ಕೊರೊನಾ ಜೊತೆ ಬದುಕುವುದನ್ನು ಕಲಿತ ಜನ, ಗರಿಗೆದರಿದ ವ್ಯಾಪಾರ ಚಟುವಟಿಕೆ

0

ರಾಜ್ಯದಲ್ಲಿ ಆರ್ಥಿಕ ಚಟುವಟಿಕೆಗಳು ಗರಿಗೆದರ ತೊಡಗಿವೆ. ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಜನ ಸೋಂಕಿನ ಭೀತಿಯಿಂದ ಹೊರಬರುತ್ತಿದ್ದಾರೆ. ಲಾಕ್‍ಡೌನ್ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಎಂದಿನಂತೆ ತಮ್ಮ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಆರ್ಥಿಕ ಚಟುವಟಿಕೆ ಪುನಶ್ಚೇತನಗೊಳ್ಳುತ್ತಿದೆ.

ಸಂಪೂರ್ಣವಾಗಿ ಕುಸಿದಿದ್ದ ನಿರ್ಮಾಣ ವಲಯ, ಪ್ರವಾಸೋದ್ಯಮ, ರಿಯಲ್ ಎಸ್ಟೇಟ್ ವ್ಯವಹಾರಗಳು ನಿಧಾನವಾಗಿ ಚೇತರಿಸಿಕೊಳ್ಳತೊಡಗಿದೆ. ಲಾಕ್‍ಡೌನ್ ಅವಧಿಯಲ್ಲಿ ಮುಜರಾಯಿ ಇಲಾಖೆಯ ದೇವಸ್ಥಾನಗಳ ಧಾರ್ಮಿಕ ಚಟುವಟಿಕೆಗಳು ಕೂಡ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದವು. ಪ್ರತಿ ವರ್ಷ ರಾಜ್ಯಕ್ಕೆ ಮುಜರಾಯಿ ದೇವಾಲಯಗಳಿಂದ 317 ಕೋಟಿ ಆದಾಯ ಬರುತ್ತಿತ್ತು.

300 ಕೋಟಿಯಷ್ಟು ಆದಾಯ ಖೋತಾ ಆಗಿದೆ. ಈಗ ತೆರವಾಗಿ ವಿಶೇಷ ಪೂಜಾ ಕಾರ್ಯಗಳಿಗೆ ಅವಕಾಶ ನೀಡಿರುವುದರಿಂದ ಧಾರ್ಮಿಕ ಚಟುವಟಿಕೆಗಳು ಗರಿಗೆದರತೊಡಗಿದ್ದು, ಜನ ದೇವಾಲಯಗಳತ್ತ ಮುಖ ಮಾಡಿದ್ದು, ಆರ್ಥಿಕ ಸಕ್ರಿಯತೆ ಸಾಧ್ಯತೆಗಳನ್ನು ನಿರೀಕ್ಷಿಸಲಾಗಿದೆ.

ಮದುವೆ ಮತ್ತಿತರ ಸಮಾರಂಭ ಕಾರ್ಯಕ್ರಮಗಳು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಬಹುಬೇಡಿಕೆಯಿದ್ದ ಅಲಂಕಾರಿಕ ಪುಷ್ಪ ಬೆಳೆಗೆ ಭಾರೀ ಹೊಡೆತ ಬಿದ್ದಿತು. ಪ್ರಸ್ತುತ ವಿವಾಹ, ಸಭೆ ಸಮಾರಂಭಗಳಿಗೆ ಅವಕಾಶ ನೀಡಲಾಗಿದೆ. ಈಗಾಗಲೇ ಸಭೆ ಸಮಾರಂಭಗಳು, ವಿವಾಹ, ನಿಶ್ಚಿತಾರ್ಥ, ಹುಟ್ಟುಹಬ್ಬ ಕಾರ್ಯಕ್ರಮಗಳು ನಡೆಯುತ್ತಿರುವುದರಿಂದ ಅಲಂಕಾರಿಕ ಪುಷ್ಪ ಕೃಷಿ ವಾಹಿವಾಟು ಕೂಡ ಚೇತರಿಸಿಕೊಳ್ಳ ತೊಡಗಿದೆ.

