ಕೆಆರ್‌ಎಸ್ ಬಹುತೇಕ ಭರ್ತಿ; ಸಂಸದೆ ಸುಮಲತಾ ಭೇಟಿ

0

‘ಇದು ಬರೀ ನೀರಲ್ಲ, ನಮ್ಮ ಜಿಲ್ಲೆಯ ಜೀವಾಳ’ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ. ಬಹುತೇಕ ಭರ್ತಿಯಾಗಿರುವ ಕೆಆರ್‌ಎಸ್ ಜಲಾಶಯಕ್ಕೆ ಅವರು ಭೇಟಿ ನೀಡಿ, ಅಧಿಕಾರಿಗಳ ಜೊತೆ ಚರ್ಚಿಸಿದರು.

ಬುಧವಾರ ಮಂಡ್ಯ ಕ್ಷೇತ್ರದ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಶ್ರೀರಂಗಪಟ್ಟಣದಲ್ಲಿರುವ ಕೆಆರ್‌ಎಸ್ ಜಲಾಶಯಕ್ಕೆ ಭೇಟಿ ನೀಡಿದರು. “ಕನ್ನಂಬಾಡಿ ತುಂಬುವುದನ್ನು ನೋಡುವುದೇ ಒಂದು ಪುಣ್ಯದ ಅನುಭವ. ಇದು ಬರೀ ನೀರಲ್ಲ, ನಮ್ಮ ಜಿಲ್ಲೆಯ ಜೀವಾಳ” ಎಂದರು.

ಕೆಆರ್‌ಎಸ್‌ಗೆ ಭೇಟಿ ನೀಡಿದ ಚಿತ್ರಗಳನ್ನು ಅವರು ಫೇಸ್‌ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ಇನ್ನೇನು ಗರಿಷ್ಠ ಮಟ್ಟ ತಲುಪಲಿದ್ದು, ಇಂದು ನನ್ನ ಕ್ಷೇತ್ರದ ಹೆಮ್ಮೆಯ ಕೆಆರ್‌ಎಸ್ ಅಣೆಕಟ್ಟು ವೀಕ್ಷಿಸಿ, ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದೆ” ಎಂದು ಬರೆದಿದ್ದಾರೆ.

ಗರಿಷ್ಠ 124.80 ಅಡಿ ಎತ್ತರದ ಕೆಆರ್‌ಎಸ್ ಜಲಾಶಯದಲ್ಲಿ ಪ್ರಸ್ತುತ 121.95 ಅಡಿ ನೀರಿದೆ. 32,967 ಕ್ಯುಸೆಕ್ ಒಳ ಹರಿವು ಇದ್ದು, 3,617 ಕ್ಯುಸೆಕ್ ಹೊರ ಹರಿವು ದಾಖಲಾಗಿದೆ. ಈಗಾಗಲೇ ಕೆಲವು ಗೇಟ್‌ಗಳ ಮೂಲಕ ನದಿಗೆ ನೀರನ್ನು ಬಿಡಲಾಗುತ್ತಿದೆ.

ಕೆಲವು ದಿನಗಳಿಂದ ಕಾವೇರಿ ಕೊಳ್ಳದ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದ್ದು ಕೆಆರ್‌ಎಸ್ ಜಲಾಶಯ ಬಹುತೇಕ ಭರ್ತಿಯಾಗಿದೆ. ಮಂಡ್ಯ ಜಿಲ್ಲೆಯ ನೀರಾವರಿಗೆ ಕೆಆರ್‌ಎಸ್ ಜಲಾಶಯವನ್ನೇ ಅವಲಂಬಿಸಲಾಗಿದೆ.

ಬೆಂಗಳೂರು, ಮಂಡ್ಯ ಮತ್ತು ಮೈಸೂರಿಗೆ ಕುಡಿಯುವ ನೀರು ಪೂರೈಕೆ ಮಾಡಲು ಕೆಅರ್‌ಎಸ್ ಜಲಾಶಯವೇ ಮೂಲ ಆಧಾರವಾಗಿದೆ. ಪ್ರತಿಬಾರಿ ಜಲಾಶಯ ಭರ್ತಿಯಾದಾಗ ಮುಖ್ಯಮಂತ್ರಿಗಳು ಬಾಗಿನ ಅರ್ಪಿಸುವುದು ವಾಡಿಕೆಯಾಗಿದೆ.

LEAVE A REPLY

Please enter your comment!
Please enter your name here