ಕರೊನಾ ಭೀತಿಯಲ್ಲಿ ಸ್ಯಾನಿಟೈಸರ್‌ ಮೊರೆ ಹೋಗಿರುವಿರಾ? ಹಾಗಿದ್ದರೆ ಇದನ್ನೊಮ್ಮೆ ಓದಿಬಿಡಿ.

0

ಇದೀಗ ಎಲ್ಲೆಲ್ಲೂ ಕರೊನಾ ಭೀತಿ. ಕರೊನಾ ವೈರಸ್‌ ಶುರುವಾದ ದಿನದಿಂದಲೂ ಕೇಳಿಬರುತ್ತಿರುವ ಇನ್ನೊಂದು ಹೆಸರು ಸ್ಯಾನಿಟೈಸರ್‌.

ಸ್ಯಾನಿಟೈಸರ್‌ಗೆ ಡಿಮಾಂಡ್‌ ಜಾಸ್ತಿಯಾಗುತ್ತಿದ್ದಂತೆಯೇ ಹಲವು ಕಂಪೆನಿಗಳು ತಮ್ಮ ವಸ್ತುಗಳನ್ನು ತಯಾರು ಮಾಡುವುದನ್ನು ನಿಲ್ಲಿಸಿ ದುಡ್ಡಿನ ಆಸೆಗೆ ಬಿದ್ದು ಸ್ಯಾನಿಟೈಸರ್‌ ತಯಾರಿಕೆಯಲ್ಲಿ ತೊಡಗಿರುವುದು ಹೊಸ ವಿಷಯವೇನಲ್ಲ. ಈ ಬಗ್ಗೆ ಇದಾಗಲೇ ಸಾಕಷ್ಟು ಬಾರಿ ಎಚ್ಚರಿಕೆಯನ್ನೂ ನೀಡಲಾಗಿದೆ.

ಸ್ಯಾನಿಟೈಸರ್‌ ಎಲ್ಲರಿಗೂ ಆಗಿಬರುವುದಿಲ್ಲ. ಚರ್ಮದ ಸಮಸ್ಯೆ ಇರುವವರು ಇದನ್ನು ಅತಿಯಾಗಿ ಬಳಸುವುದರಿಂದ ಮಾರಣಾಂತಿಕ ಕಾಯಿಲೆಗಳು ಬರುವುದು ಎಂದು ಇದಾಗಲೇ ಕೆಲವು ತಜ್ಞರು ಹೇಳಿದ್ದರೂ, ಇದನ್ನು ಹಚ್ಚಿಕೊಂಡು ಬಿಟ್ಟರೆ ಕರೊನಾ ಬರುವುದೇ ಇಲ್ಲವೆನ್ನುವಂತೆ ಹಲವರು ಇದರ ದಾಸರಾಗಿ ಬಿಟ್ಟಿದ್ದಾರೆ. ಹೋದಲ್ಲಿ, ಬಂದಲ್ಲಿ ಸ್ಯಾನಿಟೈಸರ್‌ ಹಿಡಿದುಕೊಂಡೇ ಇರುವುದು ರೂಢಿಯಾಗಿಬಿಟ್ಟಿದೆ.

ಹೀಗೆ ಸ್ಯಾನಿಟೈಸರ್‌ ದಾಸರಾಗಿರುವವರಿಗೆ ಇನ್ನೊಂದು ಅತ್ಯಂತ ಆಘಾತಕಾರಿಯಾಗುವಂಥ ಅಧ್ಯಯನ ವರದಿಯೊಂದನ್ನು ದೇಶದ ಅತ್ಯಂತ ಹಳೆಯ ಗ್ರಾಹಕ ಸಂಸ್ಥೆ – ಕನ್ಸ್ಯೂಮರ್ ಗೈಡೆನ್ಸ್ ಸೊಸೈಟಿ ಆಫ್ ಇಂಡಿಯಾ (ಸಿಜಿಎಸ್‌ಐ) ಬಯಲು ಮಾಡಿದೆ.

ಅದೇನೆಂದರೆ ವಿಜ್ಞಾನಿಗಳು ಪರೀಕ್ಷಿಸಿದ 122 ಮಾದರಿಗಳಲ್ಲಿ 5 ವಿಷಕಾರಿ ಮೆಥನಾಲ್ ಅನ್ನು ಹೊಂದಿರುವುದು ಬೆಳಕಿಗೆ ಬಂದಿದೆ. ಇದು ಎಷ್ಟು ಅಪಾಯಕಾರಿ ಎಂದರೆ ಅತಿಯಾಗಿ ಇದರ ಬಳಕೆ ಮಾಡಿದರೆ ಭವಿಷ್ಯದಲ್ಲಿ ಶಾಶ್ವತವಾಗಿ ಕುರುಡುತನದಂತಹ ಗಂಭೀರ ಅಡ್ಡಪರಿಣಾಮಗಳನ್ನು ಉಂಟುಮಾಡುವ ಬಗ್ಗೆ ಅಧ್ಯಯನ ತಿಳಿಸಿದೆ.