ಕಳೆದ ಆರು ತಿಂಗಳಿನಿಂದ ಲಾಕ್‍ಡೌನ್ ಹಿನ್ನೆಲೆಯಲ್ಲಿ ಅಸಂಘಟಿತ ವಲಯ ಉದ್ಯೋಗ ಕಳೆದುಕೊಂಡು ಸಂಪೂರ್ಣ ಕುಸಿದಿತ್ತು. ಕೆಲಸವಿಲ್ಲದೆ ಕಾರ್ಮಿಕರು, ವ್ಯಾಪಾರಿಗಳು ಊರುಗಳತ್ತ ತೆರಳಿದ್ದರು. ಈಗ ಹಿಂದಿರುಗಿ ತಮ್ಮ ವ್ಯವಹಾರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಫುಟ್ಪಾತ್‍ಗಳಲ್ಲಿ ಎಂದಿನಂತೆ ಕಾಫಿ-ಟೀ, ಪಾನಿಪುರಿ, ಪಕೋಡ, ಬಜ್ಜಿಬೋಂಡ ವ್ಯಾಪಾರ ನಡೆಯುತ್ತಿದೆ. ಸಂಪೂರ್ಣವಾಗಿ ನೆಲಕಚ್ಚಿದ್ದ ಹೋಟೆಲ್ ಉದ್ಯಮ ಕೂಡ ಚೇತರಿಸಿಕೊಳ್ಳತೊಡಗಿದೆ. ಬೆಂಗಳೂರು ಮಹಾನಗರದಲ್ಲಿ ಶೇ.90ರಷ್ಟು ಹೋಟೆಲ್ ಉದ್ಯಮ ಕೊರೊನಾದ ಕಾರಣ ಸ್ಥಗಿತವಾಗಿತ್ತು.

3500ಕ್ಕೂ ಹೆಚ್ಚು ಹೋಟೆಲ್‍ಗಳು ಮುಚ್ಚಿದ್ದವು. ಈಗ ಲಾಕ್‍ಡೌನ್ ತೆರವಾಗಿ ಜನರು ರಾಜಧಾನಿಯತ್ತ ಬರುತ್ತಿರುವುದರಿಂದ ಹೋಟೆಲ್ ಉದ್ಯಮವು ಕೂಡ ನಿಧಾನವಾಗಿ ಚೇತರಿಸಿಕೊಳ್ಳತೊಡಗಿದೆ. ಬಾಗಿಲು ಮುಚ್ಚಿದ ಒಂದೊಂದು ಹೋಟೆಲ್‍ಗಳು ತೆರೆಯಲಾರಂಭಿಸಿವೆ. ರಾಜಧಾನಿ ಎರಡುಮೂರು ತಿಂಗಳಲ್ಲಿ ಸಹಜ ಸ್ಥಿತಿಗೆ ಬರುವ ಸಾಧ್ಯತೆ ಇದೆ.

ಪ್ರವಾಸೋದ್ಯ ಸಂಪೂರ್ಣವಾಗಿ ಕುಸಿದಿತ್ತು. ಪ್ರವಾಸಿಗರಿಲ್ಲದೆ ಪ್ರವಾಸಿ ತಾಣಗಳು ಬಣಗುಡುತ್ತಿದ್ದವು. ಸುಮಾರು 400 ಕೋಟಿಯಷ್ಟೇ ನಷ್ಟ ಉಂಟಾಗಿತ್ತು. ಪ್ರಸ್ತುತ ಪ್ರವಾಸೋದ್ಯಮವನ್ನು ಉತ್ತೇಜನಗೊಳಿಸಲುವುದು ಮತ್ತು ಪ್ರವಾಸಿಗರಿಗೆ ತೆರೆದುಕೊಳ್ಳುವ ನಿಟ್ಟಿನಲ್ಲಿ ಆಯುಷ್ ಇಲಾಖೆ ಹಲವು ಯೋಜನೆಗಳನ್ನು ರೂಪಿಸಿದೆ.

ಲಾಕ್‍ಡೌನ್ ತೆರವಾಗಿ ಪ್ರವಾಸೋದ್ಯಮಕ್ಕೆ ಅನುಮತಿ ನೀಡಿದ ನಂತರರ ಪ್ರವಾಸಿ ತಾಣಗಳು ಪ್ರವಾಸಿಗರಿಂದ ಕಂಗೊಳಿಸತೊಡಗಿವೆ. ನಿಧಾನವಾಗಿ ಪ್ರವಾಸೋದ್ಯಮವು ಕೂಡ ಚೇತರಿಸಿಕೊಳ್ಳತೊಡಗಿದೆ. ಐಟಿಬಿಟಿ ಕ್ಷೇತ್ರದ ನೌಕರರಿಗೆ ಮನೆಯಿಂದಲೇ ಕೆಲಸ ನಿರ್ವಹಿಸಲು ಅವಕಾಶ ಕೊಟ್ಟಿರುವ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರದಲ್ಲಿ ಬಾಡಿಗೆ ಮನೆಗಳು, ಪಿಜಿಗಳು, ಹೋಟೆಲ್ ಉದ್ಯಮಕ್ಕೆ ನಷ್ಟ ಉಂಟಾಗಿತ್ತು.

