ಕ್ರಿಕೆಟ್ ಮೈದಾನಕ್ಕೆ ಭಾರತದ ಮಾಜಿ ನಾಯಕ ಎಂಎಸ್ ಧೋನಿ ಮರಳಿರುವುದರಿಂದ ಈ ಬಾರಿ ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹೆಚ್ಚೇ ವಿಶೇಷ ಎನಿಸಲಿದೆ ಎಂದು ಟೀಮ್ ಇಂಡಿಯಾದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.
ಕೂಲ್ ಕ್ಯಾಪ್ಟನ್ ಧೋನಿ ಕ್ರಿಕೆಟ್ ಆಡದೆ ವರ್ಷವೇ ಕಳೆದಿದೆ. ಈಗ ಧೋನಿ ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸಿಯಾಗಿದೆ. ಆದರೆ ಸೆಪ್ಟೆಂಬರ್ 19ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆರಂಭವಾಗಲಿರುವ 13ನೇ ಆವೃತ್ತಿಯ ಐಪಿಎಲ್‌ನಲ್ಲಿ ಎಂಎಸ್‌ಡಿ, ಚೆನ್ನೈ ಸೂಪರ್ ಕಿಂಗ್ಸ್ ಪರ ಮೈದಾನಕ್ಕಿಳಿಯಲಿದ್ದಾರೆ.
‘ಒಬ್ಬ ಅಟಗಾರ ಮತ್ತು ವೀಕ್ಷಕನಾಗಿ ಈ ಟೂರ್ನಮೆಂಟ್ ಪ್ರತಿಯೊಬ್ಬರಿಗೂ ಹೆಚ್ಚೇ ವಿಶೇಷ ಎಂದು ನನಗನ್ನಿಸುತ್ತದೆ. ಎಂಎಸ್ ಧೋನಿ ಕ್ರಿಕೆಟ್ ಮೈದಾನಕ್ಕೆ ಮರಳುತ್ತಿರುವುದು ನೋಡಲು ಖುಷಿಯಾಗುತ್ತಿದೆ,’ ಎಂದು ಫ್ಲಿಪ್‌ಕಾರ್ಟ್ ವಿಡಿಯೋದಲ್ಲಿ ಪವರ್‌ಪ್ಲೇ ವಿತ್ ಚಾಂಪಿಯನ್ಸ್ ಶೋನಲ್ಲಿ ಸೆಹ್ವಾಗ್ ಹೇಳಿಕೊಂಡಿದ್ದಾರೆ.
ಕಳೆದ ಆಗಸ್ಟ್ 15ರಂದು ಧೋನಿ ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸಿದ್ದರು. ಮಾಹಿ ಕಡೇಯ ಪಂದ್ಯ ಆಡಿದ್ದೆಂದರೆ 2019ರ ಜುಲೈ 9ರಂದು. ಆವತ್ತು ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಮತ್ತು ಭಾರತ ಮುಖಾಮುಖಿಯಾಗಿತ್ತು. ಅಂದಿನ ಪಂದ್ಯದಲ್ಲಿ ಭಾರತ 18 ರನ್ ಸೋಲನುಭವಿಸಿತ್ತು. ಅದಾಗಿ ಧೋನಿ ಯಾವುದೇ ಪಂದ್ಯಗಳಲ್ಲಿ ಪಾಲ್ಗೊಂಡಿರಲಿಲ್ಲ.
ಸೆಪ್ಟೆಂಬರ್ 19ರಿಂದ ಆರಂಭಗೊಳ್ಳುವ ಐಪಿಎಲ್ 2020, ನವೆಂಬರ್ 10ರಂದು ಕೊನೆಗೊಳ್ಳಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಹಾಲಿ ರನ್ನರ್ಸ್ ಚೆನ್ನೈ ಸೂಪರ್ ಕಿಂಗ್ಸ್ ಕಾದಾಡಲಿವೆ. ಈ ಪಂದ್ಯದಲ್ಲಿ ಸಿಎಸ್‌ಕೆ ನಾಯಕ ಎಂಎಸ್‌ಡಿ ಆಡಲಿದ್ದಾರೆ