ಖಾಸಗಿ ಸಹಭಾಗಿತ್ವದಲ್ಲಿ ಕೋವಿಡ್‌ ಪ್ರಯೋಗಾಲಯ ಸ್ಥಾಪನೆಗೆ ಟೆಂಡರ್ – ಸಚಿವ ಸುಧಾಕರ್

0

 ಖಾಸಗಿ ಸಹಭಾಗಿತ್ವದಲ್ಲಿ ಕೋವಿಡ್ ಪ್ರಯೋಗಾಲಗಳ ಸ್ಥಾಪನೆಗೆ ಸರ್ಕಾರ ನಿರ್ಧರಿಸಿದ್ದು, ವಾರದಲ್ಲಿ ಟೆಂಡರ್ ಕರೆಯಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.

ಯೂರೋಫಿನ್ಸ್‌ ಕ್ಲಿನಿಕಲ್‌ ಜೆನೆಟಿಕ್‌ ಇಂಡಿಯಾ ಸಂಸ್ಥೆ ವೈಟ್‌ಫೀಲ್ಡ್‌ನಲ್ಲಿ ಸ್ಥಾಪಿಸಿರುವ ನೂತನ ಕೋವಿಡ್‌ ಪರೀಕ್ಷಾ ಪ್ರಯೋಗಾಲಯ ಉದ್ಘಾಟಿಸಿ ಶುಕ್ರವಾರ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆ ಮೇರೆಗೆ ಕೊರೋನಾ ಸೋಂಕಿತರ ಪರೀಕ್ಷೆಯನ್ನು ಮೂರು ಪಟ್ಟು ಹೆಚ್ಚಿಸಲು ನಿರ್ಧರಿಸಿ ಅಗತ್ಯ ಮೂಲ ಸೌಲಭ್ಯ ಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಆ ನಿಟ್ಟಿನಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಪ್ರಯೋಗಾಲಯ ಸ್ಥಾಪಿಸಲಾಗುತ್ತಿದೆ. ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಇಲಾಖೆಗಳು ಜಂಟಿಯಾಗಿ ಈ ಕಾರ್ಯಕ್ರಮ ರೂಪಿಸಿದ್ದು ವಾರದೊಳಗೆ ಟೆಂಡರ್‌ ಆಹ್ವಾನಿಸಲಾಗುವುದು ಎಂದರು.

ಕೇವಲ ಆರು ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ 144 ಕೋವಿಡ್‌ ಪರೀಕ್ಷಾ ಲ್ಯಾಬ್‌ಗಳನ್ನು ಆರಂಭಿಸಲಾಗಿದೆ. ಈಗ ಉದ್ಘಾಟನೆಗೊಂಡ ಯುರೋಫಿನ್ಸ್‌ ಲ್ಯಾಬ್‌ 145 ನೆಯದು. ಇಲ್ಲಿ ದಿನಕ್ಕೆ 5 ಸಾವಿರ ಟೆಸ್ಟ್ ಭರವಸೆಯನ್ನು ಕಂಪನಿ ನೀಡಿದೆ. ಸರ್ಕಾರ ಅಗತ್ಯ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.

ರಾಜ್ಯದಲ್ಲಿ ಕೊರೋನ ನಿಯಂತ್ರಣಕ್ಕಾಗಿ ಸಾಕಷ್ಟು ಅರಿವು ಮೂಡಿಸಿದರೂ ಜನರು ಜಾಗೃತರಾಗದ ಕಾರಣ ಸೋಂಕು ಪ್ರಕರಣ ಹೆಚ್ಚುತ್ತಿವೆ. ಹೀಗಾಗಿ ಮಾಸ್ಕ್‌ ಧರಿಸದ, ಸರ್ಕಾರದ ಮಾರ್ಗಸೂಚಿ ಪಾಲಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದು ದಂಡದ ಪ್ರಮಾಣ ಹೆಚ್ಚಿಸಲಾಗಿದೆ ಎಂದರು.

ಪಾಸಿಟಿವ್‌ ಪ್ರಕರಣಗಳು ಹೆಚ್ಚಿದ್ದರೂ ಸಾವಿನ ಪ್ರಮಾಣದಲ್ಲಿ ಶೇ.1.52 ರಷ್ಟಿದ್ದು ನಿಯಂತ್ರಣ ಸಾಧಿಸಿದ್ದೇವೆ. ಅಲ್ಲದೇ, 50 ಲಕ್ಷ ಕೋವಿಡ್‌ ಪರೀಕ್ಷೆ ನಡೆಸುವ ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದೇವೆ. ಮುಂದಿನ ದಿನಗಳಲ್ಲಿ ದಿನಕ್ಕೆ 1.5 ಲಕ್ಷ ಪರೀಕ್ಷಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲಿದ್ದೇವೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here