ಇನ್ನೊಂದು ಎರಡು ತಿಂಗಳಲ್ಲಿ ಐಟಿಬಿಟಿ ಉದ್ಯೋಗಿಗಳಿಗೆ ಕಚೇರಿಯಿಂದ ಕೆಲಸ ನಿರ್ವಹಿಸುವ ಸಾಧ್ಯತೆ ಇರುವುದರಿಂದ ಬಾಡಿಗೆ ಮನೆಗಳು ಪಿಜಿ ಉದ್ಯಮವು ಕೂಡ ಚೇತರಿಸಿಕೊಳ್ಳಲಿದೆ. ಒಟ್ಟಾರೆ ಬೆಂಗಳೂರು ಮಹಾನಗರ ಸೇರಿದಂತೆ ರಾಜ್ಯಾದ್ಯಂತ ಆರ್ಥಿಕ ಚಟುವಟಿಕೆಗಳು ನಿಧಾನಗತಿಯಲ್ಲಿ ಏರತೊಡಗಿವೆ. ಕೊರೊನಾ ಬಗ್ಗೆ ಜನರಿಗೆ ಮೊದಲಿದ್ದ ಭೀತಿ ಇಲ್ಲ. ಸರ್ಕಾರವೂ ಕೂಡ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಿಲ್ಲ.

ಚಿತ್ರಮಂದಿರ, ಈಜುಕೊಳ, ಶಾಲಾಕಾಲೇಜುಗಳನ್ನು ಹೊರತುಪಡಿಸಿದರೆ ಎಲ್ಲವನ್ನೂ ಮುಕ್ತಗೊಳಿಸಿದೆ. ಹೀಗಾಗಿ ಆರ್ಥಿಕ ಚಟುವಟಿಕೆಗಳು ಸಕ್ರಿಯಗೊಂಡಿವೆ. ಕೋವಿಡ್ ಹಿನ್ನಲೆಯಲ್ಲಿ ಕುಂಠಿತಗೊಂಡಿದ್ದ ಆಸ್ತಿ ನೋಂದಣಿ ಪ್ರಕ್ರಿಯೆಗೆ ಪ್ರಸ್ತುತ ಚಾಲನೆ ಸಿಕ್ಕಿದ್ದು, ರಿಯಲ್ ಎಸ್ಟೇಟ್ ಉದ್ಯಮ ಚೇತರಿಕೆ ಕಾಣತೊಡಗಿದೆ. ಸಬ್‍ರಿಜಿಸ್ಟ್ರರ್ ಆಸ್ಪತ್ರೆಗಳಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆಗಳು ತೀವ್ರಗೊಳ್ಳತೊಡಗಿವೆ.

ಕುಸಿದು ಬಿದ್ದಿದ್ದ ಆಟೋಮೊಬೈಲ್ ಕ್ಷೇತ್ರವು ಕೂಡ ಪುಟಿದೇಳುತ್ತಿದ್ದು ಲಾಕ್‍ಡೌನ್ ತೆರವಾದ ದಿನದಿಂದಲೇ ವಾಹನಗಳ ನೋಂದಣಿ ಪ್ರಮಾಣ 2ರಿಂದ ಮೂರು ಪಟ್ಟು ಹೆಚ್ಚಾಗಿದ್ದು,ಸಾರಿಗೆ ಇಲಾಖೆಯ ಆದಾಯ ಸಂಗ್ರಹ ಗುರಿಯಲ್ಲಿ ಶೇ.75ರಷ್ಟು ಸಾಧನೆ ಸಾಧ್ಯವಾಗಿದೆ.

ಒಟ್ಟಾರೆ ಆರು ತಿಂಗಳು ಆರ್ಥಿಕ ಕುಸಿತ ಪರಿಣಾಮ ಭಾರೀ ಹೊಡೆತ ಬಿದ್ದಿದ್ದು ಮುಂದಿನ ಮಾರ್ಚ್ ಆರ್ಥಿ ವಾರ್ಷಂತ್ಯಕ್ಕೆ ಎಲ್ಲ ವಲಯಗಳಲ್ಲೂ ಆರ್ಥಿಕ ಚಟುವಟಿಕೆಗಳು ಸಕ್ರೀಯಗೊಂಡು ರಾಜ್ಯದ ಆರ್ಥಿಕ ಕ್ಷೇತ್ರ ಪುನಶ್ಚೇತನಗೊಳ್ಳುವ ಸಾಧ್ಯತೆಗಳು ಗೋಚರಿಸತೊಡಗಿವೆ.

LEAVE A REPLY

Please enter your comment!
Please enter your name here