ಬೆಳ್ಳಂಬೆಳಗ್ಗೆ ಜಮೀನಿನ ಕೆಲಸಕ್ಕೆಂದು ಬಂದ ಜನರಿಗೆ ಯಾವುದೋ ನರಳಾಟದ ವಿಚಿತ್ರ ಶಬ್ದವೊಂದು ಕೇಳಿಸುತ್ತಿತ್ತು. ಶಬ್ದ ಬರುತ್ತಿರುವ ದಿಕ್ಕಿನತ್ತ ಹೋಗಿ ನೋಡಿದ್ರೆ ಕರಡಿಯೊಂದು ಬೇಟೆಗಾರರ ಉರುಳಿಗೆ ಸಿಕ್ಕಿ ಹಳ್ಳದಲ್ಲಿ ಬಿದ್ದು ಒದ್ದಾಡುತ್ತಿರುವುದು ಕಂಡಿದೆ.
ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ನಂಜಾಪುರ-ಕುರುಬಹಳ್ಳಿದೊಡ್ಡಿ ಮಧ್ಯೆ ಹಳ್ಳದಲ್ಲಿ ಮಂಗಳವಾರ ಬೆಳಗ್ಗೆ ಉರುಳಿಗೆ ಸಿಲುಕಿದ್ದ ಸುಮಾರು 8 ವರ್ಷದ ಗಂಡು ಕರಡಿ ರಕ್ಷಣೆಗಾಗಿ ಚೀರಾಡುತ್ತಿತ್ತು. ಇದನ್ನು ಕಂಡ ರೈತರು ಮಮ್ಮಲ ಮರುಗಿದರು.
ಚನ್ನಪಟ್ಟಣ ಅರಣ್ಯ ವಲಯದ ತೆಂಗಿನಕಲ್ಲು ಅರಣ್ಯ ವ್ಯಾಪ್ತಿಯ ಬರುವ ನಂಜಾಪುರ- ಕುರುಬಳ್ಳಿದೊಡ್ಡಿ- ಕಾಡನಕುಪ್ಪೆ- ಹೊಸದೊಡ್ಡಿ ಗ್ರಾಮಗಳ ಭಾಗದಲ್ಲಿರುವ ಬೆಟ್ಟಗುಡ್ಡಗಳಲ್ಲಿ ಕರಡಿಗಳು ವಾಸವಾಗಿವೆ. ಆಹಾರ ಅರಸಿ ಕರಡಿಗಳು ಸುತ್ತಮುತ್ತಲ ಪ್ರದೇಶದಲ್ಲಿ ರಾತ್ರಿ ವೇಳೆ ಸಂಚರಿಸುತ್ತವೆ. ತೆಂಗಿನಕಲ್ಲು
ಅರಣ್ಯ ಪ್ರದೇಶದಲ್ಲಿ ಕಾಡುಪ್ರಾಣಿ ಬೇಟೆಗೆ ಕಿಡಿಗೇಡಿಗಳು ಇಟ್ಟಿದ್ದ ಉರುಳಿಗೆ ಕರಡಿ ಸಿಲುಕಿದೆ. ಕರಡಿ ದಷ್ಟಪುಷ್ಟವಾಗಿದ್ದ ಕಾರಣ ಎಳೆದಾಡಿದಾಗ ಉರುಳಿಗೆ ಕಟ್ಟಿದ್ದ ಗೂಟ ಕಿತ್ತುಬಂದಿದೆ. ಗಾಬರಿಯಿಂದ ಬರುತ್ತಿದ್ದಾಗ ಹಳ್ಳದಲ್ಲಿದ್ದ ಮರದ ಬುಡಕ್ಕೆ ಉರುಳು ಸಿಕ್ಕಿಹಾಕಿಕೊಂಡ ಕಾರಣ ಕರಡಿ ಅಲ್ಲಿಂದ ಹೊರಬರಲಾಗದೆ ಸಿಕ್ಕಿ ಹಾಕಿಕೊಂಡಿತ್ತು.
ಕರಡಿ ಚೀರಾಟ ಕಂಡ ರೈತರು ಕೂಡಲೇ ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳು ಬನ್ನೇರುಘಟ್ಟದಿಂದ ವೈದ್ಯರನ್ನು ಕರೆಸಿ, ಕರಡಿಗೆ ಅರಿವಳಿಕೆ ಮದ್ದು ನೀಡಿ ಉರುಳಿನಿಂದ ರಕ್ಷಿಸಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟುಬಂದಿದ್ದಾರೆ.
ಕರಡಿಯ ರಕ್ಷಣಾ ಕಾರ್ಯದಲ್ಲಿ ಡಿಸಿಎಫ್ ಸದಾಶಿವ ಎನ್. ಹೆಗಡೆ, ಎಸಿಎಫ್ ಎಂ. ರಾಮಕೃಷ್ಣಪ್ಪ, ವಲಯ ಅರಣ್ಯಾಧಿಕಾರಿ ಮಹ್ಮದ್ ಮನ್ಸೂರ್, ಬನ್ನೇರುಘಟ್ಟ ಪಶುವೈದ್ಯ ಡಾ. ಉಮಾಶಂಕರ್, ಉಪ ವಲಯ ಅರಣ್ಯಾಧಿಕಾರಿ ಎಂ. ಮಧುಕುಮಾರ್, ಅರಣ್ಯ ರಕ್ಷಕರಾದ ವಿ. ವೆಂಕಟಸ್ವಾಮಿ, ದಿಲೀಪ್, ಕೆ. ಕುಮಾರ್ ಇದ್ದರು.