ಪಿಎಂ ಕೇರ್ ಫಂಡ್ ಗೆ ಕೇವಲ 5 ದಿನಗಳಲ್ಲಿ 3,076 ಕೋಟಿ ರೂಪಾಯಿ ದೇಣಿಗೆ ದೇಶ-ವಿದೇಶಗಳಿಂದ ಬಂದಿರುವುದಾಗಿ ಸರ್ಕಾರ ಬಿಡುಗಡೆಗೊಳಿಸಿರುವ ಆಡಿಟ್ ಪ್ರಕಟಣೆಯಲ್ಲಿ ತಿಳಿಸಿದೆ. 2020ರ ಆರ್ಥಿಕ ಸಾಲಿನ ಪ್ರಕಟಣೆ ಬಿಡುಗಡೆ ಮಾಡಿತ್ತು. ಆದರೆ ಮಾರ್ಚ್ 27ರಿಂದ 31ರವರೆಗಿನ ದೇಣಿಗೆಯ ದಾಖಲೆಯನ್ನು ಮಾತ್ರ ಬಹಿರಂಗಗೊಳಿಸಿರುವುದಾಗಿ ವರದಿ ತಿಳಿಸಿದೆ.
3076 ಕೋಟಿ ರೂಪಾಯಿ ಹಣದಲ್ಲಿ, 3,075.85 ಕೋಟಿ ರೂಪಾಯಿ ದೇಶೀಯವಾಗಿ ಸಂಗ್ರಹವಾದ ದೇಣಿಗೆಯಾಗಿದೆ ಮತ್ತು 39.67 ಕೋಟಿ ರೂಪಾಯಿ ವಿದೇಶಿ ದೇಣಿಯಾಗಿದೆ.
ಪಿಎಂ ಕೇರ್ ನಲ್ಲಿ ಪ್ರಾಥಮಿಕವಾಗಿ ಇದ್ದ ಮೂಲಧನ 2,25 ಲಕ್ಷ ರೂಪಾಯಿ, ಅಲ್ಲದೇ ದೇಣಿಯ ಮೂಲಕ ಸುಮಾರು 35 ಲಕ್ಷ ರೂಪಾಯಿ ಬಡ್ಡಿ ಪಡೆಯಲಾಗಿದೆ ಎಂದು ವಿವರಿಸಿದೆ.
ಪಿಎಂ ಕೇರ್ ಫಂಡ್ ವೆಬ್ ಸೈಟ್ ನಲ್ಲಿ ಆಡಿಟ್ ವರದಿಯನ್ನು ಪ್ರಕಟಿಸಲಾಗಿದೆ. ಮಾರ್ಚ್ 31ರವರೆಗೆ ಸಂಗ್ರಹಿಸಲಾದ 5 ದಿನಗಳ ದೇಣಿಗೆ ವಿವರವನ್ನು ಪ್ರಕಟಿಸಿದೆ. ಆದರೆ ಮಾರ್ಚ್ ನಂತರ ಪಡೆದ ದೇಣಿಗೆಯ ವಿವರ ಇನ್ನಷ್ಟೇ ತಿಳಿದುಬರಬೇಕಾಗಿದೆ ಎಂದು ವರದಿ ತಿಳಿಸಿದೆ.
ದೇಶೀಯ ಮತ್ತು ವಿದೇಶಿ ದೇಣಿಗೆದಾರರು ಅಥವಾ ಕೊಡುಗೆದಾರರ ಯಾವ ವಿವರವನ್ನು ಕೇಂದ್ರ ಸರ್ಕಾರ ಬಹಿರಂಗಗೊಳಿಸಿಲ್ಲ. ಇಷ್ಟೊಂದು ದೊಡ್ಡ ಮೊತ್ತ ನೀಡಿರುವ ದೇಣಿಗೆದಾರರ ಹೆಸರನ್ನು ಯಾಕೆ ಬಹಿರಂಗಗೊಳಿಸಿಲ್ಲ ಎಂದು ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಟ್ವೋಟ್ ಮೂಲಕ ಪ್ರಶ್ನಿಸಿದ್ದಾರೆ.
ಪ್ರತಿಯೊಂದು ಟ್ರಸ್ಟ್ ಅಥವಾ ಎನ್ ಜಿಒಗಳು ತಾವು ಪಡೆದಿರುವ ದೇಣಿಗೆದಾರರ ಹೆಸರನ್ನು ಬಹಿರಂಗಪಡಿಸಬೇಕು ಎಂಬ ನಿಯಮವಿದೆ. ಹೀಗಾಗಿ ಪಿಎಂ ಕೇರ್ ಫಂಡ್ ಗೆ ಯಾಕೆ ಈ ವಿನಾಯ್ತಿ ನೀಡಲಾಗಿದೆ ಎಂದು ಪ್ರಶ್ನಿಸಿದ್ದಾರೆ.