ಕ್ರೀಡಾಪಟುಗಳಿಗೆ ನೆರವಾಗಲು ಬಂದಿದೆ ಬ್ಯಾಟರಿ ಚಾಲಿತ ಮಾಸ್ಕ್!

0

ಕರೊನಾ ವೈರಸ್ ಹಾವಳಿಯ ನಡುವೆ ಎಲ್ಲೆಡೆ ಮಾಸ್ಕ್ ಧರಿಸುವುದು ಕಡ್ಡಾಯವೆನಿಸಿದೆ. ಆದರೆ ಇದರಿಂದ ಕೆಲವರಿಗೆ ಉಸಿರಾಟದ ತೊಂದರೆಯೂ ಎದುರಾಗುತ್ತಿದೆ. ಇದನ್ನು ನೀಗಿಸಲು, ಅದರಲ್ಲೂ ಮುಖ್ಯವಾಗಿ ಮುಂಬರುವ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಕ್ರೀಡಾಪಟುಗಳಿಗೆ ಮಾಸ್ಕ್‌ನಿಂದ ಯಾವುದೇ ತೊಂದರೆ ಎದುರಾಗದಿರುವಂತೆ ನೋಡಿಕೊಳ್ಳಲು ಹೊಸ ಮಾಸ್ಕ್ ಒಂದು ಆವಿಷ್ಕಾರಗೊಂಡಿದೆ. ಅದು ಬ್ಯಾಟರಿ ಚಾಲಿತ ಮಾಸ್ಕ್ ಆಗಿರುತ್ತದೆ ಎಂಬುದು ವಿಶೇಷ.

ಕ್ರೀಡಾಪಟುಗಳು ಮಾಸ್ಕ್ ಧರಿಸುವುದರಿಂದ ಉಸಿರಾಟದ ತೊಂದರೆ ಎದುರಾಗುವುದನ್ನು ತಪ್ಪಿಸಲು ಬ್ಯಾಟರಿ ಚಾಲಿತ ಮಾಸ್ಕ್ ಮೂಲಕ ಹೆಚ್ಚಿನ ಆಮ್ಲಜನಕದ ಪೂರೈಕೆ ಮಾಡಲಾಗುತ್ತದೆ. ‘ಮೋಕ್ಷಾ’ ಎಂದು ಈ ಬ್ಯಾಟರಿ ಚಾಲಿತ ಮಾಸ್ಕ್‌ಗೆ ಹೆಸರಿಡಲಾಗಿದೆ. ಐಐಟಿ-ಖಾರಗ್‌ಪುರದ ಹಳೆ ವಿದ್ಯಾರ್ಥಿಗಳು ಈ ಮಾಸ್ಕ್ ಸಿದ್ಧಪಡಿಸಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿರುವ ಭಾರತದ ಕ್ರೀಡಾಪಟುಗಳು ತರಬೇತಿಯ ವೇಳೆ ಪ್ರಾಯೋಗಿಕವಾಗಿ ಈ ಮಾಸ್ಕ್ ಬಳಸಲು ಭಾರತೀಯ ಒಲಿಂಪಿಕ್ಸ್ ಸಂಸ್ಥೆ (ಐಒಎ) ಈಗಾಗಲೆ ಅನುಮತಿ ನೀಡಿದೆ. ಐಐಟಿ-ಖಾರಗ್‌ಪುರದ ಹಳೆ ವಿದ್ಯಾರ್ಥಿ ಪೀಯುಷ್ ಅಗರ್ವಾಲ್ ಈಗ ‘ಪಿಕ್ಯೂಆರ್ ಟೆಕ್ನಾಲಜಿ ಪ್ರೈವೆಟ್ ಲಿಮಿಟೆಡ್’ ಹೆಸರಿನ ಸ್ಟಾರ್ಟ್‌ಅಪ್ ನಡೆಸುತ್ತಿದ್ದು, ಅದಕ್ಕೆ ‘ಕವಚ್ ಮಾಸ್ಕ್ ಪ್ರಾಜೆಕ್ಟ್’ನ ಅಡಿಯಲ್ಲಿ ಸರ್ಕಾರದಿಂದ ಅನುದಾನ ಪೂರೈಕೆಯಾಗಿದೆ. ಐಐಟಿ ದೆಹಲಿ ಜತೆಗೂಡಿ ಈ ಸ್ಟಾರ್ಟ್‌ಅಪ್ ಸದ್ಯ ಕಾರ್ಯನಿರ್ವಹಿಸುತ್ತಿದೆ. ದೆಹಲಿಯ ವಾಯು ಮಾಲಿನ್ಯವನ್ನು ಎದುರಿಸಲು ಕಳೆದ 2 ವರ್ಷಗಳಿಂದಲೂ ಈ ಸ್ಟಾರ್ಟ್‌ಅಪ್ ಕಂಪನಿ ಮಾಸ್ಕ್‌ಗಳನ್ನು ಸಿದ್ಧಪಡಿಸುತ್ತಿದೆ.

ಬ್ಯಾಟರಿ ಚಾಲಿತ ಮಾಸ್ಕ್ ಒಂದರ ಬೆಲೆ 2,200 ರೂಪಾಯಿ ಆಗಿದ್ದು, ಇದನ್ನು ಮೊದಲಿಗೆ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿರುವ ಕೆಲ ಕ್ರೀಡಾಪಟುಗಳಿಗೆ ಪ್ರಾಯೋಗಿಕವಾಗಿ ನೀಡಲಾಗುತ್ತಿದೆ. ಅವರಿಗೆ ಯಾವುದೇ ರೀತಿಯ ಉಸಿರಾಟದ ತೊಂದರೆ ಎದುರಾಗದಿದ್ದರೆ ಇದನ್ನು ನಂತರ ಐಒಎ ವೈದ್ಯಕೀಯ ಆಯೋಗದ ಅಂಗೀಕಾರದ ಮೇರೆಗೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿರುವ ಮತ್ತು ಇತರ ಎಲ್ಲ ಕ್ರೀಡಾಪಟುಗಳಿಗೆ ಪೂರೈಕೆ ಮಾಡಲಾಗುವುದು ಎಂದು ಐಒಎ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ತಿಳಿಸಿದ್ದಾರೆ.

ಕ್ರೀಡಾಪಟುಗಳು ಯಾವುದೇ ಉಸಿರಾಟದ ತೊಂದರೆ ಎದುರಿಸದಿದ್ದರೆ ನಾವು ಮತ್ತೆ ಸಾವಿರ ಮಾಸ್ಕ್ ತರಿಸಿಕೊಳ್ಳುವೆವು. ಇದೀಗ ಪ್ರಾಯೋಗಿಕವಾಗಿ 10-15 ಕ್ರೀಡಾಪಟುಗಳಿಗೆ ಮಾತ್ರ ಬ್ಯಾಟರಿ ಚಾಲಿತ ಮಾಸ್ಕ್ ನೀಡಲಾಗಿದೆ. ಅವರು ಮೊದಲಿಗೆ 10 ದಿನಗಳ ಕಾಲ ಇದೇ ಮಾಸ್ಕ್ ಧರಿಸಿ ತರಬೇತಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ವಿವರಿಸಿದ್ದಾರೆ.

LEAVE A REPLY

Please enter your comment!
Please enter your name here