ಕೋಲಾರ: ಲಕ್ಷಾಂತರ ರೂಪಾಯಿಯ ಟೊಮೆಟೊ ಬೆಳೆಗೆ ವಿಷವಿಟ್ಟ ದುರುಳರು

0

ದುಷ್ಕರ್ಮಿಗಳು ಎರಡು ಎಕರೆ ಟೊಮೆಟೊ ತೋಟಕ್ಕೆ ವಿಷಕಾರಿ ಕಳೆನಾಶಕ ಸಿಂಪಡಿಸಿ ವಿಕೃತಿ ಮೆರೆದಿರುವ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಎಳಸಂದ್ರ ಗ್ರಾಮದಲ್ಲಿ ನಡೆದಿದೆ.

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಎಳೆಸಂದ್ರ ಗ್ರಾಮದ ಅರ್ಜುನ್ ಎಂಬುವವರಿಗೆ ಸೇರಿರುವ 2 ಎಕರೆಯಷ್ಟು ಟೊಮೆಟೊ ತೋಟಕ್ಕೆ ಕಿಡಿಗೇಡಿಗಳು ಕಳೆದ ರಾತ್ರಿ ಕಳೆ ನಾಶಕ ಸಿಂಪಡಣೆ ಮಾಡಿದ್ದಾರೆ. ಇದರಿಂದ ಸುಮಾರು 10 ಸಾವಿರ ಟೊಮೆಟೊ ಸಸಿಗಳು ಫಸಲಿನ ಸಮೇತ ಒಣಗಲಾರಂಭಿಸಿವೆ. ಟೊಮೆಟೊ ಬೆಲೆ ಗಗನಕ್ಕೇರಿರುವ ಹಿನ್ನೆಲೆ ಉದ್ದೇಶಪೂರ್ವಕವಾಗಿ ಕಿಡಿಗೇಡಿಗಳು ಕಳೆ ನಾಶಕ ಸಿಂಪಡಣೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ ಅರ್ಜುನ್.

ಟೊಮೆಟೊಗೆ ಈಗ ಭಾರಿ ಡಿಮ್ಯಾಂಡ್ ಉಂಟಾಗಿದೆ. ಮಳೆಗಾಲದಲ್ಲಿ ಬಹುತೇಕ ತೋಟಗಳಲ್ಲಿ ಫಸಲಿಗೆ ಬಂದು ಟೊಮೊಟೊ ಉದುರುವುದರಿಂದ ಬೇಡಿಕೆ ಕುದುರುತ್ತದೆ. ಜೊತೆಗೆ, ಈ ಬಾರಿ ಹೊರ ರಾಜ್ಯಗಳಿಂದಲೂ ಟೊಮೊಟೊ ಬಾರದೆ ಇರುವುದರಿಂದ ಬೆಲೆ ಗಗನಕ್ಕೆ ಏರಿದೆ. ಹೀಗಿರುವಾಗ, ಇನ್ನೇನು ಕೆಲವೇ ದಿನಗಳಲ್ಲಿ ಲಾಭ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಅರ್ಜುನ್ ಅವರ ಕನಸು ನುಚ್ಚು ನೂರಾಗಿದೆ.

20 ಕೆ.ಜಿ ಟೊಮೆಟೊ ಬಾಕ್ಸ್ ಬೆಲೆ ಸಾವಿರ ಗಡಿ ದಾಟಿದ್ದು, ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಇದೇ ಸಮಯಕ್ಕಾಗಿ ಕಾದ ಕಿಡಿಗೇಡಿಗಳು ದುಷ್ಕೃತ್ಯ ಎಸಗಿದ್ದಾರೆ. ವಿಚಾರ ತಿಳಿದ ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತನ ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಕಿಡಿಗೇಡಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

LEAVE A REPLY

Please enter your comment!
Please enter your name here