ಕಲಬುರಗಿಯಲ್ಲಿ ಗಾಂಜಾ ಪತ್ತೆ; ಪೊಲೀಸ್ ಸಿಬ್ಬಂದಿ ಅಮಾನತು

0

ಬೆಂಗಳೂರು ಪೊಲೀಸರು ನಡೆದ ಕಾರ್ಯಾಚರಣೆಯಲ್ಲಿ ಕಲಬುರಗಿಯಲ್ಲಿ 1,352 ಕೆ. ಜಿ. ಗಾಂಜಾವನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

ಕಲಬುರಗಿಯ ಲಕ್ಷಣ್ ನಾಯಕ್ ತಾಂಡಾದ ಕೋಳಿ ಶೆಡ್‌ನಲ್ಲಿ ಸಂಗ್ರಹಿಸಲಾಗಿದ್ದ ಗಾಂಜಾವನ್ನು ಬೆಂಗಳೂರಿನ ಶೇಷಾದ್ರಿಪುರಂ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದರು. ಕಲಗಿ ಪೊಲೀಸ್ ಠಾಣೆಯ 5 ಸಿಬ್ಭಂದಿಗಳನ್ನು ಅಮಾನತುಗೊಳಿಸಲಾಗಿದೆ.

ಕಲಬುರಗಿ ಎಸ್‌ಪಿ ಈ ಕುರಿತು ಆದೇಶ ಹೊರಡಿಸಿದ್ದಾರೆ. ಇನ್ಸ್‌ಪೆಕ್ಟರ್ ಭೋಜರಾಜ್ ರಾಥೋಡ್, ಸಬ್ ಇನ್ಸ್‌ಪೆಕ್ಟರ್ ಬಸವರಾಜ್ ಚಿಟ್ಟಕೋಟೆ, ಸಹಾಯಕ ಸಬ್ ಇನ್ಸ್‌ಪೆಕ್ಟರ್ ನೀಲಕಂಠಪ್ಪ ಹೆಬ್ಬಾಳ್, ಗಸ್ತು ಕಾನ್ಸ್‌ಟೇಬಲ್‌ಗಳಾದ ಶರಣಪ್ಪ ಮತ್ತು ಅನಿಲ್ ಭಂಡಾರಿ ಅಮಾನತುಗೊಂಡವರು.

ಡಿವೈಎಸ್‌ಪಿ ವೆಂಕಣ್ಣ ಗೌಡ ಈ ಕುರಿತು ಮಾಹಿತಿ ನೀಡಿದ್ದಾರೆ. “ಲಕ್ಷಣ್ ನಾಯಕ್ ತಾಂಡಾ ಕಲಗಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುತ್ತದೆ. ಜಾಗರೂಕತೆಯ ಕೊರತೆ, ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ” ಎಂದು ಹೇಳಿದ್ದಾರೆ.

ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸರು ಗಾಯತ್ರಿನಗರದ ಆಟೋ ಚಾಲಕ ಜ್ಞಾನಶೇಖರ್ ಬಂಧಿಸಿದ್ದರು. ಬಂಧಿತನ ವಿಚಾರಣೆ ವೇಳೆ ಕಲಬುರಗಿಯಲ್ಲಿ ಗಾಂಜಾ ಸಂಗ್ರಹ ಮಾಡಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ದಾಳಿ ನಡೆಸಿದಾಗ 1,352 ಕೆಜಿ ಗಾಂಜಾ ಪತ್ತೆಯಾಗಿತ್ತು.

ಕೋಳಿ ಶೆಡ್‌ನಲ್ಲಿ ಪತ್ತೆಯಾದ ಗಾಂಜಾದ ಮೌಲ್ಯ ಸುಮಾರು 6 ಕೋಟಿ ಎಂದು ಅಂದಾಜಿಸಲಾಗಿದೆ. ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದ ಸಂಗ್ರಹವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

LEAVE A REPLY

Please enter your comment!
Please enter your name here