ಕೊಪ್ಪಳದಲ್ಲಿ ಕ್ಲಸ್ಟರ್‌: ಚನ್ನಪಟ್ಟಣ ಗೊಂಬೆ ಉದ್ಯಮಕ್ಕೆ ಧಕ್ಕೆ

0

ನೈಸರ್ಗಿಕ ವಸ್ತುಗಳನ್ನು ಬಳಸಿ ತಯಾರಿಸಿದ ಚನ್ನಪಟ್ಟಣದ ಆಟಿಕೆಗಳು ವಿಶ್ವ ಖ್ಯಾತಿ ಪಡೆದಿವೆ. ಚೀನಾದ ಆಟಿಕೆಗಳ ಪೈಪೋಟಿಯಲ್ಲಿ ನಲಗುತ್ತಿರುವ ಈ ಉದ್ಯಮದ ಪುನಶ್ಚೇತನಕ್ಕೆ ವ್ಯವಸ್ಥೆ ಕಲ್ಪಿಸಬೇಕಾದ ರಾಜ್ಯ ಸರ್ಕಾರ ,ಕೊಪ್ಪಳದಲ್ಲಿ ಆಟಿಕೆ ಕ್ಲಸ್ಟರ್‌ ಸ್ಥಾಪನೆಗೆ ಮುಂದಾಗಿರುವುದರ ವಿರುದ್ಧ ಸ್ಥಳೀಯ ನಾಗರೀಕರು ಮತ್ತು ಆಟಿಕೆ ಕಶುಲಕರ್ಮಿಗಳು ಕಿಡಿಕಾರಿದ್ದಾರೆ. ಆದರೆ, ಕೊಪ್ಪಳದಲ್ಲಿ ಸ್ಥಾಪನೆಯಾಗುವ ಆಟಿಕೆ ಕ್ಲಸ್ಟರ್‌ನಿಂದ ಚನ್ನಪಟ್ಟಣದ ಗೊಂಬೆ ಉದ್ಯಮಕ್ಕೆ ಧಕ್ಕೆಯಾಗಲ್ಲ ಎಂದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹೇಳಿದ್ದಾರೆ.

ಆತಂಕ ಯಾಕೆ?: ಇತ್ತೀಚೆಗಷ್ಟೆ ರಾಜ್ಯ ಸರ್ಕಾರ ಕೊಪ್ಪಳದಲ್ಲಿ ಆಟಿಕೆ ಕ್ಲಸ್ಟರ್‌ ಸ್ಥಾಪನೆ ಮಾಡುವುದಾಗಿ ಘೋಷಿಸಿದೆ. ಕೊಪ್ಪಳದಲ್ಲಿ ಕಿನ್ನಾಳ ಕಲೆಯನ್ನಾಧರಿಸಿ ತೊಟ್ಟಿಲು, ಧಾರ್ಮಿಕ ಕಲಾಕೃತಿಗಳು, ಹಣ್ಣಿನ ಮಾದರಿಗಳಿಗೆ ಖ್ಯಾತಿ ಪಡೆದಿವೆ. ಚನ್ನಪಟ್ಟಣದ ಆಟಿಕೆಗಳು ಮಕ್ಕಳ ಆಟ, ಮನರಂಜನೆಗಾಗಿ ಮತ್ತು ಮನೆಯ ಅಲಂಕಾರಕ್ಕೆ ತಯಾರಾಗುವ ವಸ್ತುಗಳು, ಆಲೆಮರದಿಂದ ಗೊಂಬೆ ತಯಾರಿಸಿ ಅದಕ್ಕೆ ಸಸ್ಯಜನ್ಯ ಬಣ್ಣಗಳನ್ನು ಹಚ್ಚಿ, ಲಾಕ್ವೇರ್‌ನಿಂದ ಅಂತಿಮಗೊಳಿಸಲಾಗುತ್ತದೆ. ಚನ್ನಪಟ್ಟಣದ ಆಟಿಕೆಗಳಿಗೂ, ಕಿನ್ನಾಳ ಗ್ರಾಮದ ಕಲೆಗೂ ಅಜಗಜಾಂತರ ವ್ಯತ್ಯಾಸವಿದೆ. ಆದರೆ ರಾಜ್ಯ ಸರ್ಕಾರ ಅದೇಕೋ ಕೊಪ್ಪಳದಲ್ಲಿ ಆಟಿಕೆಗಳ ಕ್ಲಸ್ಟರ್‌ ಸ್ಥಾಪಿಸಲು ಮುಂದಾಗಿದೆ. ರಾಜ್ಯ ಸರ್ಕಾರದ ಈನಿರ್ಧಾರ ಚನ್ನಪಟ್ಟಣದ ಆಟಿಕೆ ಉದ್ಯಮಕ್ಕೆ ಧಕ್ಕೆಯಾಗಲಿದೆ ಎಂಬುದು ಸ್ಥಳೀಯರ ಅಭಿಪ್ರಾಯ.

