ಕೇರಳ ಚಿನ್ನ ಕಳ್ಳಸಾಗಣೆ ಕೇಸ್​ ಆರೋಪಿಗಳಾದ ಫರೀದ್​, ರಾಬಿನ್ಸ್ ದುಬೈನಲ್ಲಿ ಅರೆಸ್ಟ್: ಸ್ವಪ್ನಾಗೆ ಜಾಮೀನು

0

ಕೇರಳ ಚಿನ್ನ ಕಳ್ಳಸಾಗಣೆ ಕೇಸ್​ನ ಪ್ರಮುಖ ಆರೋಪಿಗಳಾದ ಫೈಸಲ್ ಫರೀದ್ ಮತ್ತು ರಾಬಿನ್ಸ್​ ಅವರನ್ನು ದುಬೈನಲ್ಲಿ ಬಂಧಿಸಲಾಗಿದೆ ಎಂದು ನ್ಯಾಷನಲ್​ ಇನ್​ವೆಸ್ಟಿಗೇಶನ್ ಏಜೆನ್ಸಿ (ಎನ್​ಐಎ) ಕೊಚ್ಚಿ ಕೋರ್ಟ್​​ಗೆ ಸಲ್ಲಿಸಿದ ಅಫಿಡವಿಟ್​ನಲ್ಲಿ ತಿಳಿಸಿದೆ. ಯುಎಇ ಆಡಳಿತ ಅಧಿಕೃತವಾಗಿಯೇ ಫೈಸಲ್ ಫರೀದ್​ನ ಬಂಧನವನ್ನು ಖಾತ್ರಿಗೊಳಿಸಿದೆ ಎಂದು ಎನ್​ಐಎ ಹೇಳಿದೆ.

ಕಳ್ಳಸಾಗಣೆ ಕೇಸ್​ನ ಇಬ್ಬರು ಪ್ರಮುಖ ಪಿತೂರಿಗಾರರು ಇವರೆಂಬುದನ್ನು ಎನ್​ಐಎ ಪ್ರತಿಪಾದಿಸಿದೆ. ಫೈಸಲ್ ಫರೀದ್​, ರಾಬಿನ್ಸ್ ಹಮೀದ್​, ಸಿದ್ದಿಕ್​ ಅಕ್ಬರ್, ಅಹ್ಮದ್​ ಕುಟ್ಟಿ, ರತೀಶ್​, ಮೊಹಮ್ಮದ್ ಶಮೀರ್​ ಎಂಬ ಆರು ಆರೋಪಿಗಳ ವಿರುದ್ಧ ಇಂಟರ್​ ಪೋಲ್ ಮೂಲಕ ಬ್ಲೂ ಕಾರ್ನರ್ ನೋಟಿಸ್​ ಜಾರಿಗೊಳಿಸಲಾಗಿತ್ತು. ಚಿನ್ನಕಳ್ಳಸಾಗಣೆ ಕೇಸ್​ನಲ್ಲಿ ಆರೋಪಿಗಳಿಗೆ ಜಾಮೀನು ನೀಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಎನ್​ಐಎ ಸಲ್ಲಿಸಿದ ಅಫಿಡವಿಟ್​ನಲ್ಲಿ ಈ ವಿವರಗಳಿವೆ. ಮೊಹಮ್ಮದ್ ಶಫಿ ಮತ್ತು ಕೆ.ಟಿ.ರಮೀಸ್ ಎಂಬಿಬ್ಬರು ಈ ಚಿನ್ನ ಕಳ್ಳಸಾಗಣೆ ಕೇಸ್​ನ ಮಾಸ್ಟರ್​ಮೈಂಡ್​ಗಳು ಎಂದು ಹೇಳಿರುವ ಎನ್​ಐಎಗೆ ಕೋರ್ಟ್​ ಆರೋಪಿಗಳ ವಿರುದ್ಧದ ಸಾಕ್ಷ್ಯ ಒದಗಿಸುವಂತೆ ನಿನ್ನೆ ತಾಕೀತು ಮಾಡಿತ್ತು. ಏತನ್ಮಧ್ಯೆ ಈ ಆರೋಪಿಗಳ ಜಾಮೀನು ಅರ್ಜಿ ನಾಳೆ ವಿಚಾರಣೆಗೆ ಬರಲಿದೆ.

ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣದ ಕಸ್ಟಮ್ಸ್ ಕೇಸ್​ನಲ್ಲಿ ನಿನ್ನೆಯಷ್ಟೇ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್​ಗೆ ಜಾಮೀನು ಲಭ್ಯವಾಗಿದೆ. ಕೊಚ್ಚಿಯಲ್ಲಿರುವ ಆರ್ಥಿಕ ಅಪರಾಧ ನ್ಯಾಯಾಲಯ ಈ ಜಾಮೀನು ಮಂಜೂರು ಮಾಡಿದೆ. ಕಸ್ಟಮ್ಸ್ ಇಲಾಖೆ 60 ದಿನದೊಳಗೆ ಆರೋಪ ಪಟ್ಟಿ ಸಲ್ಲಿಸಲು ವಿಫಲವಾದ ಕಾರಣ ಆಕೆಗೆ ಜಾಮೀನು ಮಂಜೂರಾಗಿತ್ತು. (ಏಜೆನ್ಸೀಸ್)

LEAVE A REPLY

Please enter your comment!
Please enter your name here