ಐಪಿಎಲ್ 2020: ಮುಂಬೈ ವಿರುದ್ಧ ಕಣಕ್ಕಿಳಿಯಲಿದ್ದಾರಾ ಭುವನೇಶ್ವರ್ ಕುಮಾರ್?

0

ಮುಂಬೈ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲು ಸನ್‌ರೈಸರ್ಸ್ ಹೈದರಾವಾದ್ ತಂಡ ಸಿದ್ಧವಾಗಿದೆ. ಟೂರ್ನಿಯಲ್ಲಿ ತೀಕ್ಷ್ಣ ಬೌಲಿಂಗ್ ದಾಳಿಯ ಮೂಲಕ ಮಿಂಚಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ ಬಿಗ್ ಹಿಟ್ಟರ್‌ಗಳನ್ನು ಹೊಂದಿರುವ ಮುಂಬೈ ತಂಡಕ್ಕೆ ಯಾವ ರೀತಿ ಸವಾಲೊಡ್ಡಲಿದೆ ಎಂಬುದು ಕುತೂಹಲಕಾರಿ ಸಂಗತಿಯಾಗಿದೆ. ಆದರೆ ಈ ಪಂದ್ಯಕ್ಕೆ ಎಸ್‌ಆರ್‌ಹೆಚ್ ತಂಡದ ಪ್ರಮುಖ ಬೌಲಿಂಗ್ ಅಸ್ತ್ರ ಭುವನೇಶ್ವರ್ ಕುಮಾರ್ ಲಭ್ಯರಾಗಲಿದ್ದಾರೆಯೇ ಎಂಬುದು ಪ್ರಶ್ನೆಯಾಗಿದೆ.

ಚೆನ್ನಯ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ನಡೆಸುತ್ತಿದ್ದ ವೇಳೆ ಭುವನೇಶ್ವರ್ ಕುಮಾರ್ ಎಡಗಾಲಿನ ಸ್ನಾಯುಸೆಳೆತಕ್ಕೆ ಒಳಗಾದರು. ಒಂದೆರಡು ಬಾರಿ ಬೌಲಿಂಗ್ ಮುಂದುವರಿಸುವ ಪ್ರಯತ್ನಿಸಿದರಾದರೂ ಬಳಿಕ ಸಾಧ್ಯವಾಗದೆ ಪಂದ್ಯದಿಂದ ಹೊರನಡೆದಿದ್ದರು. ತಮ್ಮ ಸ್ಪೆಲ್ ಪೂರ್ಣಗೊಳಿಸಲೂ ಅವರಿಗೆ ಸಾಧ್ಯವಾಗಿರಲಿಲ್ಲ. ಉತ್ತಮ ಪ್ರದರ್ಶನ ನೀಡಿ ಮಿಂಚಿದ್ದ ಭುವಿ ಇಂದಿನ ಪಂದ್ಯದಲ್ಲಿ ಆಡುವ ಬಗ್ಗೆ ತಂಡದಿಂದ ಈವರೆಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಮುಂದಿನ ಪಂದ್ಯಕ್ಕೆ ಭುವನೇಶ್ವರ್ ಕುಮಾರ್ ಲಭ್ಯತೆಯ ಬಗ್ಗೆ ತಂಡದ ನಾಯಕ ಡೇವಿಡ್ ವಾರ್ನರ್ ಮಾತನಾಡಿದ್ದು ಸದ್ಯ ಅವರ ಕಂಡಿಷನ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಹೇಳಿದ್ದರು. ತಂಡದ ಫಿಸಿಯೋ ಅವರೇ ಈ ಬಗ್ಗೆ ಮಾಹಿತಿಯನ್ನು ನೀಡಲಿದ್ದಾರೆ ಎಂದಷ್ಟೇ ಡೇವಿಡ್ ವಾರ್ನರ್ ತಮ್ಮ ಪ್ರತಿಕ್ರಿಯೆ ನೀಡಿದ್ದರು.

ಚುಟುಕು ಕ್ರಿಕೆಟ್‌ನಲ್ಲಿ ಮಿಂಚಿ ತಂಡಕ್ಕೆ ಸಹಕಾರಿಯಾಗುವ ಭುವಿ ಇಂದಿನ ಪಂದ್ಯದಲ್ಲಿ ಲಭ್ಯರಾಗದೇ ಇದ್ದರೆ ಸನ್‌ರೈಸರ್ಸ್ ಹೈದರಾಬಾದ್ ಪಾಲಿಗೆ ಹಿನ್ನಡೆಯಂತೂ ಆಗಲಿದೆ. ಭುವಿ ಸ್ಥಾನಕ್ಕೆ ಇನ್ನೊರ್ವ ವೇಗಿ ಅವಕಾಶವನ್ನು ಪಡೆಯಲಿದ್ದು ಸಿದ್ಧಾರ್ಥ್ ಕೌಲ್ ಈ ಅವಕಾಶ ಗಿಟ್ಟಿಸಿಕೊಳ್ಳುವುದು ಬಹುತೇಕ ಖಚಿತ.

ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ರಶೀದ್ ಖಾನ್ ಸ್ಪಿನ್ ದಾಳಿಯ ಮೂಲಕ ಮಿಂಚುವಲ್ಲಿ ಯಶಸ್ವಿಯಾಗಿದ್ದರೆ, ತೀಕ್ಷ್ಣ ಯಾರ್ಕರ್‌ಗಳ ಮೂಲಕ ಸದ್ದುಮಾಡಿರುವ ಟಿ. ನಟರಾಜನ್ ಪ್ರದರ್ಶನ ಕೂಡ ಅದ್ಭುತವಾಗಿದೆ.

LEAVE A REPLY

Please enter your comment!
Please enter your name here