ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಶಾಂತಪ್ಪ ಜಡಮ್ಮನವರ್ ಬಡ ಮಕ್ಕಳಿಗೆ ಪಾಠ ಹೇಳಿ ಕೊಡುತ್ತಾರೆ. ಕರ್ತವ್ಯಕ್ಕೆ ಹೋಗುವ ಮುನ್ನ 3 ರಿಂದ ಏಳನೇ ತರಗತಿ ಮಕ್ಕಳಿಗೆ ಗಣಿತ ಹಾಗೂ ಸಾಮಾನ್ಯ ಜ್ಞಾನದ ವಿಷಯಗಳನ್ನು ಹೇಳಿ ಕೊಡುತ್ತಿದ್ದಾರೆ.
ಬೆಂಗಳೂರಿನ ನಾಗರಬಾವಿ ವ್ಯಾಪ್ತಿಯ ವಿನಾಯಕ ನಗರದ 9ನೇ ಬ್ಲಾಕ್ ನಲ್ಲಿರುವ ಕೊಳಗೇರಿ ಪ್ರದೇಶದಲ್ಲಿ ಶಾಂತಪ್ಪ ಜಡಮ್ಮನವರ್ ಮಕ್ಕಳಿಗೆ ಪಾಠ ಹೇಳಿಕೊಡುತ್ತಾರೆ. ಈ ಪ್ರದೇಶದಲ್ಲಿ ಕಟ್ಟಡ ಕಾರ್ಮಿಕರ ಕುಟುಂಬಗಳು ಹೆಚ್ಚಾಗಿವೆ.
ಸುಮಾರು ಹದಿನೈದು ದಿನಗಳಿಂದ ಶಾಂತಪ್ಪ ಜಡಮ್ಮನವರ್ ಪಾಠ ಹೇಳಿಕೊಡುವ ಕಾಯಕದಲ್ಲಿ ತೊಡಗಿದ್ದಾರೆ. “ಪ್ರತಿ ದಿನ ಠಾಣೆಗೆ ಕರ್ತವ್ಯಕ್ಕೆ ಹೋಗುವ ಮುನ್ನ ಈ ಕೆಲಸ ಮುಗಿಸಿ ಹೋಗುತ್ತೇನೆ” ಎಂದು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹೇಳಿದ್ದಾರೆ.
“ನಾನು ಒಬ್ಬ ಬಳ್ಳಾರಿಯ ವಲಸೆ ಕಾರ್ಮಿಕರ ಮಗ. ನನಗೆ ಈ ಕಷ್ಟ ಗೊತ್ತಿದೆ. ಅದಕ್ಕಾಗಿ ಈ ಕಾರ್ಯದಲ್ಲಿ ತೊಡಗಿದ್ದೇನೆ” ಎಂದು ಶಾಂತಪ್ಪ ಜಡಮ್ಮನವರ್ ತಿಳಿಸಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಶಾಂತಪ್ಪ ಜಡಮ್ಮನವರ್ ಪಾಠ ಮಾಡುವ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ಬಗ್ಗೆ ಅವರು ಫೇಸ್ ಬುಕ್‌ನಲ್ಲಿಯೂ ಪೋಸ್ಟ್ ಹಾಕಿದ್ದಾರೆ.