ವೇತನ ಹೆಚ್ಚಳ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ನಗರದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಹತ್ತಿಕ್ಕಲು ಜಿಲ್ಲಾ ಕೇಂದ್ರಗಳಲ್ಲಿ ಆಶಾ ಕಾರ್ಯಕರ್ತೆಯರನ್ನು ತಡೆ ಹಿಡಿಯಲಾಗಿತ್ತು.
ತುಮಕೂರು, ಚಿಕ್ಕಬಳ್ಳಾಪುರ ಮುಂತಾದ ಕಡೆ ಕಾರ್ಯಕರ್ತೆಯರನ್ನು ಪ್ರತಿಭಟನೆಗೆ ಬರದಂತೆ ನೋಡಿಕೊಂಡರೂ ನಗರಕ್ಕೆ ಆಗಮಿಸಿದ ಸಾವಿರಾರು ಕಾರ್ಯಕರ್ತೆಯರು ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್‍ವರೆಗೆ ಜಾಥಾ ನಡೆಸಿ ಮಾಸಿಕ ವೇತನ ಹೆಚ್ಚಳ ಮಾಡುವಂತೆ ಆಗ್ರಹಿಸಿದರು.
ಕೊರೊನಾ ಸಂಕಷ್ಟದ ನಡುವೆ ತಮ್ಮ ಪ್ರಾಣ ಪಣಕ್ಕಿಟ್ಟು ಆಶಾ ಕಾರ್ಯಕರ್ತೆಯರು ಮುಂಚೂಣಿಯಲ್ಲಿ ನಿಂತು ಕಾರ್ಯ ನಿರ್ವಹಿಸಿದ್ದರೂ ಸರ್ಕಾರ ಸರಿಯಾದ ವೇತನ ನೀಡುತ್ತಿಲ್ಲ. ಕೇವಲ ಅನುಕಂಪ ತೋರಿಸುವ ಮಾತನಾಡುತ್ತಿದೆ. ಹೂ ಮಳೆ ಸುರಿಸುವುದರಿಂದ ನಮಗೆ ಯಾವುದೆ ಪ್ರಯೋಜನವಾಗುತ್ತಿಲ್ಲ.
ಪಕ್ಕದ ತಮಿಳುನಾಡು, ಆಂಧ್ರದಲ್ಲಿ ಆಶಾ ಕಾರ್ಯಕರ್ತೆಯರಿಗೆ 12 ಸಾವಿರ ಮಾಸಿಕ ವೇತನ ನೀಡಲಾಗುತ್ತಿದೆ. ಆದರೆ, ನಮ್ಮಲ್ಲಿ ಕೇವಲ 6 ಸಾವಿರ ರೂ. ನೀಡುವ ಮೂಲಕ ವಂಚಿಸಲಾಗುತ್ತಿದೆ ಎಂದು ಸಂಘದ ಕಾರ್ಯದರ್ಶಿ ಡಿ. ನಾಗಲಕ್ಷ್ಮೀ ತಿಳಿಸಿದರು.
ವೇತನ ಹೆಚ್ಚಳಕ್ಕೆ ಆಗ್ರಹಿಸಿ ಈ ಹಿಂದೆ ಹಲವಾರು ಭಾರಿ ಪ್ರತಿಭಟನೆ ನಡೆಸಿದರೂ ಸರ್ಕಾರ ಭರವಸೆ ನೀಡಿದ್ದನ್ನೂ ಬಿಟ್ಟು ಬೇಡಿಕೆ ಈಡೇರಿಸಿಲ್ಲ. ಅನಿವಾರ್ಯವಾಗಿ ನಾವು ಮತ್ತೆ ಬೀದಿಗಿಳಿದು ಹೋರಾಟ ಮಾಡುತ್ತಿದ್ದೇವೆ.
40 ಸಾವಿರಕ್ಕು ಹೆಚ್ಚು ಕಾರ್ಯಕರ್ತೆಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆರೋಗ್ಯ ಸಮೀಕ್ಷೆ ಸೇರಿದಂತೆ ವಿವಿಧ ಕೆಲಸಗಳಲ್ಲಿ ಬಳಸಿಕೊಳ್ಳುವ ನಮಗೆ ಜೀವನ ಭದ್ರತೆ ಇಲ್ಲದಂತಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕು. ಕನಿಷ್ಠ ವೇತನ ನೀಡಬೇಕು ಎಂದು ಆಗ್ರಹಿಸಿದರು