ಅನ್‌ಅಕಾಡೆಮಿ ಶೈಕ್ಷಣಿಕ ತಂತ್ರಜ್ಞಾನ ಕಂಪೆನಿಯು ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ ಪ್ರಶಸ್ತಿ ಪ್ರಾಯೋಜಕತ್ವ ನೀಡಲು ಆಸಕ್ತಿ ತೋರಿದೆ.
ಚೀನಾ ಮೂಲದ ವಿವೊ ಕಂಪೆನಿಯು ಈ ವರ್ಷದ ಐಪಿಎಲ್ ಟೂರ್ನಿಗೆ ಪ್ರಾಯೋಜಕತ್ವ ನೀಡುತ್ತಿಲ್ಲ. ಆದ್ದರಿಂದ ಹೊಸ ಪ್ರಾಯೋಜಕರನ್ನು ಬಿಸಿಸಿಐ ಆಹ್ವಾನಿಸಿದೆ.
‘ಅನ್‌ಅಕಾಡೆಮಿಯು ಪ್ರಾಯೋಜಕತ್ವ ನೀಡಲು ಆಸಕ್ತಿ ತೋರಿಸುತ್ತಿದೆ. ಬಿಡ್ ಪ್ರಕ್ರಿಯೆಗೆ ಸಂಬಂಧಿಸಿದೆ ಕಾಗದಪತ್ರಗಳನ್ನು ತೆಗೆದುಕೊಂಡಿದೆ. ಶೀಘ್ರದಲ್ಲಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಈಗಾಗಲೇ ಪತಂಜಲಿ ಸಂಸ್ಥೆಯೂ ಅರ್ಜಿ ಸಲ್ಲಿಸಿದೆ. ಒಂದೊಮ್ಮೆ ಅನ್ ಅಕಾಡೆಮಿಯೂ ಅರ್ಜಿ ಹಾಕಿದರೆ ಇವೆರಡೂ ಸಂಸ್ಥೆಗಳಿಗೆ ಪೈಪೋಟಿ ಏರ್ಪಡಲಿದೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಅನ್‌ಅಕಾಡೆಮಿಯು ಶೇ 100ರಷ್ಟು ಭಾರತೀಯ ಮೂಲದ್ದಾಗಿದೆ. ಇಲ್ಲಿಯ ಕೆಲವು ಶೈಕ್ಷಣಿಕ ತಂತ್ರಜ್ಞಾನ ಸಂಸ್ಥೆಗಳಲ್ಲಿ ಚೀನಾ ಮತ್ತಿತರ ವಿದೇಶಿ ಪಾಲುದಾರಿಕೆ ಇದೆ’ ಎಂದು ತಿಳಿಸಿದರು.
ವಿವೊ ಕಂಪೆನಿಯು ಪ್ರತಿವರ್ಷ ₹ 440 ಕೋಟಿಯನ್ನು ಬಿಸಿಸಿಐಗೆ ನೀಡುತ್ತಿತ್ತು. ಸದ್ಯ ಹೊಸ ಪ್ರಾಯೋಜಕತ್ವದಿಂದ ₹ 300-350 ಕೋಟಿಯವರೆಗೆ ಸಿಗುವ ನಿರೀಕ್ಷೆಯಲ್ಲಿ ಬಿಸಿಸಿಐ ಇದೆ.
‘ಐಪಿಎಲ್‌ನ ಪ್ರಾಯೋಜಕರ ಗುಂಪಿನಲ್ಲಿ ಅನ್‌ಅಕಾಡೆಮಿ ಈಗಾಗಲೇ ಇದೆ. ಪೇಟಿಎಂ ಮತ್ತು ಡ್ರೀಮ್ ಇಲೆವನ್ ಕಂಪೆನಿಗಳೊಂದಿಗೆ ಅದು ಕೂಡ ಸಹಪ್ರಾಯೋಕತ್ವ ನೀಡಿದೆ. 2020 ರಿಂದ 2023ರವರೆಗೆ ಅದರ ಒಪ್ಪಂದವಿದೆ. ಆದರೆ ಈ ಕಂಪೆನಿಗಳು ಸೆಂಟ್ರಲ್ ವಿಭಾಗದಲ್ಲಿವೆ. ಈ ಸಂಸ್ಥೆಗಳಿಗೆ ಆಟಗಾರರ ಪೋಷಾಕಿನ ಮೇಲೆ ಪ್ರಚಾರಕ್ಕಾಗಿ ಅವಕಾಶ ಇರುವುದಿಲ್ಲ. ಪಂದ್ಯದ ನಂತರ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲ ಬಳಕೆಯಾಗುವ ವೇದಿಕೆಯ ಹಿಂಬದಿಯ ಫಲಕ, ಬೌಂಡರಿ ಹಗ್ಗದ ಸುತ್ತ, ಡಗ್‌ಔಟ್ ಗಳಲ್ಲಿ ತಮ್ಮ ಬ್ರ್ಯಾಂಡ್ ಪ್ರಚಾರ ಮಾಡಿಕೊಳ್ಳಲು ಅವಕಾಶ ಇರುತ್ತದೆ’ ‘ ಎಂದು ಮೂಲಗಳು ಸ್ಪಷ್ಟಪಡಿಸಿವೆ.