ಮಿತಿ ಹೇರಿಲ್ಲ.

ಏಜನ್ಸಿಸ್

LEAVE A REPLY

Please enter your comment!
Please enter your name here