10 ಸಾವಿರಕ್ಕೂ ಅಧಿಕ ಮಂದಿ: ಇಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಆಟಿಕೆ ತಯಾರಿಕಾ ಮತ್ತು ಆಟಿಕೆ ತಯಾರಿಕೆಗೆ ಪೂರಕವಾಗಿರುವ ಘಟಕಗಳಿವೆ. 10 ಸಾವಿರಕ್ಕೂ ಅಧಿಕ ಮಂದಿ ಈ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ನೂರಾರು ಆಟಿಕೆಮಾರಾಟ ಮಳಿಗೆಗಳಿವೆ. ವಿಪರ್ಯಾಸವೆಂದರೆಗೊಂಬೆ ತಯಾರಿಕೆಯಲ್ಲಿ ತೊಡಗಿಸಿಕೊಂಡ ಮಂದಿ ಎಷ್ಟು, ಇಲ್ಲಿ ದುಡಿಯುವ ಮಂದಿ ಎಷ್ಟು ಎಂಬ ಕರಾರುವಕ್ಕು ಮಾಹಿತಿಯೇ ಸ್ಥಳೀಯವಾಗಿ ಸರ್ಕಾರಿ ಅಧಿಕಾರಿಗಳೂ ಸೇರಿದಂತೆ ಯಾರೊಬ್ಬರ ಬಳಿಯೂ ಲಭ್ಯವಿಲ್ಲ. ಗೊಂಬೆ ಉದ್ಯಮದಲ್ಲಿ ಬದುಕು ಕಟ್ಟಿಕೊಂಡಿರುವ ಸಾವಿರಾರು ಕುಟುಂಬಗಳಿಗೆ ಪ್ರೋತ್ಸಾಹಕವಾಗಿ ನಿಲ್ಲಬೇಕಾದ ಸರ್ಕಾರದ ಇಲಾಖೆಗಳು ನಿರ್ಲಕ್ಷ್ಯ ಮಾಡುತ್ತಿವೆ ಎಂಬ ಭಾವನೆ ಸ್ಥಳೀಯರಲ್ಲಿ ಮೂಡಿದೆ.

