ಕೊಂಕಣ ರೈಲ್ವೆಯಿಂದ ನೇಪಾಳಕ್ಕೆ 2 ಡೆಮು ರೈಲು ಹಸ್ತಾಂತರ

0

ಕೊಂಕಣ ರೈಲ್ವೆ ಕಾರ್ಪೋರೇಷನ್ ತಾನು ನಿರ್ಮಿಸಿದ ಎರಡು ಅತ್ಯಾಧುನಿಕ 1600 ಎಚ್‌ಪಿ ಡೆಮು ಅವಳಿ ರೈಲುಗಳನ್ನು, ರೈಲ್ವೆ ಸಚಿವಾಲಯದ ಮಾರ್ಗದರ್ಶನದಲ್ಲಿ ಶುಕ್ರವಾರ ನೇಪಾಳದ ರೈಲ್ವೆ ಇಲಾಖೆಗೆ ಹಸ್ತಾಂತರಿಸಿದೆ.

ಇದು ಭಾರತ ಸರಕಾರದ ‘ಮೇಕ್ ಇನ್ ಇಂಡಿಯಾ- ಮೇಕ್ ಫಾರ್ ವರ್ಲ್ಡ್’ ನೀತಿಯಡಿ ನಿರ್ಮಿಸಿ ರಫ್ತುಮಾಡುತ್ತಿರುವ, ಪ್ರಮುಖ ಉತ್ಪನ್ನ ವಾಗಿದ್ದು ಈ ಮೂಲಕ ನೇಪಾಳದಲ್ಲಿ ಭಾರತದ ಗುರುತನ್ನು ಎಲ್ಲರಿಗೂ ಪರಿಚಯಿಸುವಂತಿರುತ್ತದೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ.

ಕೊಂಕಣ ರೈಲ್ವೆ ಕಾರ್ಪೋರೇಷನ್, ಎಲ್ಲಾ ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಎರಡು ಅತ್ಯಾಧುನಿಕ 1600 ಎಚ್ ಡೆಮು ರೈಲುಗಳನ್ನು ನಿರ್ಮಿಸಿ, ಹಸ್ತಾಂತರಿಸಲು 2019ರ ಮೇ 10ರಂದು ನೇಪಾಳದ ರೈಲ್ವೆ ಇಲಾಖೆ ಯೊಂದಿಗೆ ಒಪ್ಪಂದಕ್ಕೆ ಸಹಿ ಮಾಡಿತ್ತು. ಈ ರೈಲುಗಳನ್ನು ಚೆನ್ನೈನ ಇಂಟಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ನಿರ್ಮಿಸಲಾಗಿತ್ತು. ಪ್ರತಿ ಟ್ರೈನ್ ಸೆಟ್, ಒಂದು ಡೀಸೆಲ್ ಪವರ್ ಕಾರ್, ಒಂದು ಡೀಸೆಲ್ ಟ್ರೈಲರ್ ಕಾಲ್ ಹಾಗೂ ಮೂರು ಟ್ರೈಲರ್ ಕಾರ್‌ಗಳನ್ನು ಒಳಗೊಂಡಿದೆ. ಮೂರು ಕಾರ್‌ಗಳಲ್ಲಿ ಒಂದು ಹವಾನಿಯಂತ್ರಿತವಾಗಿದೆ.

ನೇಪಾಳದ ರೈಲ್ವೆ ಇಲಾಖೆ, ಒಟ್ಟು 52.46 ಕೋಟಿ ರೂ.ಗಳ ವೆಚ್ಚದಲ್ಲಿ ಎರಡು ಡೆಮು ರೈಲುಗಳ ಸರಬರಾಜಿಗೆ ಬೇಡಿಕೆ ಸಲ್ಲಿಸಿತ್ತು. ಕೆಆರ್‌ಸಿಎಲ್ ಅದನ್ನೀಗ ಯಶಸ್ವಿಯಾಗಿ ನಿರ್ಮಿಸಿ ಹಸ್ತಾಂತರಿಸಿದೆ. ಕೊಂಕಣ ರೈಲ್ವೆಯ ತಂಡ ವೊಂದು ಇವುಗಳನ್ನು ಭಾರತದ ಜಯ ನಗರದಿಂದ ನೇಪಾಳದ ಜನಕಪುರಕ್ಕೆ ಕೊಂಡೊಯ್ದು ಅಲ್ಲಿನ ಅಧಿಕಾರಿಗಳಿಗೆ ಹಸ್ತಾಂತರಿಸಿದೆ.

ಈ ರೈಲುಗಳಿಗೆ ಮಾರ್ಗದುದ್ದಕ್ಕೂ ಜನರು ನಿಂತು ಸ್ವಾಗತಕೋರಿದರು. ಈ ಡೆಮು ರೈಲು ಭಾರತದ ಜಯನಗರ ಹಾಗೂ ನೇಪಾಳದ ಕುರ್ಥಾ ನಡುವೆ ಸಂಚರಿಸಲಿದೆ ಎಂದು ಕೆಆರ್‌ಸಿಎಲ್‌ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಲ್.ಕೆ.ವರ್ಮ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here