ಕೊಡಗಿನಲ್ಲಿದ್ದಾರೆ ತೆರೆಮರೆಯಲ್ಲಿರುವ ಕಂಠಧಾನ ಕಲಾವಿದ
ಕೊಡಗು (ಸೋಮವಾರಪೇಟೆ:) ಸಮೀಪದ ತಾಕೇರಿ ಗ್ರಾಮದ ಯುವಪ್ರತಿಭೆಯೊಬ್ಬರು ಪೌರಾಣಿಕದಂತಹ ಕಿರುತೆರೆ ಧಾರಾವಾಹಿಗಳಲ್ಲಿ ಹಿಂದಿ ಪಾತ್ರಧಾರಿಗಳ ಪಾತ್ರಕ್ಕೆ ಕನ್ನಡಲ್ಲಿ ಹಿನ್ನೆಲೆ ಧ್ವನಿ ನೀಡುವ ಮೂಲಕ ಎಲೆ ಮರೆಯ ಕಾಯಿಯಾಗಿ ಮಿಂಚುತ್ತಿದ್ದಾರೆ.
ನಿಶ್ಚಿತ್ ತಾಕೇರಿ ಅವರೇ ಹಿನ್ನೆಲೆ ಧ್ವನಿ ನೀಡುವ ಮೂಲಕ ಕಿರುತೆರೆ, ಬೆಳ್ಳೆತೆರೆ ಹಾಗೂ ಕನ್ನಡಿಗರ ಮನಗೆದ್ದ ಯುವ ಪ್ರತಿಭೆ. ಇವರು ಜೀ ಕನ್ನಡಲ್ಲಿ ಸಂಜೆ 6 ರಿಂದ 7 ಗಂಟೆ ವರೆಗೆ ಪ್ರಸಾರವಾಗುತ್ತಿರುವ ಶ್ರೀಕೃಷ್ಣ ಧಾರಾವಾಹಿಯಲ್ಲಿ ಭದ್ರಾಕ್ಷಾ ಪಾತ್ರಕ್ಕೆ ಹಿನ್ನೆಲೆ ಧ್ವನಿ ನೀಡಿ ಯಶಸ್ವಿಯಾಗಿದ್ದಾರೆ.
ಕಲರ್ಸ್ ಕನ್ನಡದ ಚಕ್ರವರ್ತಿ ಅಶೋಕ ಧಾರಾವಾಹಿಯಲ್ಲೂ ರಾಧಾಗುಪ್ತ ಪಾತ್ರಕ್ಕೆ ಹಿನ್ನೆಲೆ ಧ್ವನಿ ನೀಡಿದ್ದಾರೆ. ಅಲ್ಲದೆ ಹಾಲಿವುಡ್ ಫಿಲಂ ಟರ್ಮಿನೆಟರ್ ಡಾರ್ಕ್ ಪೆಟ್ ಎಂಬ ಸಿನಿಮಾದ ನಟರೊಬ್ಬರಿಗೆ ಡಬ್ಬಿಂಗ್ ಮಾಡಿದ್ದಾರೆ.
ತಾಕೇರಿ ಗ್ರಾಮದ ಹೊಸೂರುಕಳ್ಳಿಯ ಲಕ್ಷ್ಮಯ್ಯ ಹಾಗೂ ಚಿನ್ನಮ್ಮ ದಂಪತಿಯ ಪುತ್ರ ನಿಶ್ಚಿತ್ ಸ್ಥಳೀಯ ಶಾಲೆಯಲ್ಲಿ ವ್ಯಾಸಂಗ ಮುಗಿಸಿ ಪಿ.ಯು.ಸಿಯನ್ನು ಸೋಮವಾರಪೇಟೆಯ ಸಂತ ಜೋಷೇಪರ ಕಾಲೇಜಿನಲ್ಲಿ ಮುಗಿಸಿ ಜೆ.ಎಸ್.ಎಸ್ ನಲ್ಲಿ ಪದವಿಯನ್ನು ಮುಗಿಸಿದರು.
ನಂತರ ಮೈಸೂರಿನಲ್ಲಿ ಮಂಡ್ಯ ರಮೇಶ್ ಅವರ ಗರಡಿಯಲ್ಲಿ ರಂಗಭೂಮಿ ಕಲಾವಿದರಾಗಿ ಹೊರ ಹೊಮ್ಮಿದರು.
ಕಿರುತೆರೆಯ ಮಂಗಳೂರು ಹುಡುಗಿ, ಹುಬ್ಬಳ್ಳಿ ಹುಡುಗ, ಸುವರ್ಣ ಚಲನಚಿತ್ರ ಸೇರಿದಂತೆ ಹಲವು ಸಿನಿಮಾಗಳಲ್ಲಿ ಸಹ ನಟರಾಗಿ ಪಾತ್ರ ನಿರ್ವಹಿಸಿದ್ದಾರೆ ನಿಶ್ಚಿತ್.
ಇವರು ಚಿಕ್ಕ ವಯಸ್ಸಿನಿಂದಲೇ ನಟನಾಗುವ ಕನಸು ಕಂಡು ಇದೀಗ ಯಶÀಸ್ಸಿನ ಹಾದಿಯತ್ತ ಸಾಗುತ್ತಿದ್ದಾರೆ. ಮತ್ತಷ್ಟು ಸಾಧನೆ ಮಾಡಬೇಕಾಗಿದೆ ಎಂದು ನಿಶ್ಚಿತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗುರಿ ಸಾಧನೆಗಾಗಿ ಶ್ರಮಿಸುವುದಾಗಿ ಹೇಳಿದ್ದಾರೆ.