ಆರ್ಥಿಕ ಸಹಕಾರ ನೀಡಲಿ ಕುಶಲಕರ್ಮಿಗಳ ಮನವಿ : ಚನ್ನಪಟ್ಟಣದ ಗೊಂಬೆ ಕುಶಲಕರ್ಮಿಗಳಿಗೆ ಸರ್ಕಾರ ಹಾಗೂ ಬ್ಯಾಂಕ್‌ಗಳು ಆರ್ಥಿಕ ಸಹಾಯ ಮತ್ತು ಸಾಲ ಸೌಲಭ್ಯ ನೀಡಬೇಕು ಎಂದು ಶ್ರೀ ಕೆಂಗಲ್‌ ಆಂಜನೇಯ ಅರಗುಬಣ್ಣದ ಕುಶಲಕರ್ಮಿಗಳ ಟ್ರಸ್ಟ್‌ ಅಧ್ಯಕ್ಷ ಶ್ರೀನಿವಾಸಯ್ಯ ಹೇಳಿದರು. “”ಉದಯವಾಣಿ”ಯೊಂದಿಗೆ ಮಾತನಾಡಿದ ಅವರು, ಚೀನಾದ ನಕಲಿ ಗೊಂಬೆಗಳಿಂದಾಗಿ ಚನ್ನಪಟ್ಟಣದ ಗೊಂಬೆ ಉದ್ಯಮ ತೊಂದರೆಗೆ ಸಿಲುಕಿದೆ. ಇದೀಗ ಕೋವಿಡ್‌ ಲಾಕ್‌ಡೌನ್‌ ಕಾರಣ ವಹಿವಾಟು ಕುಸಿದು, ಇಡೀ ಉದ್ಯಮವೇ ಕುಸಿಯುವಂತಾಗಿದೆ. ಹೀಗಾಗಿ ಸಬ್ಸಿಡಿ ಸಹಿತ ಸಾಲ ಸೌಲಭ್ಯ ಕೊಡಬೇಕು. ಆತ್ಮನಿರ್ಭರ ಭಾರತ ಯೋಜನೆಯಡಿಯೂ ಆರ್ಥಿಕ ಸಹಕಾರ ದೊರೆಯುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.

ಆತಂಕ ಬೇಡ: ಕೈಗಾರಿಕಾ ಇಲಾಖೆ : ಜಿಲ್ಲಾ ಕೈಗಾರಿಕಾ ಇಲಾಖೆಯ ಉಪನಿರ್ದೇಶಕ ಶಿವಲಿಂಗಯ್ಯ ಅವರ ಪ್ರಕಾರ ಚೀನಾದ ಆಟಿಕೆಗಳಿಗೆ ಪೈಪೋಟಿವೊಡ್ಡಲು “ಕಾಂಪಿಟ್‌ ವಿಥ್‌ ಚೀನಾ” ಉದ್ದೇಶದಲ್ಲಿ ಕ್ಲಸ್ಟರ್‌ ಸ್ಥಾಪನೆ ಉದ್ದೇಶ ಹಳೆಯದ್ದು, ಚನ್ನಪಟ್ಟಣದ ಆಟಿಕೆಗಳಿಗೂ ಕೊಪ್ಪಳದ ಕ್ಲಸ್ಟರ್‌ಗೂ ಸಂಬಂಧವಿಲ್ಲ. ಮರದ ಆಟಿಕೆಗಳು ಅಲ್ಲಿ ಉತ್ಪಾದನೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಉಪಯೋಗಕ್ಕೆ ಬಾರದ ಕ್ರಾಫ್ಟ್ ವಿಲೇಜ್‌ : ಚನ್ನಪಟ್ಟಣದ ಆಟಿಕೆ ಕರಕುಶಲ ಕರ್ಮಿಗಳಿಗೆಂದೇ ರಾಜ್ಯ ಸರ್ಕಾರದಿಂದ ಕ್ರಾಫ್ಟ್ ವಿಲೇಜ್‌ ಸ್ಥಾಪನೆಯಾಗಿದೆ. ಆದರೆ ಇಲ್ಲಿರುವ ಯಂತ್ರೋಪಕರಣ ಮುಂತಾದ ವ್ಯವಸ್ಥೆಗಳು ಗೊಂಬೆ ಉದ್ಯಮಕ್ಕೆ ಪೂರಕವಾಗಿಲ್ಲ ಎಂದು ಕರಕುಶಲ ಕರ್ಮಿ ಎಂ.ಶಿವಣ್ಣ ಆರೋಪಿಸುತ್ತಾರೆ. ಮರಗೆಲಸಕ್ಕೆ ಹೆಚ್ಚು ಉಪಯೋಗವಾಗುವ ಯಂತ್ರೋಪಕರಣಗಳು ಇವು ಎಂದು ಅವರು ದೂರಿದ್ದಾರೆ. ಕ್ರಾಫ್ಟ್ ವಿಲೇಜ್‌ ಸ್ಥಾಪನೆಯಾದಾಗ ಗೊಂಬೆ ಉದ್ಯಮಕ್ಕೆ ಪೂರಕ ವಾತಾವರಣ ಸೃಷ್ಟಿಯಾಗುತ್ತಿದೆ. ಅಂತಲೇ ಭಾವಿಸಿದ್ದಾಗಿ, ಆದರೆ ಇಲ್ಲಿ ಗೊಂಬೆ ಉದ್ಯಮಕ್ಕೆ ಪ್ರಮುಖವಾಗಿ ಬೇಕಾಗದ ಯಂತ್ರೋಪಕರಣಗಳಾಗಲಿ, ಕಚ್ಚಾ ವಸ್ತುಗಳಾಗಲಿ ಸಿಗುವುದಿಲ್ಲ ಎಂದು ಮತ್ತೂಬ್ಬ ಕುಶಲ ಕರ್ಮಿ ರಾಮು ಬೇಸರ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್‌ ಕಿ ಬಾತ್‌ನಲ್ಲಿ ಚನ್ನಪಟ್ಟಣದ ಗೊಂಬೆಗಳ ಬಗ್ಗೆ ಪ್ರಶಂಸಿದ್ದಾರೆ. ಈ ಉದ್ಯಮದ ಕೈ ಹಿಡಿಯಲು ಸೂಕ್ತ ಯೋಜನೆ ರೂಪಿಸುವಂತೆ ಪ್ರಧಾನಿಗಳು ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ಕೊಡಬೇಕು ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

