ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರಿಗೆ ಇತ್ತೀಚೆಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಇದೀಗ ಅವರು ಕೈಗವಸು ಹಾಕದೆ ಕಡತಗಳನ್ನು ಪರಿಶೀಲನೆ ಮಾಡಿದ್ದಕ್ಕೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಕಾಂಗ್ರೆಸ್ ಗೋವಾ ಸಿಎಂ ಪ್ರಮೋದ್ ಸಾವಂತ್ ಅವರ ಫೋಟೊ ಒಂದನ್ನು ಅಪ್‌ಲೋಡ್ ಮಾಡಿದ್ದು, ಅದರಲ್ಲಿ ಕೈಗವಸು ಹಾಕದೆ ಕಡತವನ್ನು ಪರಿಶೀಲನೆ ಮಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸಿದೆ. ಅದನ್ನು ನೋಡಿದ ಕಾಂಗ್ರೆಸ್ ನಾಯಕರು ಅವರ ನಡೆ ಬಗ್ಗೆ ಸಾಕಷ್ಟು ಟೀಕೆ ಮಾಡಿದ್ದಾರೆ.
ಗೋವಾ ಪ್ರದೇಶ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಗಿರೀಶ್ ಚೋಡಂಕಾರ್ ಟ್ವೀಟ್ ಮಾಡಿದ್ದು, ಕೊರೊನಾ ಸೋಂಕು ತಗುಲಿದರೂ ಬೇರೆಎಯವರ ಬಗ್ಗೆ ಸಾವಂತ್‌ಗೆ ಕಿಂಚಿತ್ತೂ ಕಾಳಜಿ ಇದ್ದಂತೆ ತೋರುತ್ತಿಲ್ಲ. ಅವರು ಕೈಗವಸನ್ನು ಯಾಕಾಗಿ ಹಾಕಿಲ್ಲ. ಇದರಿಂದಾಗಿ ಅವರ ಕಚೇರಿಯಲ್ಲಿರುವ ಬೇರೆ ಸಿಬ್ಬಂದಿಗೂ ಕೊರೊನಾ ಸೋಂಕು ತಗುಲುವ ಸಾಧ್ಯತೆ ಇದೆ ಎಂದು ಬರೆದುಕೊಂಡಿದ್ದಾರೆ.
ಪ್ರಮೋದ್ ಸಾವಂತ್ ಅವರಿಗೆ ಸೆಪ್ಟೆಂಬರ್ 2 ರಂದು ಕೊರೊನಾ ಸೋಂಕು ದೃಢಪಟ್ಟಿತ್ತು. ನನಗೆ ಕೋವಿಡ್-19 ಪಾಸಿಟಿವ್ ಇರುವುದು ಪತ್ತೆಯಾಗಿದೆ. ಆದರೆ ಯಾವುದೇ ರೋಗಲಕ್ಷಣಗಳು ಇಲ್ಲದೇ ಇರುವ ಕಾರಣ ಮನೆಯಲ್ಲಿಯೇ ಇಸೊಲೇಶನ್ ನಲ್ಲಿ ಇರುತ್ತೇನೆ.
ಮನೆಯಲ್ಲಿ ಇದ್ದುಕೊಂಡು ಕೆಲಸ ನಿರ್ವಹಿಸುತ್ತೇನೆ. ನನ್ನ ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಅಗತ್ಯ ಕ್ರಮ ಕೈಗೊಳ್ಳಿ ಎಂದು ಪ್ರಮೋದ್ ಸಾವಂತ್ ಟ್ವೀಟ್ ಮಾಡಿದ್ದರು.