ಕೆರಿಬಿಯನ್‌ ಕ್ರಿಕೆಟಿಗನ ಕೋವಿಡ್ ಫ‌ಲಿತಾಂಶ ನೆಗೆಟಿವ್‌

0

ಮಿಂಚಿನ ಓಟಗಾರ, ಎಂಟು ಒಲಿಂಪಿಕ್‌ ಚಿನ್ನಗಳ ಸರದಾರ ಜಮೈಕಾದ ಉಸೇನ್‌ ಬೋಲ್ಟ್ ಗೆ ಕೋವಿಡ್ ಪಾಸಿಟಿವ್‌ ತಗುಲಿದ ಬೆನ್ನಲ್ಲೇ ಅದೇ ನಾಡಿನ ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ಅವರಿಗೂ ಗಂಡಾಂತರದ ಭೀತಿ ಎದುರಾಗಿತ್ತು. ಇತ್ತೀಚೆಗೆ ನಡೆದ ಬೋಲ್ಟ್ ಅವರ 34ನೇ ಜನ್ಮದಿನದ ಪಾರ್ಟಿಯಲ್ಲಿ ಗೇಲ್‌ ಕೂಡ ಭಾಗವಹಿಸಿದ್ದರು. ಆದರೀಗ ಕ್ರಿಸ್‌ ಗೇಲ್‌ ಅವರ ಕೋವಿಡ್‌ ಟೆಸ್ಟ್‌ ಫ‌ಲಿತಾಂಶ ನೆಗೆಟಿವ್‌ ಬಂದಿದೆ. ಹೀಗಾಗಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಪಾಳೆಯದ ಮೇಲೆ ಕವಿದಿದ್ದ ಕಾರ್ಮೋಡವೊಂದು ಸರಿದು ಹೋಗಿದೆ.

ತನ್ನ ಮೊದಲ ಕೋವಿಡ್‌ ಫ‌ಲಿತಾಂಶ ನೆಗೆಟಿವ್‌ ಬಂದಿದೆ ಎಂದು ಸ್ವತಃ ಕ್ರಿಸ್‌ ಗೇಲ್‌ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಐಪಿಎಲ್‌ಗಾಗಿ ಯುಎಇಗೆ ತೆರಳುವುದಕ್ಕಿಂತ ಮೊದಲು ಅವರು 2 ನೆಗೆಟಿವ್‌ ಫ‌ಲಿತಾಂಶಗಳನ್ನು ದಾಖಲಿಸಬೇಕಿದೆ.

ನಿಯಮ ಉಲ್ಲಂಘನೆ
ಉಸೇನ್‌ ಬೋಲ್ಟ್ ಜನ್ಮದಿನದ ಪಾರ್ಟಿಯಲ್ಲಿ ಕೋವಿಡ್‌ ನಿಯಮಾವಳಿಯನ್ನು ಗಾಳಿಗೆ ತೂರಲಾಗಿತ್ತು ಎಂದು ವರದಿಯಾಗಿದೆ. ಯಾರೂ ಮಾಸ್ಕ್ ಕೂಡ ಧರಿಸಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಕ್ರಿಸ್‌ ಗೇಲ್‌ ಆರೋಗ್ಯದ ಬಗ್ಗೆ ಸಹಜವಾಗಿಯೇ ಆತಂಕವಾಗಿತ್ತು.

ಉಸೇನ್‌ ಬೋಲ್ಟ್ ಗೆ ಶನಿವಾರ ನಡೆಸಲಾದ ಕೋವಿಡ್‌-19 ಪರೀಕ್ಷೆಯ ಫ‌ಲಿತಾಂಶ ಪಾಸಿಟಿವ್‌ ಬಂದಿತ್ತು. ಅವರೀಗ ಮನೆಯಲ್ಲೇ ಸೆಲ್ಫ್ ಐಸೊಲೇಶನ್‌ನಲ್ಲಿದ್ದಾರೆ. ತಮ್ಮ ಆರೋಗ್ಯದ ಬಗ್ಗೆ ವೀಡಿಯೋ ಒಂದರಲ್ಲಿ ಹೇಳಿಕೊಂಡಿದ್ದಾರೆ. ಕ್ರಿಸ್‌ ಗೇಲ್‌ ಹೊರತುಪಡಿಸಿ ಇನ್ನೂ ಕೆಲವು ಮಂದಿ ಕ್ರೀಡಾಳುಗಳು ಶುಕ್ರವಾರ ನಡೆದ ಉಸೇನ್‌ ಬೋಲ್ಟ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಮ್ಯಾಂಚೆಸ್ಟರ್‌ ಸಿಟಿಯ ರಹೀಂ ಸ್ಟರ್ಲಿಂಗ್‌, ಬೇಯರ್‌ ಲೆವರ್ಕುಸೆನ್ಸ್‌ನ ಲಿಯೋನ್‌ ಬೈಲಿ ಇವರಲ್ಲಿ ಪ್ರಮುಖರು.

LEAVE A REPLY

Please enter your comment!
Please enter your name here