ಕಾಳಧನದ ಮೂಲಕ್ಕೇ ಕೊಡಲಿ ಏಟು ಬಿದ್ದಾಗ ಇಂಥ ಪ್ರತಿಭಟನೆಗಳು ವ್ಯಕ್ತವಾಗುತ್ತವೆ ನೋಡಿ: ಪ್ರಧಾನಿ ವಾಗ್ದಾಳಿ

0

ಕೃಷಿ ಮಸೂದೆಗಳ ವಿರುದ್ಧ ದೇಶಾದ್ಯಂತ ನಿನ್ನೆ ಪ್ರತಿಭಟನೆ ನಡೆಸಿದ್ದ ವಿಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಇಂದು ತೀವ್ರ ವಾಗ್ದಾಳಿ ನಡೆಸಿದರು. ಕೃಷಿಕರಿಗೆ ಅವರ ಉತ್ಪನ್ನಗಳನ್ನು ಮಾರಾಟ ಮಾಡುವ ಸ್ವಾತಂತ್ರ್ಯ ಹಕ್ಕುಗಳನ್ನು ಕೊಡುವುದು ವಿಪಕ್ಷಗಳಿಗೆ ಬೇಕಾಗಿಲ್ಲ. ದೇಶಕ್ಕೆ ನೆರವಾಗುವ, ದೇಶದ ಜನರಿಗೆ ಒಳಿತಾಗುವ ವಿಚಾರದಲ್ಲೂ ಪಾಲಿಟಿಕ್ಸ್ ಮಾಡ್ತಿದ್ದಾರೆ. ಎಲ್ಲದರಲ್ಲೂ ಪಾಲಿಟಿಕ್ಸ್ ನೋಡುವುದು ಈ ಜನರ ಹ್ಯಾಬಿಟ್ ಆಗಿ ಬಿಟ್ಟಿದೆ ಎಂದು ಪ್ರಧಾನಿ ಮೋದಿ ಟೀಕಾ ಪ್ರಹಾರ ಮಾಡಿದರು.

ಅವರು ಇಂದು ಉತ್ತರಾಖಂಡದ ಆರು ಮೆಗಾ ಪ್ರಾಜೆಕ್ಟ್​ಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ಕೊಟ್ಟು ಮಾತನಾಡಿದರು. ಕೆಲವು ದಿನಗಳ ಹಿಂದೆ ಸಂಸತ್ತು ಹೊಸ ಕೃಷಿ ಕಾನೂನುಗಳನ್ನು ಜಾರಿಗೊಳಿಸಿದೆ. ಕೃಷಿಕರನ್ನು ಹಲವು ಗೊಂದಲಗಳಿಂದ ಮುಕ್ತರನ್ನಾಗಿಸುವ ದೃಷ್ಟಿಯಿಂದ ಇದನ್ನು ಜಾರಿಗೊಳಿಸಲಾಗಿದೆ. ಈಗ ರೈತರು ತಮ್ಮ ಕೃಷಿ ಉತ್ಪನ್ನವನ್ನು ಯಾರಿಗೆ ಬೇಕಾದರೂ, ದೇಶದಲ್ಲಿ ಎಲ್ಲೇ ಬೇಕಾದರೂ ಮಾರಾಟ ಮಾಡಬಹುದು. ರೈತರಿಗೆ ಈ ಹಕ್ಕನ್ನು ಕೊಟ್ಟರೆ ಈ ಜನ ಅದನ್ನು ವಿರೋಧಿಸಿ ಪ್ರತಿಭಟನೆ ಮಾಡ್ತಿದ್ದಾರೆ. ಅವರಿಗೆ ಕೃಷಿಕ ಸ್ವತಂತ್ರವಾಗಿ ಬದುಕುವುದು ಬೇಕಾಗಿಲ್ಲ. ಆತನ ಸ್ವಾತಂತ್ರ್ಯ, ಹಕ್ಕುಗಳನ್ನು ಕೊಡುವುದು ಬೇಕಾಗಿಲ್ಲ. ಮಧ್ಯವರ್ತಿಗಳನ್ನು ತಡೆದು ನೇರವಾಗಿ ರೈತರಿಗೆ ಅವರ ಉತ್ಪನ್ನಗಳ ಮಾರಾಟದ ಪರಮಾಧಿಕಾರ ಕೊಟ್ಟ ಕಾರಣ ಕಾಳಧನದ ಮೂಲಕ್ಕೇ ಕೊಡಲಿ ಏಟು ಬಿದ್ದಂತಾಗಿದೆ. ಹೀಗಾದಾಗ ಇಂಥ ಪ್ರತಿಭಟನೆಗಳು ವ್ಯಕ್ತವಾಗುತ್ತವೆ. ನಾಲ್ಕು ತಲೆಮಾರುಗಳಿಂದ ದೇಶವನ್ನಾಳಿದ ಪಕ್ಷದವರಿಗೆ ರಾಷ್ಟ್ರಹಿತದ ಯಾವ ಯೋಜನೆಯೂ ರುಚಿಸುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ದೇಶದ ಬಡವರನ್ನು ಬ್ಯಾಂಕಿಂಗ್ ನೊಂದಿಗೆ ಜೋಡಿಸುವುದಕ್ಕಾಗಿ ಜನಧನ ಯೋಜನೆ ಜಾರಿ ತಂದಾಗಲೂ ಇದೇ ಜನ ವಿರೋಧಿಸಿದ್ದರು. ತೆರಿಗೆ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಜಿಎಸ್​ಟಿ ಜಾರಿಗೆ ತಂದಾಗಲೂ ಇಂಥದ್ದೇ ಪ್ರತಿಭಟನೆ ವ್ಯಕ್ತವಾಗಿತ್ತು. ನಿವೃತ್ತ ಯೋಧರ ಒನ್​ ರಾಂಕ್​ ಒನ್ ಪೆನ್ಶನ್ ಯೋಜನೆಯ ವಿಚಾರದಲ್ಲೂ ಇದೇ ಆಯಿತು. ನಾಲ್ಕು ವರ್ಷಗಳ ಕೆಳಗೆ ನಮ್ಮ ಯೋಧರು ಸರ್ಜಿಕಲ್ ಸ್ಟ್ರೈಕ್ ಮಾಡಿ ಉಗ್ರ ನೆಲೆಗಳನ್ನು ನಾಶ ಮಾಡಿ ಬಂದರೆ, ಅದನ್ನು ಪ್ರಶಂಸಿಸುವುದನ್ನು ಬಿಟ್ಟು, ಅದಕ್ಕೆ ಸಾಕ್ಷ್ಯಗಳನ್ನು ಕೇಳತೊಡಗಿದ ಜನ ಇವರು. ಈ ವಿಪಕ್ಷ ಸದಸ್ಯರಿಗೆ ಪಾಲಿಟಿಕ್ಸ್ ಮಾಡೋದಕ್ಕೆ ಇರುವ ಒಂದೇ ಒಂದು ಮಾರ್ಗ ಇದು ಮಾತ್ರ ಎಂದು ಟೀಕಿಸಿದ್ರು. (ಏಜೆನ್ಸೀಸ್)

LEAVE A REPLY

Please enter your comment!
Please enter your name here