ಮಹಾರಾಷ್ಟ್ರದ ಮಾರುಕಟ್ಟೆಯಲ್ಲಿ ಲಭ್ಯವಿರುವ ಹ್ಯಾಂಡ್ ಸ್ಯಾನಿಟೈಸರ್‌ಗಳನ್ನು ಮಾತ್ರ ಅಧ್ಯಯನಕ್ಕೆ ಬಳಸಿಕೊಂಡಿದ್ದ ತಜ್ಞರು ಅವುಗಳ ಭಯಾನಕತೆಯನ್ನು ಬಿಚ್ಚಿಟ್ಟಿದ್ದಾರೆ. ಹಲವಾರು ಕಂಪೆನಿಗಳು ಸ್ಯಾನಿಟೈಸರ್‌ ಹೆಸರಿನಲ್ಲಿ ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಇಂಥ ಕುಕೃತ್ಯಕ್ಕೆ ಇಳಿದಿರುವುದೂ ಬೆಳಕಿಗೆ ಬಂದಿದೆ. ರಾಷ್ಟ್ರೀಯ ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿ 120ಕ್ಕೂ ಹೆಚ್ಚು ಹ್ಯಾಂಡ್ ಸ್ಯಾನಿಟೈಸರ್ ಮಾದರಿಗಳ ಮೇಲೆ ‘ಗ್ಯಾಸ್ ಕ್ರೊಮ್ಯಾಟೋಗ್ರಫಿ’ ಪರೀಕ್ಷೆಯನ್ನು ನಡೆಸಲಾಗಿದ್ದು, ಇವುಗಳಲ್ಲಿ ಕಲಬೆರಕೆಗಳೇ ಹೆಚ್ಚಿಗೆ ಇರುವುದು, ಇದರಿಂದ ಬಳಕೆದಾರರ ಜೀವಕ್ಕೆ ಅಪಾಯವನ್ನುಂಟು ಮಾಡುತ್ತಿರುವುದು ತಿಳಿದುಬಂದಿದೆ.

ಇದರಲ್ಲಿ ಅಡಕವಾಗಿರುವ ಮೆಥನಾಲ್ ದೃಷ್ಟಿ, ಆರೋಗ್ಯ, ಜೀವನಕ್ಕೆ ಹೇಗೆ ಅಪಾಯವನ್ನುಂಟು ಮಾಡುತ್ತದೆ ಎಂಬುದನ್ನು ವಿವರಿಸಲಾಗಿದೆ. ಇದನ್ನು ಚರ್ಮ ಹೀರಿಕೊಳ್ಳುತ್ತದೆ. ನೀರಿನಿಂದ ತೊಳೆದರೂ ಇದು ಹೋಗುವುದಿಲ್ಲ. ನಿರಂತರವಾಗಿ ಇದನ್ನು ಬಳಿಸಿದರೆ ದೃಷ್ಟಿಹೋಗುವ ಸಾಧ್ಯತೆ ಇದೆ. ಒಂದು ವೇಳೆ ಇದೇ ಕೈಯಿಂದ ಆಹಾರ ಸೇವನೆ ಮಾಡಿದರೆ, ವಿಷವು ದೇಹ ಸೇರಿಕೊಂಡು, ತಲೆನೋವು, ಅರೆನಿದ್ರಾವಸ್ಥೆ, ವಾಕರಿಕೆ, ವಾಂತಿ, ಮಸುಕಾದ ದೃಷ್ಟಿ, ಕುರುಡುತನ, ಕೋಮಾ ಮತ್ತು ಸಾವುಗಳನ್ನು ತರಬಹುದು ಎಂದು ಅಧ್ಯಯನ ಹೇಳಿದೆ.

ಯಾವುದು ನಕಲಿ, ಯಾವುದು ಅಸಲಿ ಸ್ಯಾನಿಟೈಸರ್‌ ಎಂದು ತಿಳಿಯುವುದು ಕಷ್ಟ. ಕೆಲವು ಪ್ರತಿಷ್ಠಿತ ಸ್ಯಾನಿಟೈಸರ್‌ ಸಂಸ್ಥೆಗಳೂ ನಕಲಿತನಕ್ಕೆ ಇಳಿದಿರುವ ಕಾರಣ, ಸೋಪ್ ಮತ್ತು ನೀರಿನಿಂದ ನಮ್ಮ ಕೈಗಳನ್ನು ತೊಳೆದು ಶುಚಿಗೊಳಿಸಿ ಎಂದು ತಜ್ಞರು ಹೇಳಿದ್ದಾರೆ.

LEAVE A REPLY

Please enter your comment!
Please enter your name here