ಕೆಎಸ್‌ಆರ್‌ಟಿಸಿ ಬಸ್‌ ಆಯ್ತು ಹಲವು ವಿಶೇಷತೆಗಳ ಮಹಿಳಾ ಶೌಚಗೃಹ- ದೇಶದಲ್ಲೇ ಪ್ರಥಮ

0

ಕೆಲ ವರ್ಷಗಳವರೆಗೆ ಒಂದು ಬಸ್‌ ಅತಿ ದೂರದವರೆಗೆ ಕ್ರಮಿಸಿದರೆ ಅದು ತನ್ನ ಕಾರ್ಯಕ್ಷಮತೆಯನ್ನು ಕಳೆದುಕೊಳ್ಳುತ್ತದೆ. ಆಗ ಅದನ್ನು ಗುಜರಿಗೆ ಹಾಕುವುದು ಮಾಮೂಲು.

ಅಂಥ ನಿರುಪಯುಕ್ತ ಎನ್ನುವ ಕೆ‌ಎಸ್‌ಆರ್‌ಟಿಸಿ‌ಯ ಬಸ್‌ ಅನ್ನು ಇದೀಗ ಬಳಕೆ ಮಾಡಿಕೊಂಡು ಸುಸಜ್ಜಿತ ಮಹಿಳಾ ಶೌಚಗೃಹವನ್ನು ನಿರ್ಮಾಣ ಮಾಡಲಾಗಿದೆ. ಇದನ್ನು ಬೆಂಗಳೂರಿನ ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ನಿರ್ಮಿಸಲಾಗಿದೆ.

ಇದನ್ನು ಇಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಲೋಕಾರ್ಪಣೆ ಮಾಡಿದರು. ಶೌಚ ಗೃಹವನ್ನು ನಿರ್ಮಾಣಕ್ಕೆ 12 ಲಕ್ಷ ರೂ.ವೆಚ್ಚವಾಗಿದೆ. ಮಹಿಳಾ ಸ್ವಾಸ್ಥ್ಯ ಸಮಾಜ ನಿಗಮದ ಕಾಳಜಿಯಾಗಿದೆ. ದೇಶದ ರಸ್ತೆ ಸಾರಿಗೆ ನಿಗಮಗಲ್ಲಿಯೇ ಪ್ರಪ್ರಥಮ ಬಾರಿಗೆ ಇಂತಹ ಸುಸಜ್ಜಿತ ಶೌಚಗೃಹವನ್ನು ನಿರುಪಯುಕ್ತ‌ ಬಸ್ಸಿನಲ್ಲಿ ‌ನಿರ್ಮಿಸಲಾಗಿದೆ. ಇದು ಕೆಎಸ್‌ಆರ್‌ಟಿಸಿಯ ಸ್ವಚ್ಛತೆ ಯತ್ತ ಮತ್ತೊಂದು‌ ಹೆಜ್ಜೆಯಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ‌ ಪ್ರಾಧಿಕಾರ ಈ ಶೌಚಗೃಹದ ವೆಚ್ಚವನ್ನು ಸಾಮಾಜಿಕ ಕಳಕಳಿ ( ಸಿಎಸ್‌ಆರ್ ) ಯೋಜನೆಯಡಿ ನೀಡಿದೆ ಎಂದು ಸವದಿ ಹೇಳಿದರು.

ಈ ಶೌಚಗೃಹವು ಹಲವು ವಿಶೇಷತೆಗಳಿಂದ ಕೂಡಿದೆ. ಇಲ್ಲಿ ಅಮ್ಮಂದಿರು ತಮ್ಮ ಮಕ್ಕಳಿಗೆ ಹಾಲುಣಿಸಲು ಸ್ಥಳಾವಕಾ ಕಲ್ಪಿಸಲಾಗಿದೆ. ಇದರ ಜತೆಗೆ ಸ್ಯಾನಿಟರಿ‌ ನ್ಯಾಪಕಿನ್ ವೆಂಡಿಂಗ್ ಯಂತ್ರ, ಮಗುವಿನ ಡೈಪರ್ ಬದಲಿಸುವ ಸ್ಥಳ, ಭಾರತೀಯ ಮತ್ತು ಪಾಶ್ಚಾತ್ಯ ಶೌಚಾಲಯಗಳು, ವಾಷ್ ಬೇಸಿನ್ ಗಳು, ‌ಸೆನ್ಸಾರ್ ದೀಪಗಳು, ಸಂಪೂರ್ಣ ಸೋಲಾರ್ ವಿದ್ಯುದ್ದೀಪಗಳನ್ನು ಅಳವಡಿಸಲಾಗಿದೆ.

ನಿಗಮವು ಹಲವು ಮಹಿಳಾ ಸ್ನೇಹಿ‌ ಉಪಕ್ರಮಗಳನ್ನು ಜಾರಿಗೆ ತಂದಿದೆ. ಬಸ್ ನಿಲ್ದಾಣ ಹಾಗೂ ಬಸ್ಸುಗಳನ್ನು ಮಹಿಳಾ ಸ್ನೇಹಿಯಾಗಿಸುವ ನಿಟ್ಟಿನಲ್ಲಿನ ನಮ್ಮ‌ ಪ್ರಯತ್ನವು ನಿರಂತರವಾಗಿ ಮುಂದುವರೆದಿದೆ ಎಂದು ಲಕ್ಷ್ಮಣ ಸವದಿ ಹೇಳಿದ್ದಾರೆ.

ಈ ನೂತನ ವ್ಯವಸ್ಥೆಯು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ‘ಸ್ವಚ್ಛ ಭಾರತ’ ಯೋಜನೆಗೆ ಪೂರಕವಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ವಿವಿಧೆಡೆಗಳಲ್ಲಿ ಮತ್ತಷ್ಟು ಅನುಪಯುಕ್ತ ಬಸ್‍ಗಳನ್ನು ಈ ರೀತಿ ಶೌಚಗೃಹಗಳನ್ನು ನಿರ್ಮಾಣ ಮಾಡಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲಾಗುವುದೆಂದು ತಿಳಿಸಿದರು.

LEAVE A REPLY

Please enter your comment!
Please enter your name here