ಚನ್ನಪಟ್ಟಣದ ಗೊಂಬೆ ನಮ್ಮ ಸಂಸ್ಕೃತಿ. ಕೊಪ್ಪಳದಲ್ಲಿ ಉದ್ದೇಶಿಸಿರುವ ಆಟಿಕೆ ಕ್ಲಸ್ಟರ್‌ಗೂ ಚನ್ನಪಟ್ಟಣದ ಆಟಿಕೆ ಉದ್ಯಮಕ್ಕೂ ಸಾಕಷ್ಟು ವ್ಯತ್ಯಾಸವಿದೆ.  ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ

ಕೊಪ್ಪಳದಲ್ಲಿ ಚೀನಾ ಮಾದರಿಯ ಎಲೆಕ್ಟ್ರಾನಿಕ್ಸ್‌ ಆಟಿಕೆಗಳು ತಯಾರಾಗುತ್ತವೆ. ಹೀಗಾಗಿ ಚನ್ನಪಟ್ಟಣದ ಗೊಂಬೆ ಉದ್ದಿಮೆದಾರರು ವಿರೋಧಿಸುವ ಅಗತ್ಯವಿಲ್ಲ. ಮರದ ಗೊಂಬೆಗಳ ತಯಾರಿಕೆ ಚನ್ನಪಟ್ಟಣದ ವಿಶೇಷ. ಈ ಉದ್ಯಮಕ್ಕೆ ಇನ್ನಷ್ಟು ಜೀವ ತುಂಬುವ ಅಗತ್ಯವಿದೆ. ಕುಮಾರಸ್ವಾಮಿ, ಚನ್ನಪಟ್ಟಣ ಶಾಸಕ ಹಾಗೂ ಮಾಜಿ ಸಿಎಂ

-ಬಿ.ವಿ.ಸೂರ್ಯಪ್ರಕಾಶ್‌

LEAVE A REPLY

Please enter your comment!
Please enter your name here