ಕಾಡಾನೆ ಅಟ್ಟಲು ಅಟ್ಟಣಿಗೆ ಬದಲು ಕಾವಲು ಮನೆ.
ಕೊಡಗು (ಚೆಟ್ಟಳ್ಳಿ): ಹಗಲು ರಾತ್ರಿ ಎನ್ನದೆ ಎಡಬಿಡದೆ ಕಾಫಿ ತೋಟಗಳು ಜನವಸತಿ ಪ್ರದೇಶಗಳಿಗೆ ನುಸುಳುವ ಕಾಡಾನೆಗಳ ನಿಯಂತ್ರಣಕ್ಕೆ ಮರದ ಮೇಲೆ ಅಟ್ಟಣಿಗೆ ನಿರ್ಮಿಸಿ ಮಳೆ ಚಳಿಯಲ್ಲೂ ಕಾರ್ಯ ನಿರ್ವಹಿಸುತ್ತಿದ್ದ ಅರಣ್ಯ ಸಿಬ್ಬಂಧಿಗಳಿಗೆ ಇದೀಗ ಕಾಂಕ್ರಿಟ್ ಕಾವಲು ಮನೆಯನ್ನು ಚೆಟ್ಟಳ್ಳಿಯಲ್ಲಿ ನಿರ್ಮಾಣ ಮಾಡಲಾಗಿದೆ.ಆನೆ ಕಂದಕ,ಮುಳ್ಳಿನ ಬೇಲಿ,ತಂತಿಯಲ್ಲಿ ಬಾಟಲಿ ಕಟ್ಟಿ ಅದರ ಶಬ್ದ ಆಧರಿಸಿ ಕಾಡಾನೆಗಳನ್ನು ಓಡಿಸುತ್ತಿದ್ದ ಅರಣ್ಯ ಸಿಬ್ಬಂಧಿಗಳು ಇನ್ನು ನಿರ್ಭಯವಾಗಿ ಕಾವಲು ಮನೆಯಲ್ಲೇ ಇದ್ದು ಕಾಡಾನೆಗಳನ್ನು
ನಿಯಂತ್ರಿಸಬಹುದಾಗಿದೆ.ಮೀನುಕೊಲ್ಲಿಯಲ್ಲಿ ಅರಣ್ಯದಿಂದ ಕಾಫಿತೋಟಗಳಿಗೆ ನುಗ್ಗುವ ಕಾಡಾನೆಗಳನ್ನು ನಿಯಂತ್ರಿಸಲು ಅಟ್ಟಣಿಗೆಯಲ್ಲಿ ಇದ್ದುಕೊಂಡು ಪಿವಿಸಿ ಪೈಪಿನಿಂದ ತಯಾರಿಸಿದ ಕೃತಕ ಬಂದೂಕಿನಿಂದ ಹೊರ ಬರುವ ಶಬ್ದದಿಂದ ಕಾಡಾನೆಗಳನ್ನು ಅಟ್ಟುವ ಕೆಲಸ ಮಾಡಲಾಗುತ್ತಿತ್ತು.ಇದೀಗ ಕಂಡಕೆರೆಯಲ್ಲಿ ಕಾಡಾನೆ ಕಾವಲು ಮನೆ ಮತ್ತು ಕಳ್ಳಬೇಟೆ ಶಿಬಿರವನ್ನು ನಿರ್ಮಾಣ ಮಾಡಲಾಗಿದೆ.ಇದೀಗ ತಾನೇ ನಿರ್ಮಾಣ ಆಗಿರುವ ಈ ಕಾವಲು ಮನೆಗೆ ಇನ್ನು ವಿದ್ಯುತ್ ಸಂಪರ್ಕ ಇಲ್ಲದ ಕಾರಣ ರಾತ್ರಿ ಹೊತ್ತಿನಲ್ಲಿ ಮೊಂಬತ್ತಿಯಲ್ಲಿ ಕಾಲ ಕಳಿಬೇಕಾದ ಅನಿವಾರ್ಯತೆ ಇದೆ.
ಆನೆಗಳಿಗೂ ಅಚ್ಚರಿ ಮೂಡಿಸಿದೆ: ದಿನನಿತ್ಯ ಓಡಾಡುವ ದಾರಿಯಲ್ಲಿ ಏಕಾಏಕಿ ಕಟ್ಟಡಗಳು ತಲೆಎತ್ತಿರುವುದು ಕಾಡಾನೆಗಳಲ್ಲಿ ಅಚ್ಚರಿ ಮೂಡಿಸಿದೆ,ತಡ ರಾತ್ರಿಯಲ್ಲಿ ಈ ನೂತನ ಕಟ್ಟಡದ ಸುತ್ತಲೂ ಸುಳಿದಾಡುತ್ತಿದ್ದು ಕಾಡಾನೆಗಳಿಂದ ಕಾವಲು ಮನೆಗೆ ಅಪಾಯ ತಪ್ಪಿದ್ದಲ್ಲ.